ಘಾಟಿ ದುರಂತಕ್ಕೆ ಮೂವರು ಬಲಿ: ಕುಟುಂಬದ ಆಕ್ರಂದನ!
– ಹುಲಿಕಲ್ ಘಾಟಿಯಲ್ಲಿ ಕಾಮಗಾರಿ ವೇಳೆ ಕುಸಿದ ತಡೆಗೋಡೆ
– ಘಾಟಿ ಸಂಚಾರ ಬಂದ್: ಸ್ಥಳಕ್ಕೆ ಶಾಸಕ ಆರಗ ಭೇಟಿ, ಪರಿಹಾರ ಘೋಷಣೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೊಸನಗರ: ಮಲೆನಾಡಲ್ಲಿ ಭೀಕರ ದುರಂತ ಸಂಭವಿಸಿದೆ. ಘಾಟಿ ಕಾಮಗಾರಿ ವೇಳೆ ಹುಲಿಕಲ್ ಘಾಟಿ ವಾಲ್ ಕುಸಿತಗೊಂಡಿದ್ದು, ಈ ದುರಂತದಲ್ಲಿ ನಾಲ್ವರನ್ನು ರಕ್ಷಿಸಿದ್ದು 3 ಮಂದಿ ಮೃತಪಟ್ಟಿದ್ದಾರೆ. 2025ರ ಮಳೆಗಾಲದ ವೇಳ ಮೊದಲ ಘಾಟಿಯಲ್ಲಿ ಭಾರಿ ಪ್ರಮಾಣದ ಕುಸಿತ ಉಂಟಾಗಿತ್ತು. ಘಾಟಿಯ ಮೇಲ್ಬಾಗದಲ್ಲಿ ತಡೆಗೋಡೆ ನಿರ್ಮಿಸಿ ಘಾಟಿಯನ್ನು ಬಂದೋಬಸ್ತ್ ಮಾಡುವ ಕಾಮಗಾರಿ ಪ್ರಗತಿ ಹಂತದಲ್ಲಿತ್ತು. ದುರಸ್ಥಿ ಕಾಮಗಾರಿಯ ಸ್ಥಳದಲ್ಲಿ 7 ಮಂದಿ ಇದ್ದರು.
ಘಟನೆ ನಡೆದಿದ್ದು ಹೇಗೆ..?
ಹೊಸನಗರ ತಾಲೂಕಿನ ಹುಲಿಕಲ್ ಘಾಟಿಯ ಶ್ರೀ ಚಂಡಿಕಾಂಬಾ ದೇವಸ್ಥಾನದ ಹಿಂಭಾಗದ ರಸ್ತೆಯ ತಿರುವಿನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಸುಮಾರು 100 ಅಡಿಗೂ ಹೆಚ್ಚು ತಳಪಾಯದಿಂದ ತಡೆ ಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಈ ಮಾರ್ಗದಲ್ಲಿ ಘನ ವಾಹನಗಳನ್ನು ನಿಷೇದಿಸಲಾಗಿತ್ತು. ಗುರುವಾರ ಸಂಜೆ 6-30 ಘಂಟೆ ಸುಮಾರಿಗೆ ತಡೆ ಗೋಡೆ ನಿರ್ಮಾಣಕ್ಕೆ ಸುಮಾರು 60 ಅಡಿ ಆಳದಲ್ಲಿ ಮಣ್ಣು ತೆಗೆದು ಬುಡದಲ್ಲಿ ಕಾಂಕ್ರೀಟ್ ಕೆಲಸ ಮಾಡುವ ಸಂದರ್ಭದಲ್ಲಿ ರಸ್ತೆ ಬದಿಗಿದ್ದ ಧರೆ ಕುಸಿದು ಮೂರು ಜನರು ಮಣ್ಣಿನಲ್ಲಿ ಸಮಾಧಿಯಾಗಿದ್ದಾರೆ. ಘಟನೆ ನಡೆದ ಸ್ಥಳದಲ್ಲೇ ಇದ್ದ ಕೆಲವು ಕೆಲಸಾಗರರು ಮಣ್ಣಿನಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ಇನ್ನಿಬ್ಬರನ್ನು ರಕ್ಷಿಸಿದ್ದಾರೆ. ಗಾಯಳುಗಳಾದ ಅವರನ್ನು ಆಂಬುಲೆನ್ಸ್ ಮೂಲಕ ನಗರ ಆಸ್ಪತ್ರೆಗೆ ಕಳುಹಿಸಲಾಗಿದೆ.
ಈ ಸಂದರ್ಭದಲ್ಲಿ 7 ಜನರು ಕೆಲಸ ನಿರ್ವಹಿಸುತ್ತಿದ್ದು, ಧರೆ ಕುಸಿತವಾಗುತ್ತಿದ್ದಂತೆ ಇಬ್ಬರು ಅದೃಷ್ಟವಶಾತ್ ಜಿಗಿದು ಪಾರಾಗಿದ್ದಾರೆ. ಮೂವರು ಮಣ್ಣು ಪಾಲಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರನ್ನು ಪ್ರಾಣಪಾಯದಿಂದ ರಕ್ಷಿಸಲಾಗಿದೆ. ಈ ಕಾಮಗಾರಿಯನ್ನು ಸಂಪೂರ್ಣ ನೋಡಿಕೊಳ್ಳುತ್ತಿದ್ದ ನಗರ ಚಕ್ಕಾರಿನ ರಾಘು ಸಹ ದುರಂತ ಸಾವು ಕಂಡಿದ್ದಾರೆ. ಇನ್ನಿಬ್ಬರು ಹಾವೇರಿ ಜಿಲ್ಲೆಯ ನೆಲಗಲು ಗ್ರಾಮದ ರಾಜು ಮತ್ತು ಶಬ್ಬಿರ್ ಸಹ ಮಣ್ಣು ಪಾಲಾಗಿದ್ದಾರೆ ಎಂದು ತಿಳಿಯಲಾಗಿದೆ.
ಘಾಟಿ ಸಂಚಾರ ಬಂದ್: ಬದಲಿ ಮಾರ್ಗ ಬಳಸಲು ಸೂಚನೆ
ದುರಂತದಿಂದಾಗಿ ಹುಲಿಕಲ್ ಘಾಟ್ ರಸ್ತೆಯನ್ನು (ಕುಂದಾಪುರ -ಶಿವಮೊಗ್ಗ ) ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಸದ್ಯ ಯಾವುದೇ ವಾಹನ ಗಳ ಸಂಚಾರಕ್ಕೆ ಅವಕಾಶವಿಲ್ಲ. ಮುಂದಿನ ಆದೇಶ ದವರೆಗೆ ಕಾಯಬೇಕಿದೆ. ಪರ್ಯಾಯವಾಗಿ ಕೊಲ್ಲೂರು ಘಾಟ್ ಮೇಲೆ ಪಯಣ ಬೆಳೆಸಲು ನಗರ-ಕೊಲ್ಲೂರು ಮಾರ್ಗ ಸೂಚಿಸಿದೆ. ಹಾಗೂ ಆಗುಂಬೆ ಘಾಟ್ ರಸ್ತೆ ಬಳಸಬಹುದಾಗಿದೆ. ಮೂರು ತಿಂಗಳ ಕಾಲ ಬಂದ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ದುರಂತ ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ ಭೇಟಿ
ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾದ ಹುಲಿಕಲ್ಲು ಘಾಟಿಯಲ್ಲಿ ಗುರುವಾರ ಸಂಜೆ ಸಂಭವಿಸಿದ ಘಟನಾ ಸ್ಥಳಕ್ಕೆ ತಕ್ಷಣವೇ ಭೇಟಿ ನೀಡಿದ ಶಾಸಕ ಆರಗ ಜ್ಞಾನೇಂದ್ರ ಅವರು ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಹುಲಿಕಲ್ಲು ಘಾಟಿಯಲ್ಲಿ ಶಾಶ್ವತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಕಾಮಗಾರಿ ಪ್ರಗತಿಯಲ್ಲಿದ್ದಾಗ ಈ ಅನಿರೀಕ್ಷಿತ ದುರಂತ ಸಂಭವಿಸಿರುವುದು ಅತ್ಯಂತ ವಿಷಾದನೀಯ ಎಂದರು. ಮೃತ ಕಾರ್ಮಿಕರ ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಅವರು, ರಕ್ಷಣಾ ಕಾರ್ಯದ ಬಗ್ಗೆ ಅಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿದರು. ಸದ್ಯ ಮುನ್ನೆಚ್ಚರಿಕಾ ಕ್ರಮವಾಗಿ ಘಾಟಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದ್ದು, ಪ್ರಯಾಣಿಕರಿಗೆ ಪರ್ಯಾಯ ಮಾರ್ಗ ಬಳಸಲು ಸೂಚಿಸಲಾಗಿದೆ.
5 ಕೋಟಿ ವೆಚ್ಚದಲ್ಲಿ ನಡೆಯುತ್ತಿತ್ತು ಕಾಮಗಾರಿ!
ಸುಮಾರು 5 ಕೋಟಿ ರೂಪಾಯಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಜೆಸಿಬಿ ಮೂಲಕ ಮಣ್ಣು ತೆಗೆಯುತ್ತಿದ್ದ ಸಂದರ್ಭದಲ್ಲಿ ಮೇಲ್ಭಾಗದ ಗುಡ್ಡ ಹಠಾತ್ ಕುಸಿದು ಬಿದ್ದಿದ್ದರಿಂದ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡರು. ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಪ್ರಾಣಾಪಾಯದಿಂದ ರಕ್ಷಿಸಿದರಾದರೂ, ತಮಿಳುನಾಡು ಮೂಲದ ಕಾರ್ಮಿಕರು ದುರದೃಷ್ಟವಶಾತ್ ಸಾವನ್ನಪ್ಪಿದ್ದಾರೆ.








