ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ
– ಉಪ ಚುನಾವಣೆ ಹಿನ್ನೆಲೆಯಲ್ಲಿ ದಿನಾಂಕ ಬದಲು
– ವಿದ್ಯಾರ್ಥಿಗಳೇ ಆಲ್ ದಿ ಬೆಸ್ಟ್: ಫಲಿತಾಂಶ ನೋಡೋದು ಹೇಗೆ?
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ದಿನಾಂಕವನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಪ್ರಕಟ ಮಾಡಿದೆ. ಏಪ್ರಿಲ್ 9ರ ಗುರುವಾರದಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಳ್ಳುವುದರ ಕುರಿತು ಅಂತಿಮ ನಿರ್ಧಾರ ಕೈಗೊಂಡಿದ್ದು, ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಫಲಿತಾಂಶವನ್ನು ಪ್ರಕಟಿಸಲಿದ್ದಾರೆ ಎಂದು ಪರೀಕ್ಷಾ ಮಂಡಳಿಯ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ. ಈ ಬಾರಿ ಫೆಬ್ರವರಿ 28ರಿಂದ ಮಾರ್ಚ್ 17ರ ವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಮಾರ್ಚ್ 20 ರಿಂದ ಪ್ರಾರಂಭಗೊಂಡಿತ್ತು. ಮೌಲ್ಯಮಾಪನ ಕಾರ್ಯವು ಕೆಲವು ದಿನಗಳ ಹಿಂದೆಯೇ ಮುಕ್ತಾಯಗೊಂಡಿತ್ತು.
ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಪ್ರಕಟಣೆಯೊಂದನ್ನು ಹೊರಡಿಸಿ, ಏಪ್ರಿಲ್ 7ರ ಮಂಗಳವಾರದಂದು ಫಲಿತಾಂಶ ಹೊರಬರುವ ಸಾಧ್ಯತೆ ಇದೆ ಎಂದು ತಿಳಿಸಿತ್ತು. ಬಹುತೇಕ ಅದು ಅಧಿಕೃತ ಕೂಡ ಆಗಿತ್ತು. ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದಾರೆ ಎನ್ನುವ ಮಾಹಿತಿಯನ್ನು ಸಹ ನೀಡಿದ್ದರು. ಆದರೆ, ಇದೀಗ ಫಲಿತಾಂಶ ಪ್ರಕಟಣೆಗೆ ಸಂಬಂಧಿಸಿದಂತೆ ಕೊಂಚ ಬದಲಾವಣೆ ಉಂಟಾಗಿದೆ. ಮಂಗಳವಾರದಂದು ದಾವಣಗೆರೆ, ಬಾಗಲಕೋಟೆಗಳಲ್ಲಿ ಉಪಚುನಾವಣೆ ನಡೆಯುತ್ತಲಿರುವ ಹಿನ್ನೆಲೆಯಲ್ಲಿ ನಿಗದಿಪಡಿಸಿದ ದಿನಾಂಕದಂದು ಫಲಿತಾಂಶವನ್ನು ಪ್ರಕಟಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಅಧಿಕೃತ ವೆಬ್ಸೈಟ್ನಲ್ಲೂ ಫಲಿತಾಂಶ ಪ್ರಕಟ: ನೋಡೋದು ಹೇಗೆ?
ಮೊದಲು ಅಧಿಕೃತ ವೆಬ್ ಸೈಟ್ karresults.nic.in ‘ ಗೆ ಭೇಟಿ ನೀಡಿ Karnataka 2nd PUC Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ‘Submit’ ಬಟನ್ ಒತ್ತಿದ ತಕ್ಷಣ ನಿಮ್ಮ ಪರೀಕ್ಷೆ ಅಂಕಪಟ್ಟಿ ಸಿಗಲಿದೆ.








