ಡ್ಯಾನ್ಸ್ ಮಾಡಿ ಮಕ್ಕಳಿಗೆ ಪಾಠ ಕಲಿಸುವ ಟೀಚರ್ ವಂದನಾ ರೈ!
ಕಾರ್ಕಳದ ವಂದನಾ ಟೀಚರ್ ಈಗ ಎಲ್ಲೆಡೆ ಫೇಮಸ್
ಕರೋನಾ ವೇಳೆ ಹುಟ್ಟಿದ ಹೊಸ ಬಗೆಯ ಶಿಕ್ಷಣ ಕಲೆ
ಹಿಂದೆ ಗುರು ಇದ್ದು ,ಮುಂದೆ ಗುರಿ ಇದ್ದಲ್ಲಿ ಯಶಸ್ಸು ನಿಶ್ಚಿತ ಎಂಬಂತೆ, ವಿದ್ಯಾರ್ಥಿಗಳಲ್ಲಿ ನಿರ್ಧಿಷ್ಟ ಗುರಿ ಇದ್ದು, ಆ. ಗುರಿಯೆಡೆಗೆ ತಲುಪಲು ಹೊಸ ಬೆಳಕು ನೀಡಿ, ಅವರ ಭವಿಷ್ಯ ಉಜ್ವಲಗೊಳಿಸಲು ಸಾಕಾರ ನೀಡುವ ಗುರುವಿದ್ದರೆ ಮಕ್ಕಳ ಬಾಳು ಬಂಗಾರವಲ್ಲವೇ?
ಹೌದು. ಇದೇ ನಿಟ್ಟಿನಲ್ಲಿ ಕ್ರಿಯಾತ್ಮಕವಾಗಿ ಪಾಠ ಹೇಳುವ ಪ್ರವೃತ್ತಿಯಲ್ಲಿ ತೊಡಗಿಸಿಕೊಂಡು , ಮಕ್ಕಳನ್ನು ಮುಂದಿನ ರುವಾರಿಗಳನ್ನಾಗಿ ಮಾಡುವತ್ತ ಸಾಗುತ್ತಿರುವ ಈ ಬಹುಮುಖ ಪ್ರತಿಭೆ ಕಾರ್ಕಳದ ವಂದನಾ ರೈ. ಇವರ ಪಾಠ, ಡ್ಯಾನ್ಸ್, ಮಕ್ಕಳ ಪ್ರೇರಣಾ ಶಕ್ತಿ ಎಲ್ಲೆಡೆ ಫೇಮಸ್. ಲಾಕ್ಡೌನ್ ಹೇರಿಕೆ ನಂತರ, ಕೋವಿಡ್-19 ವಿರುದ್ಧ ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಗಳನ್ನು ಮುಚ್ಚಲಾಯಿತು. ಇದರಿಂದಲೇ ಶಿಕ್ಷಣದಲ್ಲಿ ಹೊಸ ಮಾರ್ಗಗಳು ಹುಟ್ಟಿಕೊಂಡವು. ಮುಖ್ಯವಾಗಿ ಆನ್ಲೈನ್ ಕ್ಲಾಸುಗಳು, ಅಂದರೆ ಶಿಕ್ಷಣ ಡಿಜಿಟಲ್ ಆಗಿ ಸಾಗಿತು. ಈ ಅಸಾಧಾರಣ ಪರಿಸ್ಥಿತಿಗಳು ಶಾಲಾ ಶಿಕ್ಷಕರನ್ನು ಆನ್ಲೈನ್ ಶಿಕ್ಷಣವನ್ನು ರಚನಾತ್ಮಕ ಹಾಗೂ ಹೊಸ ತಂತ್ರಗಳಿಂದ ನಡೆಸಲು ಪ್ರೇರೇಪಿಸಿತು. ವಿಶೇಷವಾಗಿ ಚಿಕ್ಕ ಮಕ್ಕಳ ಗಮನವನ್ನು ಆಕರ್ಷಿಸಲು ಹೊಸ ತಂತ್ರಗಳನ್ನು ಅನುಸರಿಸಲು ಇದು ತುಂಬಾ ಸವಾಲಿನದ್ದಾಗಿತ್ತು.
ಶಿಕ್ಷಕರು ಆನ್ಲೈನ್ ತರಗತಿಗಳನ್ನು ರಮಣೀಯವಾಗಿಸಲು ಹೊಸ ಮಾರ್ಗಗಳನ್ನು ಅನುಸರಿಸುತ್ತಿರುವಾಗ, ಜೇಸಿಸ್ ಇಂಗ್ಲಿಷ್ ಮೀಡಿಯಮ್ ಶಾಲೆಯ ಶಿಕ್ಷಕಿ ವಂದನಾ ರೈ, ರವರು “ವಂದನಾ ರೈ ಕಾರ್ಕಳ’ ಯುಟ್ಯೂಬ್ ಚಾನೆಲ್ ಆರಂಭಿಸಿದರು. ಇದು ಉಡುಪಿ ಜಿಲ್ಲೆ ಕಾರ್ಕಳದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ, ಜನರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಇವರ ಚಾನೆಲ್ನಲ್ಲಿ ಅಭಿನಯ ಗೀತೆಗಳು ಸೇರಿದಂತೆ ಮಕ್ಕಳ ಪಾಠ ಕುರಿತು ಅನೇಕ ವಿಡಿಯೋ ಅಪ್ಲೋಡ್ ಆಗಿವೆ. ಆ ಆನ್ಲೈನ್ ತರಗತಿಗಳಿಗೆ ಮಕ್ಕಳನ್ನು ಫೋನಿಕ್ಸ್ ಬಳಸಿ ಆಕರ್ಷಿಸುವ ಸೃಜನಾತ್ಮಕ ತಂತ್ರವನ್ನು ಪ್ರಯತ್ನಿಸಿದರು.
ಈ ಪರಿಕಲ್ಪನೆ ವಂದನಾ ರೈ ಮತ್ತು ಇತರ ಶಿಕ್ಷಕರಿಂದ ಅಭಿವೃದ್ಧಿಪಡಿಸಲಾಯಿತು. ವಂದನಾ ರೈ ಜೊತೆಗೆ ಆಶಾ ಗೋಖಲೆ, ರಜನಿ ಮತ್ತು ಶ್ರೀದೇವಿ ಕೂಡ ಈ ವಿಡಿಯೋದಲ್ಲಿ ಭಾಗವಹಿಸಿದ್ದರು. ಅವರು ಮಕ್ಕಳಿಗೆ ಇಂಗ್ಲಿಷ್ ಮತ್ತು ಕನ್ನಡ ಅಕ್ಷರಗಳು ಮತ್ತು ಪಠ್ಯಪುಸ್ತಕಗಳಲ್ಲಿ ಉಲ್ಲೇಖಿಸಲಾದ ವಿವಿಧ ಕನ್ನಡ ಹಾಡುಗಳನ್ನು ವಿಡಿಯೋಗಳ ಮೂಲಕ ಕಲಿಸಿದರು. ಶಿಕ್ಷಕರು ಕಲಿಸುವ ಪಾಠಗಳು ಮಕ್ಕಳಿಗೆ ಇನ್ನೂ ಸುಲಭವಾಗಿ ಅರ್ಥವಾಗಲು ಹಾಗೂ ಅವರ ಮನಸ್ಸಿನಾಳಕ್ಕೆ ಇಳಿಯುವಂತೆ ಮಾಡಲು ಪದ್ಯಕ್ಕೆ ತಕ್ಕ ನೃತ್ಯ ಮತ್ತು ಪಾಠಕ್ಕೆ ತಕ್ಕ ಹಾವಭಾವಗಳನ್ನು ನಟಿಸಿ ತೋರಿಸಿದ್ದಾರೆ.
ಪುಟ್ಟ ಪುಟ್ಟ ಮಕ್ಕಳಿಗೂ ಇಷ್ಟ!
ವಂದನಾ ಕಳೆದ ಮೂರು ವರ್ಷಗಳಿಂದ ಕಾರ್ಕಳದ ಜೇಸಿಸ್ ಇಂಗ್ಲಿಷ್ ಮೀಡಿಯಮ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಮೊದಲ ಸಲ ಶಾಲೆಗೆ ಬಂದ ಮಕ್ಕಳನ್ನು ಸುಧಾರಿಸುವುದು ಹೇಗೆ? ಅವರು ಕಲಿಯಬೇಕಾದ ವಾಕ್ಯಗಳೇನು ಎನ್ನುವುದನ್ನು ಇವರ ಚಾನೆಲ್ನಲ್ಲಿ ನೋಡಬಹುದು. ಪುಟ್ಟ ಪುಟ್ಟ ಮಕ್ಕಳಿಗೆ ಇವರ ಚಾನೆಲ್ ಒಂದು ಎನ್ಸೈಕ್ಲೋಪಿಡಿಯ ರೀತಿ ಆಗಿದೆ. ಮಕ್ಕಳು ಕಲಿಯಬೇಕಾದ ಹಾಡು, ನೃತ್ಯಗಳನ್ನು ಅದ್ಭುತವಾದ ಅಭಿನಯ ಗೀತೆಗಳಿಂದ ಕಲಿಸುವುದು ಇವರ ವಿಶೇಷತೆ.
ಮಕ್ಕಳಿಗೆ ಶಿಶು ಗೀತೆ ಕಲಿಸುವುದು ಹೇಗೆ? ಕನ್ನಡ ವರ್ಣಮಾಲೆಯನ್ನು ಎರಡು ಗೆರೆಯಲ್ಲಿ ಬರೆಯುವುದು ಹೇಗೆ? ಜ್ಞಾನೇಂದ್ರಿಯಗಳನ್ನು ಕುರಿತ ಹಾಡು, ಮಕ್ಕಳಿಗೆ ಸುಲಭವಾಗಿ ಕಲಿಸಬಹುದಾದ ಅಕ್ಷರ ಮಾಲೆ, ರಜೆಯಲ್ಲಿ ಕಲಿಯಬೇಕಾದ ಹಾಡುಗಳು, ತರಕಾರಿಗಳ ಹಾಡು, ಹೂಗಳ ಹಾಡು, ಪ್ರಾರ್ಥನೆಗಳು, ಪರಿಸರ ಗೀತೆ, ಕಾಗುಣಿತದ ಹಾಡು, ಶಾಲೆಯಲ್ಲಿ ಆಚರಿಸುವ ದಿನಾಚರಣೆಗಳಿಗೆ ಹೊಂದುವ ದೇಶಭಕ್ತಿ ಗೀತೆಗಳು. ಹೀಗೆ ಮುದ್ದು ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸುವ ಸಾಕಷ್ಟು ವಿಡಿಯೋಗಳನ್ನು ಈ ಚಾನೆಲ್ನಲ್ಲಿ ಕಾಣಬಹುದು.
ನೃತ್ಯ ಕೇಂದ್ರದಲ್ಲೂ ಟೀಚರ್!
ಕಾರ್ಕಳ ಮತ್ತು ಬಜೆಗೋಳಿಯಲ್ಲಿ ಮಯೂರಿ ನೃತ್ಯ ತರಗತಿಯನ್ನು ಸ್ಥಾಪಿಸಿದ್ದಾರೆ. ವಂದನಾ ಬೆಂಗಳೂರಿನ ಕಿಡ್ಜೀ ಶಾಲೆಯಲ್ಲಿ 10 ವರ್ಷಗಳ ಕಾಲ ನೃತ್ಯ ತರಬೇತುದಾರರಾಗಿದ್ದಾರೆ. ಅವರು ಜೀ ಕನ್ನಡ, ಕಸ್ತೂರಿ ಮತ್ತು ಈಟಿವಿ ಚಾನಲ್ನಲ್ಲಿ ನಡೆದ ರಿಯಾಲಿಟಿ ಶೋಗಳಲ್ಲಿ ಗೆಲುವು ಸಾಧಿಸಿದ್ದಾರೆ. 4.46 ಲಕ್ಷ ಜನರ ಮನ ಗೆದ್ದ ಶಿಕ್ಷಕಿ! ವಂದನಾ ರೈ ಕಾರ್ಕಳ ಯುಟ್ಯೂಬ್ ಚಾನೆಲ್ ಪ್ರಸ್ತುತ 4.46 ಲಕ್ಷ ಚಂದಾದಾರರು ಮತ್ತು 644 ಅಪ್ಪ್ಲೋಡೆಡ್ ವಿಡಿಯೋ ಹೊಂದಿದೆ. ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ಪ್ರೀತಿಸಿ ಪಾಠ ಕಲಿಸಿದಾಗ ಅವರಿಂದ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತದೆ ಎನ್ನುವುದು ವಂದನಾ ರೈ ಅವರ ಮಾತು.








