ಬೆಂಗಳೂರಿಂದ ಕಾರಲ್ಲಿ ಬಂದು ಹಳ್ಳಿಗಳಲ್ಲಿ ಕಳ್ಳತನ!
– ಕೊಪ್ಪ ಪೊಲೀಸರ ಕಾರ್ಯಚರಣೆಯಲ್ಲಿ ಖತರ್ನಾಕ್ ಕಳ್ಳ ಬಂಧನ
– ಕೊಪ್ಪ, ಶೃಂಗೇರಿ ತಾಲೂಕಲ್ಲಿ ದಿನವೂ ಮಳೆ
– ಚಿಕ್ಕಮಗಳೂರು: ಎರಡು ಪ್ರತ್ಯೇಕ ರಸ್ತೆ ಅಪಘಾತ; ಇಬ್ಬರ ಸಾವು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕೊಪ್ಪ: ಮಲೆನಾಡು ಭಾಗದಲ್ಲಿ ನಡೆದ ಸರಣಿ ಮನೆ ಕಳ್ಳತನ ಪ್ರಕರಣವನ್ನು ಕೊಪ್ಪ ಪೊಲೀಸರು ಯಶಸ್ವಿಯಾಗಿ ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಕೊಪ್ಪ ತಾಲೂಕಿನ ಸಿದ್ದರಮಠ ಕಲ್ಕೆರೆ, ಹರಿಹರಪುರದ ನಾಗಲಾಪುರ ಹಾಗೂ ಬಿಲಗೆದ್ದೆ ಗ್ರಾಮಗಳಲ್ಲಿ ನಡೆದ ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಕೊಪ್ಪ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದರು.
ತನಿಖೆಯ ಹಾದಿಯಲ್ಲಿ ಬೆಂಗಳೂರಿನ ಬನ್ನೇರುಘಟ್ಟ ನಿವಾಸಿ ಮಹಮ್ಮದ್ ಹನೀಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಲೆನಾಡು ಪ್ರದೇಶಕ್ಕೆ ಬಂದು ಪೂರ್ವ ಯೋಜನೆಯೊಂದಿಗೆ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದನೆಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಬಂಧಿತನಿಂದ ಸುಮಾರು ₹6 ಲಕ್ಷ ಮೌಲ್ಯದ ಕಾರು ಹಾಗೂ ₹12 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನಷ್ಟು ಪ್ರಕರಣಗಳಲ್ಲಿ ಆರೋಪಿಯ ಭಾಗವಹಿಸುವಿಕೆ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಕೊಪ್ಪ ಪೊಲೀಸರ ಈ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.
ಕೊಪ್ಪ, ಶೃಂಗೇರಿ ತಾಲೂಕಲ್ಲಿ ದಿನವೂ ಮಳೆ!
ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ದಿನ ಬಿಡದೆ ಮಳೆ ಆಗುತ್ತಿದೆ. ಕೊಪ್ಪ, ಶೃಂಗೇರಿ ತಾಲೂಕಲ್ಲಿ ಈ ಬಾರಿ ದಿನವೂ ಮಳೆ ಆಗುತ್ತಿದೆ. ಮಳೆ ಕಾರಣದಿಂದ ಅನೇಕ ಟಿವಿ, ಫ್ರಿಡ್ಜ್ ಹಾಳಾಗಿವೆ.
•ಚಿಕ್ಕಮಗಳೂರು: ಎರಡು ಪ್ರತ್ಯೇಕ ರಸ್ತೆ ಅಪಘಾತ; ಇಬ್ಬರ ಸಾವು
ಚಿಕ್ಕಮಗಳೂರು: ಜಿಲ್ಲೆಗೆ ಸಂಬಂಧಿಸಿದಂತೆ ಎರಡು ಕಡೆ ಪ್ರತ್ಯೇಕ ರಸ್ತೆ ಅಪಘಾತಗಳು ಸಂಭವಿಸಿದ್ದು, ಇದರಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಮೂಡಿಗೆರೆಯ ಕುನ್ನಳ್ಳಿ ಗ್ರಾಮದ ವಿನೋದ್ ಕೂಲಿ ಕೆಲಸ ಮಾಡಿಕೊಂಡಿದ್ದು, ತಮ್ಮ ಕೆಲಸ ಮುಗಿಸಿ, ಸ್ನೇಹಿತರಾದ ರಮೇಶ್ ಎನ್ನುವವರ ಜೊತೆಯಲ್ಲಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಹಳಸೆ ಕಡೆಯಿಂದ ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಬರುತ್ತಿದ್ದ ಬೈಕ್, ವಿನೋದ್ ಅವರ ಬೈಕಿಗೆ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ವಿನೋದ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಲಾಯಿತು.
ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಯಿತಾದರೂ, ವಿನೋದ್ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಆಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ವಿನೋದ್ ಅವರ ತಂದೆ ಹರಿಶ್ಚಂದ್ರ ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದು, ಹೇಳಿಕೆಯ ಆಧಾರದ ಮೇಲೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇ ರೀತಿ ಸಕ್ಕರಾಯಪಟ್ಟಣದ ಹತ್ತಿರ ಮತ್ತೊಂದು ಅಪಘಾತ ಸಂಭವಿಸಿದ್ದು, ಪಿಳ್ಳೆನಹಳ್ಳಿಯ ತಿಮ್ಮಯ್ಯ ಅವರು ಸಕ್ಕರಾಯಪಟ್ಟಣದ ಪ್ಲೇಗಿನಮ್ಮ ದೇವಾಲಯದ ಸಮೀಪ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ, ಚಿಕ್ಕಮಗಳೂರು ಕಡೆಯಿಂದ ಬರುತ್ತಿದ್ದ ಬೈಕ್ ತಿಮ್ಮಯ್ಯ ಅವರಿಗೆ ಢಿಕ್ಕಿ ಹೊಡೆದಿದೆ.
ಪರಿಣಾಮವಾಗಿ ತಿಮ್ಮಯ್ಯ ಅವರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಮತ್ತು ಹಾಸನದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಿಮ್ಮಯ್ಯ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ತಿಮ್ಮಯ್ಯ ಅವರ ಬಾವ ಸುರೇಶ್ ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದು, ಸುರೇಶ್ ಅವರ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.








