ಕರಾವಳಿ ಟಾಪ್ ನ್ಯೂಸ್
• ಬೆಳ್ತಂಗಡಿ: ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್
• ಸುಳ್ಯ: ಆಂಧ್ರದಲ್ಲಿ ರಸ್ತೆ ಅಪಘಾತ; ಮಹಿಳೆ ಸಾವು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
• ಬೆಳ್ತಂಗಡಿ: ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್
ಬೆಳ್ತಂಗಡಿ: ಕಳೆದ ತಿಂಗಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದ, ಬೀದಿಮಜಲು ನಿವಾಸಿ ಹಾಗೂ ಉದ್ಯಮಿಯಾಗಿದ್ದ ಸುದೀಪ್ ರೈ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರದಂದು ಹೊಸ ತಿರುವು ದೊರೆತಿದೆ. ಫೆಬ್ರವರಿ 17ರಂದು ಪುತ್ತೂರಿನ ನೋಂದಾಯಿತ ಕಛೇರಿಯಲ್ಲಿ ಸೌಮ್ಯ ಶೆಟ್ಟಿ ಎನ್ನುವವರನ್ನು ವಿವಾಹ ಮಾಡಿಕೊಂಡು, ಫೆಬ್ರವರಿ 19ರಂದು ಕುಕ್ಕುಂದೂರು ದೇವಸ್ಥಾನದಲ್ಲಿ ಧಾರ್ಮಿಕ ವಿಧವಿಧಾನಗಳ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಸುದೀಪ್ ರೈ ಅವರು, ಮದುವೆಯಾದ ಬಳಿಕ ಪತ್ನಿಯ ಮನೆಯಲ್ಲಿ ವಾಸವಾಗಿದ್ದರು. ವಿವಾಹವಾದ ಒಂದು ತಿಂಗಳಲ್ಲೇ ಅಂದರೆ ಮಾರ್ಚ್ 22 ರಂದು ತಿಂಡಿಯೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29 ರಂದು ಸಾವನ್ನಪ್ಪಿದರು.
ಇದಕ್ಕೆ ಸಂಬಂಧಿಸಿದಂತೆ ಅನೇಕ ಅನುಮಾನಗಳು ಹುಟ್ಟಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಸುದೀಪ್ ಅವರ ತಂದೆ ದಾಮೋದರ್ ರೈ ಅವರು ಸೊಸೆ ಸೌಮ್ಯ ಶೆಟ್ಟಿ ವಿರುದ್ಧ ಗಂಭೀರ ಆರೋಪಗಳನ್ನು ಹೊರೆಸಿದ್ದು, “ನನ್ನ ಮಗನಿಗೆ ಮಾನಸಿಕ ಕಿರುಕುಳ ನೀಡಿ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿದ್ದಾಳೆ. ಮತ್ತು ಆ ವಿಚಾರವನ್ನು ಏಳು ದಿನಗಳ ಕಾಲ ಮುಚ್ಚಿಟ್ಟು, ಅವನಿಗೆ ಸರಿಯಾದ ಚಿಕಿತ್ಸೆ ಸಿಗದಂತೆ ಮಾಡಿದ್ದಾಳೆ” ಎಂದು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ತನಿಖೆಯನ್ನು ಕೈಗೊಂಡ ಕಾರ್ಕಳ ಠಾಣೆಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ, ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗಳಿಸಿದ್ದಾರೆ. ಪರಿಣಾಮವಾಗಿ ಶನಿವಾರದಂದು ಸುದೀಪ್ ರೈ ಅವರ ಪತ್ನಿ ಸೌಮ್ಯ ಶೆಟ್ಟಿಯನ್ನು ಶನಿವಾರದಂದು ಉಡುಪಿಯಲ್ಲಿ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
• ಸುಳ್ಯ: ಆಂಧ್ರದಲ್ಲಿ ರಸ್ತೆ ಅಪಘಾತ; ಮಹಿಳೆ ಸಾವು
ಸುಳ್ಯ: ಸಹೋದ್ಯೋಗಿಗಳೊಂದಿಗೆ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ, ರಸ್ತೆ ಅಪಘಾತದಲ್ಲಿ ಸುಳ್ಯ ಮೂಲದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಕಂದಡ್ಕದ ನಿವಾಸಿಯಾದ ಶಶಿಕಲಾ ಎನ್ನುವವರ ಪುತ್ರಿ ಕ್ಷಿಪ್ರ ಅವರು ಸುಳ್ಯದ ಕೆವಿಜಿ ಕಾಲೇಜಿನಲ್ಲಿ ಡಿಪ್ಲೋಮಾ ಶಿಕ್ಷಣವನ್ನು ಪೂರ್ಣಗೊಳಿಸಿ, ನಿಟ್ಟೆಯಲ್ಲಿ ಎಂ ಟೆಕ್ ಪದವಿ ಪಡೆದು, ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಶನಿವಾರ ಭಾನುವಾರದಂದು ರಜೆಯಿದ್ದ ಕಾರಣ ಸಹೋದ್ಯೋಗಿಗಳೊಂದಿಗೆ ಪ್ರವಾಸಕ್ಕೆ ತೆರಳುತ್ತಿದ್ದಾಗ, ಕಾರು ನಿಯಂತ್ರಣ ತಪ್ಪಿ ಕರ್ನೂಲ್ ಜಿಲ್ಲೆಯ ಆದೋನಿ ಶಿರಗುಪ್ಪ ರಸ್ತೆಯ ಭಾಗದಲ್ಲಿ ಅಪಘಾತಕ್ಕೆ ಈಡಾಯಿತು ಎನ್ನಲಾಗಿದೆ. ಪರಿಣಾಮವಾಗಿ ಕ್ಷಿಪ್ರ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರರಿಗೆ ಗಾಯಗಳಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಲಭಿಸಿದೆ.







