ಮಲೆನಾಡಿನ ಹುಡುಗ ಅಮೇರಿಕಾ ಕ್ರಿಕೆಟ್ ತಂಡದ ಬಿಗ್ ಸ್ಟಾರ್!
– ಮೂಡಿಗೆರೆ ಮೂಲದ ನೊಸ್ತುಷ ಪ್ರದೀಪ್ ಕೆಂಜಿಗೆ ಅಮೇರಿಕಾದ ಆಲ್ ರೌಂಡರ್
– ತಂದೆ ಪ್ರದೀಪ್ ಕೆಂಜಿಗೆ ಕೂಡ ಕೃಷಿ ಸಂಶೋಧಕರು..!
ಮಲೆನಾಡಿನ ಹುಡುಗ ಅಮೇರಿಕಾ ಕ್ರಿಕೆಟ್ ತಂಡದಲ್ಲಿ ಆಲ್ ರೌಂಡರ್. ಅಚ್ಚರಿ ಆಗಬಹುದು. ಆದ್ರೂ ಸತ್ಯ. ಮೂಡಿಗೆರೆ ಮೂಲದ ನೊಸ್ತುಷ ಪ್ರದೀಪ್ ಕೆಂಜಿಗೆ ಇದೀಗ ಅಮೇರಿಕಾ ಕ್ರಿಕೆಟ್ ತಂಡದಲ್ಲಿ ಆಡುತ್ತಿದ್ದಾರೆ. ತಂದೆ ಪ್ರದೀಪ್ ಕೆಂಜಿಗೆ ಕೂಡ ಕೃಷಿ ಸಂಶೋಧಕರು. ನೊಸ್ತುಷ ಪ್ರದೀಪ್ ಕೆಂಜಿಗೆ ಅವರು 2 ಮಾರ್ಚ್ 1991ರಲ್ಲಿ ಜನಿಸಿದರು. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೆಂಜಿಗೆ ಗ್ರಾಮದವರು. ಆದರೆ ಹುಟ್ಟಿದ್ದು ಆಬರ್ನ್ ಅಲಬಾಮಾ ಯುನೈಟೆಡ್ ಸ್ಟೇಟ್ಸ್ ನಲ್ಲಿ. ತಂದೆ ಪ್ರದೀಪ್ ಮೂಡಿಗೆರೆಯಲ್ಲಿ ಕಾಫಿ ತೋಟವನ್ನು ಹೊಂದಿದ್ದು, ಟಸ್ಕೆಗೀ ವಿಶ್ವವಿದ್ಯಾನಿಲಯದಲ್ಲಿ ಕೃಷಿ ಸಂಶೋಧಕರಾಗಿದ್ದಾರೆ.
ನೊಸ್ತುಷ ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಲವ್ ಡೇಲ್ ನ ದಿ ಲಾರೆನ್ಸ್ ಶಾಲೆಯಲ್ಲಿ ಅಧ್ಯಯನ ಮಾಡಿದರು. ಇವರು ಬಹುತೇಕ ಭಾರತದಲ್ಲೇ ತಮ್ಮ ವಿದ್ಯಾರ್ಥಿ ಜೀವನವನ್ನು ಕಳೆದರು. ಇವರು ದಯಾನಂದ ಸಾಗರ ಕಾಲೇಜಿನಿಂದ ಬಯೋಟೆಕ್ನಾಲಜಿ ವಿಷಯದಲ್ಲಿ ಇಂಜಿನಿಯರಿಂಗ್ಪದವಿ ಪಡೆದರು ಹಾಗೂ ಅದೇ ಕಾಲೇಜಿನಿಂದ ಬಯೋಟೆಕ್ನಾಲಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಪಡೆದುಕೊಂಡರು. ವಿದ್ಯಾಭ್ಯಾಸದ ಬಳಿಕ ನ್ಯೂಯಾರ್ಕ್ ಗೆ ತೆರಳಿ ಬಯೋಮೆಡಿಕಲ್ ಇಂಜಿನಿಯರ್ ಆಗಿ ವೃತ್ತಿಜೀವನವನ್ನು ಆರಂಭಿಸಿದರು. ಬೆಂಗಳೂರಲ್ಲಿ ಕೂಡ ಇವರು ಕ್ರಿಕೆಟ್ ಆಡಿದ್ದರು. ಆದರೆ ಕರ್ನಾಟಕ, ತಮಿಳು ನಾಡು ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಕನ್ನಡದ ಹುಡುಗನೊಬ್ಬ ಇದೀಗ ವಿಶ್ವದ ದೊಡ್ಡಣ್ಣ ಅಮೇರಿಕಾ ತಂಡದಲ್ಲಿ ಸ್ಟಾರ್ ಆಗಿದ್ದಾರೆ.
ಅಮೇರಿಕಾ ಕ್ರಿಕೆಟ್ ತಂಡದ ಭರವಸೆ ವಿದ್ಯಾರ್ಥಿ ದೆಸೆಯಿಂದಲೇ ಕ್ರಿಕೆಟ್ ವ್ಯಾಮೋಹ ಬೆಳೆಸಿಕೊಂಡ ನೊಸ್ತುಷ ಅವರು ಹಲವು ಪಂದ್ಯಾವಳಿಗಳಲ್ಲಿ ಭಾಗವಹಿಸಿದರು. ಮೇ 2017 ರಲ್ಲಿ ಉಗಾಂಡಾದಲ್ಲಿ ನಡೆದ ಐಸಿಸಿ ವರ್ಲ್ಡ್ ಕ್ರಿಕೆಟ್ ಲೀಗ್ ಡಿವಿಷನ್ ಮೂರರಲ್ಲಿ ಯುಎಸ್ ತಂಡದಲ್ಲಿ ಆಡಿದರು. 2017-18 ಪ್ರಾದೇಶಿಕ ಸೂಪರ್ ಐವತ್ತರಲ್ಲಿ ಲೀವರ್ಡ್ ದ್ವೀಪಗಳ ವಿರುದ್ಧ ಯುಎಸ್ ಪರ ಲಿಸ್ಟ್ ಎ ಚೊಚ್ಚಲ ಪಂದ್ಯದಲ್ಲಿ ಪ್ರವೇಶ ಪಡೆದರು. ಹೀಗೆ ಹಲವು ಪಂದ್ಯಾವಳಿಯಲ್ಲಿ ಭಾಗವಹಿಸಿದ ನೊಸ್ತುಷ ಅವರನ್ನು 2021ರಲ್ಲಿ ಆಟಗಾರರ ಡ್ರಾಫ್ಟ್ ನಂತರ ಯುಎಸ್ ನಲ್ಲಿ ನಡೆದ ಮೈನರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಯಿತು. ಕ್ರಿಕೆಟ್ ನಲ್ಲಿ ಒಂದೊಂದೆ ಮೆಟ್ಟಿಲುಗಳನ್ನು ಏರುತ್ತಿರುವ ನೊಸ್ತಷ ಅವರು ಪಂದ್ಯಾವಳಿಗಳಲ್ಲಿ ಗೆದ್ದು, ಯಶಸ್ವಿಯಾಗಲಿ ಎಂಬುದು ನಮ್ಮೆಲ್ಲರ ಆಶಯ.








