ತುಂಗಾನಗರದಲ್ಲಿ ಯುವಕನ ಶವ ಪತ್ತೆ; ಗೆಳೆಯನ ವಿರುದ್ಧವೇ ಕೊಲೆ ಆರೋಪ!
– ಶಿವಮೊಗ್ಗದ ತುಂಗಾನಗರದಲ್ಲಿ ಯುವಕನ ಅನುಮಾನಾಸ್ಪದ ಸಾವು.
– ತೋಟದ ಬಳಿ ಪತ್ತೆಯಾದ ಮಂಜುನಾಥ್ (24) ಮೃತದೇಹ.
– ಹಣಕ್ಕಾಗಿ ಗೆಳೆಯ ಸಂತೋಷ್ನಿಂದ ಕೊಲೆ ಆರೋಪ ಮಾಡಿದ ಅಕ್ಕ ಲಕ್ಷ್ಮೀದೇವಿ.
ಶಿವಮೊಗ್ಗ: ನಗರದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಹಣಕ್ಕಾಗಿ ಗೆಳೆಯನೇ ಕೊಲೆ ಮಾಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮೇಲಿನ ತುಂಗಾನಗರ ನಿವಾಸಿ ಮಂಜುನಾಥ್ (24) ಎಂಬ ಯುವಕ ಕಾಮತ್ ಲೇಔಟ್ನ ತೋಟವೊಂದರ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಮೃತ ಮಂಜುನಾಥ್ ಅಡಿಕೆ ಆರಿಸುವ ಕೆಲಸ ಮಾಡುತ್ತಿದ್ದನು. ವಿಪರೀತ ಕುಡಿತದ ಚಟ ಹೊಂದಿದ್ದ ಈತ, ಒಂದು ತಿಂಗಳ ಹಿಂದಷ್ಟೇ ಕೆಲಸ ಬಿಟ್ಟು ಮನೆಯಲ್ಲಿದ್ದನು. ನಿನ್ನೆ ಬೆಳಿಗ್ಗೆ ಕೆಲಸಕ್ಕೆಂದು ಮನೆಯಿಂದ ಹೋದವನು ಇಂದು ಹೆಣವಾಗಿ ಪತ್ತೆಯಾಗಿದ್ದಾನೆ.
ಗೆಳೆಯನ ಮೇಲೆ ಅಕ್ಕನ ಗಂಭೀರ ಆರೋಪ:
ಮಂಜುನಾಥ್ ಸಾವು ಸಹಜ ಸಾವಲ್ಲ, ಅದು ಆತನ ಗೆಳೆಯ ಸಂತೋಷ್ ಮಾಡಿದ ಕೊಲೆ ಎಂದು ಮೃತನ ಅಕ್ಕ ಲಕ್ಷ್ಮೀದೇವಿ ಆರೋಪಿಸಿದ್ದಾರೆ. “ನನ್ನ ತಮ್ಮನ ಬಳಿ ಸುಮಾರು 20 ರಿಂದ 30 ಸಾವಿರ ಹಣವಿತ್ತು. ಆ ಹಣವನ್ನು ಖರ್ಚು ಮಾಡಿಸುವ ಉದ್ದೇಶದಿಂದಲೇ ಗೆಳೆಯ ಸಂತೋಷ್ ನಿನ್ನೆ ಮನೆಗೆ ಬಂದು ಆತನನ್ನು ಕರೆದುಕೊಂಡು ಹೋಗಿದ್ದ. ಈಗ ನನ್ನ ತಮ್ಮ ಶವವಾಗಿದ್ದಾನೆ, ಆದರೆ ಆತನ ಗೆಳೆಯ ನಾಪತ್ತೆಯಾಗಿದ್ದಾನೆ,” ಎಂದು ಲಕ್ಷ್ಮೀದೇವಿ ಕಣ್ಣೀರಿಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಸೋಕೋ (SOCO) ತಂಡ ಹಾಗೂ ತುಂಗಾನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಜುನಾಥ್ ಸಾವು ಕುಡಿತದ ಅಮಲಿನಲ್ಲಿ ಸಂಭವಿಸಿದೆಯೇ ಅಥವಾ ಹಣಕ್ಕಾಗಿ ನಡೆದ ಕೊಲೆಯೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಸದ್ಯ ನಾಪತ್ತೆಯಾಗಿರುವ ಆರೋಪಿತ ಗೆಳೆಯ ಸಂತೋಷ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.








