ಸ್ನೇಹಿತರೇ ಸೇರಿ ಕಟ್ಟಿದ್ದು ಸಾವಿರಾರು ಕೋಟಿ ಬ್ಯುಸಿನೆಸ್..!
ಕಷ್ಟ ಸುಖದ ನಡುವೆ ಸ್ನೇಹದ ನಿಜದ ಮಹತ್ವ ಸಾರಿದ ಉದ್ಯಮಿಗಳು
ಇಂಡಿಯಾದ ದೊಡ್ಡ ಕಂಪನಿಗಳ ಮಾಲೀಕರು ಒಳ್ಳೆ ಫ್ರೆಂಡ್ಸ್
ಸ್ನೇಹಕ್ಕೆ ಜಗತ್ತನ್ನೇ ಗೆಲ್ಲುವ ಶಕ್ತಿ ಇದೆ. ಇಂತಹ ಸ್ನೇಹ ಅನೇಕ ಸಾಧನೆಗೆ ಸಾಕ್ಷಿಯಾಗಿದೆ. ಸ್ನೇಹಿತರ ಗೆಲುವುಗಳು ಇತಿಹಾಸ ಸೃಷ್ಟಿ ಮಾಡಿದೆ. ಅವರ ಕಷ್ಟಸುಖಗಳಲ್ಲಿ ಸಮಾನವಾಗಿ ಭಾಗಿಗಳಾಗುವವರು ಸ್ನೇಹಿತರು ಮಾತ್ರ ಎಂಬ ಮಾತು ನಮ್ಮಲ್ಲಿ ಚಾಲ್ತಿಯಲ್ಲಿದೆ. ಆದರೆ ಕೆಲಸ ಮತ್ತು ಅದರ ಮೂಲಕ ಗಳಿಸಿದ ಸ್ಥಾನಮಾನಗಳಲ್ಲೂ ಸಮಾನತೆ ಕಂಡುಕೊಂಡವರು ವಿರಳ. ಅಂತಹ ಸ್ನೇಹಿತರು ಇಂದು ನಮ್ಮ ಕಣ್ಣ ಮುಂದೆ ಇದ್ದಾರೆ. ಓಲಾ ಕಂಪನಿಯನ್ನು 2010ರಲ್ಲಿ ಭವಿಷ್ ಅಗರ್ವಾಲ್ ಮತ್ತು ಅಂಕಿತ್ ಭಾಟಿ ಎಂಬ ಸ್ನೇಹಿತರು ಪ್ರಾರಂಭಿಸಿದರು. ಮೊದಲಿಗೆ ಕ್ಯಾಬ್ಗಳ ಸೇವೆಗೆ ಮಾತ್ರ ಸೀಮಿತವಾಗಿದ್ದ ಈ ಕಂಪನಿ ತನ್ನ ಆದಾಯ, ಪ್ರಸಿದ್ಧತೆ ಹೆಚ್ಚಿದಂತೆಲ್ಲ ಎಲೆಕ್ಟ್ರಿಕ್ ವಾಹನಗಳು, ಆಹಾರ, ಮೊಬೈಲ್ ಅಪ್ಲಿಕೇಶನ್ಗಳಿಗೆ ವಿಸ್ತರಿಸಿಕೊಂಡಿತು. ಭಾರತದ 250ಕ್ಕೂ ಅಧಿಕ ನಗರಗಳಿಗೆ ತನ್ನ ಸೇವೆಯನ್ನು ವಿಸ್ತರಿಸಿದ್ದಲ್ಲದೆ ಜನವರಿ 2018ರಲ್ಲಿ ಆಸ್ಟ್ರೇಲಿಯಾ ಅದೇ ವರ್ಷ ಸೆಪ್ಟೆಂಬರ್ ನಲ್ಲಿ ನ್ಯೂಜಿಲೆಂಡ್, 2019ರಲ್ಲಿ ಯುಕೆಯಲ್ಲಿ ತನ್ನ ಸೇವೆಯನ್ನು ಪ್ರಾರಂಭಿಸಿತು. ಇದರ ಪ್ರಧಾನ ಕಛೇರಿ ಬೆಂಗಳೂರಿನ ಕೋರಮಂಗಲದಲ್ಲಿದ್ದು. ಕೋಟ್ಯಂತರ ರೂಪಾಯಿ ಆದಾಯ ಹೊಂದುತ್ತಿದೆ. ಎ ಎನ್ ಐ ಇದನ್ನು ಪೋಷಿಸುತ್ತಿದ್ದು, ಮೂರು ಸಾವಿರ ಉದ್ಯೋಗಿಗಳನ್ನು ಹೊಂದಿದೆ.
ಪ್ಲಿಪ್ಕಾರ್ಟ್ ಸ್ನೇಹಿತರ ಕನಸಿನ ಕೂಸು
ಫ್ಲಿಪ್ ಕಾರ್ಟ್ 2007ರಲ್ಲಿ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಎಂಬ ಸ್ನೇಹಿತರಿಂದ ಪ್ರಾರಂಭಗೊಂಡಿತು. ಇವರು ದೆಹಲಿಯ ಐಐಟಿ ಯ ಹಳೆಯ ವಿದ್ಯಾರ್ಥಿಗಳು. ಬೆಂಗಳೂರಿನ ಕೋರಮಂಗಲದ ಎರಡು ಕೋಣೆಗಳ ಅಪಾರ್ಟ್ಮೆಂಟ್ ನಲ್ಲಿ ಇಬ್ಬರ ಕುಟುಂಬದವರು ನೀಡಿದ ಎರಡು ಲಕ್ಷ ರೂಪಾಯಿಗಳ ಹೂಡಿಕೆಯೊಂದಿಗೆ ಪ್ರಾರಂಭಗೊಂಡ ಈ ಕಂಪನಿಯು ಇಂದು ಕೋಟಿ ರೂಪಾಯಿಗಳ ವಹಿವಾಟನ್ನು ಹೊಂದಿದೆ. 2007 ರಿಂದ 2010ರ ವರೆಗೆ ಸ್ಟಾರ್ಟ್ ಅಪ್ ಕಂಪನಿಯಾಗಿದ್ದು ಪುಸ್ತಕಗಳ ಮಾರಾಟಕ್ಕೆ ಮಾತ್ರ ಸೀಮಿತವಾಗಿತ್ತು. 2008ರಿಂದ ದಿನಕ್ಕೆ ನೂರಾರು ಆದೇಶಗಳು ಬರತೊಡಗಿದ ಬಳಿಕ 2010 ರಿಂದ 2014 ರ ವರೆಗೆ ಹಲವಾರು ಕಂಪನಿಗಳ ಜೊತೆ ವಿಲೀನ, ಒಪ್ಪಂದಗಳ ಪರಿಣಾಮವಾಗಿ ಎಲ್ಲಾ ಬಗೆಯ ವಸ್ತುಗಳು, ಉಡುಗೆಗಳು ಲಭಿಸುವಂತೆ ಕಂಪನಿಯನ್ನು ವಿಸ್ತಾರಗೊಳಿಸಲಾಯಿತು.
ಜೊಮಾಟೊ ಕೂಡ ಫ್ರೆಂಡ್ಸ್ ಕಂಪನಿ
ಆಹಾರದ ವಿತರಣೆಗೆ ಹೆಸರುವಾಸಿಯಾದ ಜೊಮಾಟೊ ಕಂಪನಿಯ ಕಥೆಯೂ ಇದೇ ಬಗೆಯದು. ಇದೊಂದು ಭಾರತೀಯ ಮೂಲದ ಬಹುರಾಷ್ಟ್ರೀಯ ರೆಸ್ಟೋರೆಂಟ್ ಸಂಗ್ರಾಹಕ ಮತ್ತು ಆಹಾರ ವಿತರಣಾ ಕಂಪನಿಯಾಗಿದೆ. 2008ರಲ್ಲಿ ಇದನ್ನು ದೀಪಿಂದರ್ ಗೋಯಲ್ ಮತ್ತು ಪಂಕಜ್ ಚಡ್ಡಾ ಎಂಬ ಸ್ನೇಹಿತರು ಆರಂಭಿಸಿದರು. ಇದರ ಮೊದಲ ಹೆಸರು ಫುಡೀಬೇ ಎಂದಾಗಿತ್ತು. 2009ರಲ್ಲಿ ಇಪ್ಪತ್ತನಾಲ್ಕು ದೇಶ ಮತ್ತು ಹತ್ತು ಸಾವಿರಕ್ಕೂ ಹೆಚ್ಚಿನ ನಗರಗಳಿಗೆ ತನ್ನ ಸೇವೆ ಲಭ್ಯವಾಗುವಂತೆ ಮಾಡಿತು. ಇಬ್ಬರು ಸ್ನೇಹಿತರು ಸೇರಿ ಮೊದಲಿಗೆ ವೆಬ್ ಸೈಟ್ ಒಂದನ್ನು ಪ್ರಾರಂಭಿಸಿದರು. ವೆಬ್ ಸೈಟ್ ಗೆ ಹೆಚ್ಚಿನ ಗಮನ ನೀಡುವ ಸಲುವಾಗಿ ನವೆಂಬರ್ 2009ರಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿದರು. ಜನವರಿ 2010ರಿಂದ ಕಂಪನಿ ಚಾಲನೆಗೊಂಡಿತು. ಕೇವಲ ಆಹಾರಕ್ಕೆ ಸೀಮಿತಗೊಳಿಸಿದರೆ ಸರಿಬರುವುದಿಲ್ಲ ಎಂಬ ಕಾರಣಕ್ಕೆ 2011ರಿಂದ ಕಾರ್ಯಕ್ರಮಗಳಿಗೆ ಟಿಕೇಟ್ ಬುಕ್ಕಿಂಗ್ ಅನ್ನು ಸಹ ಆರಂಭಿಸಿದರು.
ಸ್ನೇಹಿತರೇ ಶುರು ಮಾಡಿದ್ದು ಸಾವಿರಾರು ಕಂಪನಿ!
ಇನ್ಫೋಸಿಸ್, ರೆಡ್ ಬಸ್, ಮೀಶೋ, ಡ್ರೀಮ್ 11, ಕಾಯಿನ್ ಡಿಸಿಎಕ್ಸ್, ಸ್ನಾಪ್ ಡೀಲ್, ಬೋಟ್, ಜೆಪ್ಟೊ ಮೊದಲಾದ ಕಂಪನಿಗಳು ಸ್ನೇಹಿತರಿಂದ ಆರಂಭಗೊಂಡು ಕೋಟ್ಯಂತರ ರೂಪಾಯಿಗಳ ವಹಿವಾಟನ್ನು ಹೊಂದುವ ಮೂಲಕ ಜೀವನದಲ್ಲಿ ಯಶಸ್ಸನ್ನು, ಕೀರ್ತಿಯನ್ನು ಸಂಪಾದಿಸಿದ್ದಾರೆ. ನಂಬಿಕೆ, ವಿಶ್ವಾಸ ಇದ್ದರೆ ಎಲ್ಲವೂ ಸಾಧ್ಯ. ಇಂತಹ ಸ್ನೇಹ ಎಲ್ಲರಿಗೂ ಮಾದರಿಯಾಗಲಿ ಎಂಬುದು ನಮ್ಮ ಆಶಯವಾಗಿದೆ.








