ಹಳೆ ಪದ್ಧತಿಯೂ ಹೋಯ್ತು.. ಲೈಫು ಹೋಯ್ತು!
– ಓಡುವ ಜಗತ್ತಲ್ಲಿ ಈಗ ಓಡಿದವನೇ ಜಾಣ…
– ಮರೆಯಾದ ಹಳೆಯ ಸಂಪ್ರದಾಯ ಮತ್ತು ಜೀವನ ಶೈಲಿ
– ಸಂಸ್ಕೃತಿಯ ಮೌಲ್ಯಗಳನ್ನು ಉಳಿಸಿಕೊಳ್ಳುವುದು ನಮ್ಮ ಪೀಳಿಗೆಯ ಪ್ರಮುಖ ಹೊಣೆ
– ಮಾನವೀಯ ಮೌಲ್ಯಗಳು, ಪ್ರಾಮಾಣಿಕತೆಗೆ ಬೆಲೆ ಇಲ್ಲವಯ್ಯಾ…!
ಸಂಸ್ಕೃತಿಯ ತವರೂರು, ಕಲೆ, ಸಾಹಿತ್ಯ, ಸಂಪ್ರದಾಯಗಳ ಸೂರು. ಭಾರತದ ಹಿಂದೂ ಸಂಪ್ರದಾಯವು ಅತ್ಯಂತ ಪವಿತ್ರವಾದದ್ದು. ಏಕೆಂದರೆ ಭಾರತದ ಇತಿಹಾಸದಲ್ಲಿ ಹಿಂದೂ ಧರ್ಮವೂ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಆದರೆ ವಿಪರ್ಯಾಸವೆಂದರೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಆಧುನೀಕರಣ , ಪಾಶ್ಚಾತ್ಯ ಸಂಸ್ಕೃತಿ ಸೇರಿದಂತೆ ಹೀಗೆ ಅನೇಕ ಕಾರಣಗಳಿಂದಾಗಿ ನಮ್ಮ ಪ್ರಾಚೀನ ಸಂಪ್ರದಾಯ ಮತ್ತು ಜೀವನ ಶೈಲಿಯಲ್ಲಿ ಬದಲಾವಣೆ ಕಾಣುತ್ತಿದೆ. ಇದರಿಂದಾಗಿ ಮಾನವೀಯ ಮೌಲ್ಯಗಳು ಕುಂಠಿತವಾಗಿ, ಸಂಸ್ಕೃತಿಯೂ ನಶಿಸಿಹೋಗುತ್ತಿದೆ. ಒಳ್ಳೆತನ, ಪ್ರಾಮಾಣಿಕತೆ ಮರೆಯಾಗುತ್ತಿದೆ. ಆಧುನಿಕ ಲೋಕದ ವೇಗದಲ್ಲಿ ಹಣ ಮೊದಲ ಸ್ಥಾನ ಪಡೆಯುತ್ತಿದೆ. ಹಳೆಯ ಸಂಪ್ರದಾಯ ಮತ್ತು ಜೀವನಶೈಲಿ ಬದಲಾವಣೆಯ ಪ್ರಮುಖ ಕಾರಣಗಳನ್ನು ಹುಡುಕುತ್ತಾ ಹೋದರೆ ಒಂದಷ್ಟು ಪ್ರಭಾವಗಳು ಇಲ್ಲಿ ಕಾಣುತ್ತವೆ.
ಪಾಶ್ಚಾತ್ಯ ಸಂಸ್ಕೃತಿಯ ಪರಿಣಾಮ
ಪಾಶ್ಚಾತ್ಯ ದೈನಂದಿನ ಜೀವನ, ಫ್ಯಾಷನ್, ಈಗಿನ ಆಹಾರ, ಡಿಜೆ ಹಾಡುಗಳು ಹಾಗೂ ಪಬ್ ಚಟುವಟಿಕೆಗಳು ನಮ್ಮ ಸಂಸ್ಕೃತಿಯ ಮೇಲೆ ಗಾಢ ಪ್ರಭಾವ ಬೀರಿವೆ. “ಜೀನ್ಸ್ ಮತ್ತು ಟಿ-ಶರ್ಟ್” ಹಾಗೂ “ಫಾಸ್ಟ್ ಫುಡ್” ಎಂಬ ಪಾಶ್ಚಾತ್ಯ ಪ್ರಭಾವದಿಂದ ಸಾಂಪ್ರದಾಯಿಕ ಉಡುಗೆ ಅಥವಾ ಆಹಾರ ಪದ್ಧತಿಗಳೇ ನಶಿಸಿ ಹೋಗುತ್ತಿರುವುದು ಕಣ್ಣ ಮುಂದೆ ಎದ್ದು ಕಾಣುತ್ತಿದೆ. ಸಾಮಾಜಿಕ ಜಾಲ ತಾಣ, ಟಿವಿಯಲ್ಲಿ ನೋಡುವುದೇ ನಿಜ ಎಂಬ ಭ್ರಮೆ ನಮ್ಮ ಬದುಕನ್ನು ನಿಧಾನವಾಗಿ ಬಲಿ ತೆಗೆದುಕೊಳ್ಳುತ್ತಿದೆ. ಸಂಬಂಧಗಳು ಈಗ ಫ್ಯಾಷನ್ ಆಗಿವೆ. ಪರಸ್ಪರ ಗೌರವ, ಅಭಿಮಾನಗಳು ಮರೆಯಾಗಿವೆ. ಕೂಡು ಕುಟುಂಬಗಳು ಇಲ್ಲದೆ ಯುವ ಜನತೆಯ ಬದುಕಿಗೆ ಒಂದು ಗುರಿ- ಗುರು ಇಲ್ಲವಾಗಿದೆ.
ಆರ್ಥಿಕ ಬದಲಾವಣೆ!
ಹಳೆಯ ಕಾಲದಲ್ಲಿ ಕೃಷಿ, ಕರಕುಶಲ ಮತ್ತು ಸ್ಥಳೀಯ ವೃತ್ತಿಗಳನ್ನು ಜೀವನಾಧಾರವಾಗಿ ಬಳಸಲಾಗುತ್ತಿತ್ತು. ಈಗ ಆರ್ಥಿಕ ಚಟುವಟಿಕೆಗಳು ಕೈಗಾರಿಕೆ, ತಂತ್ರಜ್ಞಾನ, ಮತ್ತು ಐಟಿ ಕ್ಷೇತ್ರದ ಕಡೆ ಹೆಚ್ಚು ಗಮನ ಹರಿಸುತ್ತಿರುವುದರಿಂದ ಹಳೆಯ ವೃತ್ತಿಗಳು ಮತ್ತು ಸಂಬಂಧಿತ ಜೀವನಶೈಲಿಗಳು ಮೌನವಾಗುತ್ತಿವೆ. ದುಡ್ಡೇ ಪ್ರಾಧಾನ್ಯತೆ ಪಡೆದಿದ್ದು ಸೇವೆಗೆ ಬೆಲೆ ಇಲ್ಲವಾಗಿದೆ.
ಹಳ್ಳಿಯಿಂದ ನಗರಕ್ಕೆ ವಲಸೆ
ಹೆಚ್ಚಿನ ಜನರು ಉದ್ಯೋಗ, ಶಿಕ್ಷಣ ಅಥವಾ ಜೀವನಮಟ್ಟವನ್ನು ಹೆಚ್ಚಿಸಲು ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇದರಿಂದ ಹಳ್ಳಿಗಳ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ವೈಶಿಷ್ಟ್ಯತೆಗಳು ಕಣ್ಮರೆಯಾಗಿದೆ. ಹಳ್ಳಿಗಳು ವೃದ್ಧರ ಆಶ್ರಮಗಳಾಗುತ್ತಿವೆ. ಕೃಷಿ ಮರೆಯಾಗುತ್ತಿದೆ.ಹಳೆಯ ಬಾಂಧವ್ಯ ಮಾಸಿ ಹೋಗುತ್ತಿದೆ. ಒಟ್ಟಿನಲ್ಲಿ ಆಧುನಿಕ ಬದುಕಿನ ಆಸೆಗಳು ಸಂಬಂಧಗಳಿಗೂ ಕೊಳ್ಳಿ ಇಟ್ಟಿವೆ. ಮಾಧ್ಯಮ ಮತ್ತು ಗ್ಲೋಬಲೈಸೇಶನ್ ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಪಾಶ್ಚಾತ್ಯ ಚಟುವಟಿಕೆಗಳನ್ನು ಹೆಚ್ಚು ಪ್ರಚಾರ ಮಾಡುತ್ತಿದೆ.
ಇದು ಯುವಜನರನ್ನು ತಮ್ಮ ಮೂಲ ಸಂಸ್ಕೃತಿಯ ಬದಲು ಪಾಶ್ಚಾತ್ಯ ಶೈಲಿಯ ಕಡೆ ಆಕರ್ಷಿಸುತ್ತಿದೆ. ನಮ್ಮ ಸಾಂಸ್ಕೃತಿಕ ವೈಭವಗಳು ಹಾಸ್ಯಪ್ರಾಯವಾಗುತ್ತಿದ್ದು, ಮುಂದಿನ ತಲೆಮಾರುಗಳ ಬಗೆ ನೆನೆದರೆ ಭಯ ಉಂಟಾಗುವುದು ಸಹಜ. ಪಾಶ್ಚಾತ್ಯ ಆಹಾರ ಪದ್ಧತಿಗಳು ಮತ್ತು ನೈಜ ಪ್ರಾಕೃತಿಕ ಜೀವನ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೇ ,ಪಾಶ್ಚಾತ್ಯ ಸಂಸ್ಕೃತಿಯ ಅಳವಡಿಕೆ ನಮ್ಮ ಭಾಷೆ, ಕಲೆ, ಮತ್ತು ಪರಂಪರೆಯ ಮಹತ್ವವನ್ನು ಕುಗ್ಗಿಸಿದೆ. ಮಾಧ್ಯಮಗಳು ಕೂಡ ತನ್ನ ಹೊಣೆಗಾರಿಕೆ ಮರೆತಿವೆ. ಅತೀರಂಜಿತ ಟಿ. ಆರ್ ಪಿ ಕಾರಣಕ್ಕೆ ಸಮಾಜಕ್ಕೆ ಬೇಕಾದ ಮೌಲ್ಯಕ್ಕಿಂತ ಬೇಡವಾದ್ದನ್ನೇ ನೀಡುತ್ತಿದೆ. ಜನ ಕೂಡ ಈಗ ನಕಾರಾತ್ಮಕ ವಿಷಯಗಳಿಗೆ ಹೆಚ್ಚು ಮನ್ನಣೆ ನೀಡುತ್ತಿರುವುದು ದುರಂತ.
ಹಳೆ ಸಂಸ್ಕೃತಿ ಕಾಪಾಡೋಣ.. ಭಾರತ ಗಟ್ಟಿಗೊಳಿಸೋಣ!
ಸಂಪ್ರದಾಯ ಉಳಿಸುವ ಮಾರ್ಗವೆಂದರೆ ಸಾಂಸ್ಕೃತಿಕ ಶಿಕ್ಷಣ, ಪದ್ಧತಿ, ಪರಂಪರೆಯನ್ನು ಶಾಲೆ ಮತ್ತು ಕಾಲೇಜುಗಳಲ್ಲಿ ಮಕ್ಕಳಿಗೆ ಪರಿಚಯಿಸಬೇಕು. ಹಬ್ಬ ಮತ್ತು ಹಳೆಯ ಆಚರಣೆಗಳನ್ನು ಮರು ಆಚರಿಸಿ, ಹಬ್ಬಗಳಿಗೆ ಪುನರ್ಜೀವ ನೀಡುವ ಪ್ರಯತ್ನ ಅಗತ್ಯವಾಗಿದೆ. ಹಳ್ಳಿಗಳ ಸಾಮೂಹಿಕ ಆಚಾರ-ವಿಚಾರಗಳ ಪ್ರಾಮುಖ್ಯತೆಯನ್ನು ಕಾಪಾಡಿಕೊಳ್ಳಬೇಕು. ಆಧುನೀಕರಣ ಅನಿವಾರ್ಯವಾದರೂ, ನಮ್ಮ ಸಂಸ್ಕೃತಿಯ ಮೌಲ್ಯಗಳನ್ನು ಉಳಿಸಿಕೊಳ್ಳುವುದು ನಮ್ಮ ಪೀಳಿಗೆಯ ಪ್ರಮುಖ ಹೊಣೆಗಾರಿಕೆಯಾಗಿದೆ. ಭವ್ಯ ಭಾರತದ ಒಗ್ಗಟ್ಟು ನಮ್ಮ ಮೂಲ ಸಂಸ್ಕೃತಿ ಹಾಗೂ ಸನಾತನ ಸಂಪ್ರದಾಯದಲ್ಲೇ. ಹಾಗಾಗಿ ನಾವೆಲ್ಲರೂ ಮತ್ತೆ ಭವ್ಯ ಭಾರತ ಕಟ್ಟುವ ಸಂಕಲ್ಪ ತೊಡಬೇಕಿದೆ.








