ದ್ವಿತೀಯ ಪಿಯುಸಿ ಫಲಿತಾಂಶ: ಉಡುಪಿ ಟಾಪರ್!
– ಯಾದಗಿರಿ ಕೊನೆ ಸ್ಥಾನ: ಯಾರಿಗೆ ಮೊದಲ ಸ್ಥಾನ?
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ವಿದ್ಯಾರ್ಥಿಗಳ ವೃತ್ತಿ ಜೀವನದ ಜೊತೆಗೆ, ಅವರ ಭವಿಷ್ಯವನ್ನು ನಿರ್ಧರಿಸುವ ಅತ್ಯಂತ ಮಹತ್ವದ ಘಟ್ಟವಾದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಸುದ್ಧಿಗೋಷ್ಠಿಯಲ್ಲಿ ಫಲಿತಾಂಶವನ್ನು ಪ್ರಕಟಿಸಿದ್ದು, ಈ ಬಾರಿಯ ಫಲಿತಾಂಶದಲ್ಲಿ ಕಲಾವಿಭಾಗದಲ್ಲಿ ಶೇಕಡ 53.29ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಾಗೆಯೇ ವಾಣಿಜ್ಯ ವಿಭಾಗದಲ್ಲಿ 76.೦7ರಷ್ಟು ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 82.54ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನವನ್ನು, ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ಯಾದಗಿರಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಕಲಾವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಇಂದು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಂಜನಾಬಾಯಿ ಅವರು 600ಕ್ಕೆ 597, ವಿಜ್ಞಾನ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಕ್ಸ್ ಪರ್ಟ್ ಪದವಿಪೂರ್ವ ಕಾಲೇಜಿನ ಅಮೂಲ್ಯ ಕಾಮತ್ ಅವರು 600ಕ್ಕೆ 599, ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ಕೆನರಾ ಕಾಲೇಜಿನ ವಿದ್ಯಾರ್ಥಿನಿ ದೀಪಶ್ರೀ ಅವರು 600ಕ್ಕೆ 599 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ರಾಜ್ಯದ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ರಾಜ್ಯದ ಒಟ್ಟು 134 ಕಾಲೇಜುಗಳಲ್ಲಿ ಶೇಕಡಾ 100ರಷ್ಟು ಫಲಿತಾಂಶ ಹಾಗೂ 123 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದ್ದು, ಶೇಕಡ 100 ಫಲಿತಾಂಶ ಪಡೆದುಕೊಂಡಿರುವ ಕಾಲೇಜುಗಳಲ್ಲಿ 13 ಸರ್ಕಾರಿ ಕಾಲೇಜುಗಳಾಗಿವೆ. ಈ ಬಾರಿಯೂ ಕೂಡ ಫಲಿತಾಂಶದಲ್ಲಿ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.








