ಹೆತ್ತವರನ್ನು ಮರೆತ ಮಕ್ಕಳು… ಶವದ ಜೊತೆ 10 ದಿನ ಕಳೆದ ಪತ್ನಿ!
– ಮಕ್ಕಳಿದ್ರೂ ಅನಾಥವಾದ ಹೆತ್ತವರು..!
– ಬಣಕಲ್ನಲ್ಲಿ ಪತಿಯ ಶವದ ಜೊತೆ 10 ದಿನ ಕಳೆದ ಪತ್ನಿ!
– ಇದು ಆಧುನಿಕ ಜಗತ್ತಿನ ಕರಾಳ ಮುಖ.
ಚಿಕ್ಕಮಗಳೂರು: ಮಕ್ಕಳನ್ನು ಸಾಕಿ ಸಲಹಿ, ಅವರು ದೊಡ್ಡ ಕೆಲಸಕ್ಕೆ ಹೋಗಿ ವಿದೇಶದಲ್ಲಿ ನೆಲೆಸಲಿ ಎಂಬುದು ಪ್ರತಿ ಪೋಷಕರ ಕನಸು. ಆದರೆ, ಅದೇ ಮಕ್ಕಳು ಹೆತ್ತವರನ್ನು ಮರೆತರೆ ಏನಾಗುತ್ತದೆ ಎಂಬುದಕ್ಕೆ ಚಿಕ್ಕಮಗಳೂರಿನ ಈ ಘಟನೆ ಸಾಕ್ಷಿಯಾಗಿದೆ. ಬಣಕಲ್ನ ಸುಭಾಷ್ ನಗರದಲ್ಲಿ ನಡೆದ ಈ ಕರುಣಾಜನಕ ಕಥೆ ಕಲ್ಲಿದ್ದವರ ಮನಸ್ಸನ್ನೂ ಕರಗಿಸುವಂತಿದೆ.
77 ವರ್ಷದ ಸಿರಿಲ್ ಮೋನಿಸ್ ಒಬ್ಬ ಪ್ರಾಮಾಣಿಕ ಗಾರೆ ಕೆಲಸಗಾರ. ಗಾರೆ ಕೆಲಸ ಮಾಡಿ ತಮ್ಮ ಇಬ್ಬರು ಮಕ್ಕಳಿಗೆ ಅತ್ಯುತ್ತಮ ವಿದ್ಯಾಭ್ಯಾಸ ಕೊಡಿಸಿದ್ದರು. ಮಗ ಬೆಂಗಳೂರಿನ ಸಾಫ್ಟ್ವೇರ್ ಕಂಪನಿಯಲ್ಲಿದ್ದರೆ, ಮಗಳು ದುಬೈನಲ್ಲಿ ಶಿಕ್ಷಕಿಯಾಗಿ ನೆಲೆಸಿದ್ದಾರೆ. ಆದರೆ, ಸುಭಾಷ್ ನಗರದ ಮನೆಯಲ್ಲಿ ಸಿರಿಲ್ ಹಾಗೂ ಅವರ ಪತ್ನಿ ಮಾತ್ರ ಅನಾಥರಾಗಿದ್ದರು.
ಸಿರಿಲ್ ಮೋನಿಸ್ ಅವರು ಮನೆಯಲ್ಲೇ ಮೃತಪಟ್ಟು ಹತ್ತು ದಿನಗಳೇ ಕಳೆದಿವೆ. ಅವರ ದೇಹ ಕೊಳೆತು ಹುಳು ಹಿಡಿದರೂ ಯಾರಿಗೂ ತಿಳಿಯಲಿಲ್ಲ. ಮಾನಸಿಕ ಅಸ್ವಸ್ಥರಾಗಿದ್ದ ಅವರ ಪತ್ನಿ, ಪತಿ ಬದುಕಿದ್ದಾರೆ ಎಂದೇ ನಂಬಿ ಅವರ ಶವದ ಪಕ್ಕದಲ್ಲೇ ಹತ್ತು ದಿನ ಕಳೆದಿದ್ದಾರೆ. ಕೊನೆಗೆ ಮನೆಯಿಂದ ದುರ್ವಾಸನೆ ಬರಲಾರಂಭಿಸಿದಾಗ ಅಕ್ಕಪಕ್ಕದವರು ಪೊಲೀಸರಿಗೆ ದೂರು ನೀಡಿದ್ದಾರೆ. ಬುಧವಾರ ಸಂಜೆ ಪೊಲೀಸರು ಬಾಗಿಲು ಮುರಿದು ನೋಡಿದಾಗ ಕಂಡ ದೃಶ್ಯ ನಿಜಕ್ಕೂ ಭೀಕರವಾಗಿತ್ತು.
ಮಕ್ಕಳನ್ನು ವಿದೇಶಕ್ಕೆ ಕಳಿಸಿ ಸಂಭ್ರಮಿಸುವ ಈ ಸಮಾಜಕ್ಕೆ, ವೃದ್ಧಾಪ್ಯದಲ್ಲಿ ಹೆತ್ತವರ ಗತಿ ಏನಾಗುತ್ತಿದೆ ಎಂಬುದು ಈ ಘಟನೆಯಿಂದ ತಿಳಿಯುತ್ತಿದೆ. ಹಣವಿದ್ದರೂ ಹತ್ತಿರ ಮಕ್ಕಳಿಲ್ಲದ ನೋವು ಸಿರಿಲ್ ಅವರ ಈ ದುರಂತ ಸಾವಿಗೆ ಕಾರಣವಾಗಿದೆ.








