ರಾಜ್ಯದಲ್ಲಿ ಬಿಸಿಲ ತಾಪಕ್ಕೆ ಮೊದಲ ಬಲಿ..!
– ಬೆಂಗಳೂರು: ಬಿಟ್ ಕಾಯಿನ್ ದಂಧೆ; 17 ಕಡೆಗಳಲ್ಲಿ ದಾಳಿ
– ಚಿಕ್ಕಮಗಳೂರು: ನಾಯಿಗಳು ಕಚ್ಚಿ ಬಾಲಕನ ಸ್ಥಿತಿ ಗಂಭೀರ!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕಳಸ: ಇತ್ತೀಚಿಗೆ ಅನೇಕ ಕಡೆ ನಾಯಿಗಳ ಹಾವಳಿ ಹೆಚ್ಚಾಗಿದೆ. ಈ ನಡುವೆ ಕಾಫಿ ತೋಟದಲ್ಲಿ ಐದರಿಂದ ಆರು ಸಾಕು ನಾಯಿಗಳು ಭೀಕರವಾಗಿ ಕಚ್ಚಿ ಬಾಲಕ ಗಾಯಗೊಂಡ ಘಟನೆ ಕಳಸದ ಕೆಳಗೂರು ಗ್ರಾಮದಲ್ಲಿ ನಡೆದಿದೆ. ತಮಿಳುನಾಡು ಮೂಲದ ಕಾರ್ಮಿಕರ ಕುಟುಂಬದ ಏಳು ವರ್ಷದ ಮಗುವೊಂದು ಗಂಭೀರವಾಗಿ ಗಾಯಗೊಂಡಿದೆ. ಇತರ ಕಾರ್ಮಿಕ ಮಕ್ಕಳೊಂದಿಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಗಾಯಾಳು ಮಗುವನ್ನು ಮಾಧವ ಎಂದು ಗುರುತಿಸಲಾಗಿದ್ದು, ಅವನ ತಲೆ,ಭುಜ ಮತ್ತು ಕುತ್ತಿಗೆ ಭಾಗದಲ್ಲಿ ತೀವ್ರತರವಾದ ಗಾಯಗಳಾಗಿವೆ. ಮಗುವನ್ನು ಕಳಸ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ, ಪ್ರಥಮ ಚಿಕಿತ್ಸೆಯನ್ನು ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಬೀದರ್: ಬಿಸಿಲ ತಾಪಕ್ಕೆ ಮೊದಲ ಬಲಿ
ಬೀದರ್: ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಬಿಸಿಲಿನ ತಾಪ ಅಧಿಕವಾಗಿದ್ದು, ದಿನದಿಂದ ದಿನಕ್ಕೆ ಇದರ ಪ್ರಮಾಣ ಹೆಚ್ಚಳವಾಗುತ್ತಿದೆ. ಅದರಲ್ಲೂ ಬೀದರ್ ಜಿಲ್ಲೆಯಲ್ಲಿ ಬಿಸಿಲಿನ ತೀವ್ರತೆ ದುಪ್ಪಟ್ಟಾಗಿದ್ದು, ಮನೆಯಿಂದ ಹೊರಬರಲಾಗದಷ್ಟು ವಿಪರೀತವಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಯುವಕನೊಬ್ಬ ಕುಸಿದು ಬಿದ್ದು ಮೃತಪಟ್ಟ ಘಟನೆ, ಸೋಮವಾರದಂದು ನಡೆದಿದೆ. ಪರಿಣಾಮವಾಗಿ ಕರ್ನಾಟಕದಲ್ಲಿ ಬಿಸಿಲಿನ ತೀವ್ರತೆಗೆ ಮೊದಲ ಬಲಿಯಾಗಿದೆ ಎಂದು ಹೇಳಲಾಗುತ್ತಿದೆ. ಮೃತಪಟ್ಟ ಯುವಕನನ್ನು ಉತ್ತರ ಪ್ರದೇಶ ಮೂಲದ, ಮಿರ್ಜಾಪುರ ಪಲ್ಲಾದ ನಿವಾಸಿ ಮೊಹಮ್ಮದ್ ಸಮೀರ್ ಎಂದು ಗುರುತಿಸಲಾಗಿದೆ.
ಬಿಸಿಲಿನಿಂದ ದಾಹಗೊಂಡ ಸಮೀರ್, ಮೆಕ್ಯಾನಿಕ್ ಅಂಗಡಿಯೊಂದರ ಬಳಿ ನೀರು ಕುಡಿದು, ತಲೆ ಸುತ್ತಿ ಬರುತ್ತಿದೆ ಎಂದು ಹೇಳಿ, ಕೆಲವು ಸಮಯ ವಿಶ್ರಾಂತಿ ಪಡೆದು, ಬಳಿಕ ಕಾರ್ಯನಿಮಿತ್ತ ಡಿಗ್ಗಿ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಸಿಸಿ ಕ್ಯಾಮೆರಾದಲ್ಲಿ ಈ ದೃಶ್ಯಾವಳಿಯು ದಾಖಲಾದ ಕಾರಣ, ಖಚಿತವಾದ ಮಾಹಿತಿ ಲಭಿಸಿದ್ದು, ಘಟನಾ ಸ್ಥಳಕ್ಕೆ ಸಿಪಿಐ ಶ್ರೀಕಾಂತ್ ಅಲ್ಲಾಪುರೆ, ರೈಟರ್ ವೈಜನಾಥ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ, ಪರಿಶೀಲನೆಯನ್ನು ನಡೆಸಿದ್ದಾರೆ ಎಂದು ಸ್ವತಃ ಅಲ್ಲಿನ ಪಿಎಸ್ಐ ಆಶಾ ರಾಠೋಡ್ ಅವರು ಮಾಹಿತಿ ನೀಡಿದ್ದಾರೆ. ಮೊಹಮ್ಮದ್ ಸಮೀರ್ ಅವರ ತಂದೆ ಲಯಿಕ್ ಅಹ್ಮದ್ ಅವರು ನೀಡಿರುವ ಹೇಳಿಕೆಯ ಆಧಾರದ ಮೇಲೆ ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಬೆಂಗಳೂರು: ಬಿಟ್ ಕಾಯಿನ್ ದಂಧೆ; 17 ಕಡೆಗಳಲ್ಲಿ ದಾಳಿ
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಬೆಳ್ಳಂಬೆಳಗ್ಗೆ ದಾಳಿ ನಡೆದಿದೆ. ಬಹುಕೋಟಿ ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿಯಾಗಿರುವ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜೊತೆ ಮೊಹಮ್ಮದ್ ನಲಪಾಡ್ ಆರ್ಥಿಕ ವ್ಯವಹಾರ ನಡೆಸಿರುವ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ಈ ದಾಳಿ ನಡೆಸಿದೆ ಎನ್ನಲಾಗಿದೆ. ಶಾಂತಿನಗರದ ಕಾಂಗ್ರೆಸ್ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎನ್ಎ ಹ್ಯಾರಿಸ್ ಮತ್ತು ಅವರ ಮಗ ರಾಜ್ಯ ಯುವ ಕಾಂಗ್ರೆಸ್ ನ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಇಬ್ಬರಿಗೂ ಸಂಬಂಧಿಸಿದಂತ ಸುಮಾರು 17 ಸ್ಥಳಗಳಲ್ಲಿ ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ಒಂದೇ ಸಮಯದಲ್ಲಿ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ಶ್ರೀಕಿ ಮತ್ತು ನಲಪಾಡ್ ಅವರ ನಡುವೆ ಕಳೆದ ಆರು ವರ್ಷಗಳಿಂದ ಸುಮಾರು 4.5 ಕೋಟಿ ರೂಪಾಯಿಗಳಷ್ಟು ಆರ್ಥಿಕ ವಹಿವಾಟು ನಡೆದಿದ್ದು, ಇದರಿಂದ ಅನುಮಾನಗೊಂಡ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹಲವು ಮಹತ್ವದ ದಾಖಲೆಗಳು ಮತ್ತು ಡಿಜಿಟಲ್ ಪುರಾವೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಅಷ್ಟೇ ಅಲ್ಲದೆ ಅಶೋಕ ನಗರದಲ್ಲಿರುವ ಮೊಹಮ್ಮದ್ ನಲಪಾಡ್ ಅವರ ಮನೆ, ಶಾಂತಿನಗರ ಮತ್ತು ಬಿಡಿಎ ಕಛೇರಿಯ ಸುತ್ತಮುತ್ತಲಿನ ಪ್ರದೇಶ, ಹ್ಯಾರಿಸ್ ಕುಟುಂಬಕ್ಕೆ ಸೇರಿದ ಶಿಕ್ಷಣ ಸಂಸ್ಥೆ, ವ್ಯಾವಹಾರಿಕ ಕ್ಷೇತ್ರ, ನಲಪಾಡ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇಬ್ಬರು ಪ್ರಮುಖ ಉದ್ಯಮಿಗಳ ಮನೆಗಳ ಮೇಲೂ ದಾಳಿ ನಡೆಸಲಾಗಿದೆ. ಪ್ರಸ್ತುತ ಬೆಂಗಳೂರಿನ ಹಲವು ಕಡೆ ದಾಳಿ ನಡೆಸಲಾಗಿದೆ. ಮಾಹಿತಿಯ ಪ್ರಕಾರ ಈಗಾಗಲೇ ಎಸ್ಐಟಿ ವಿಚಾರಣೆಗೆ ಒಳಪಟ್ಟಿರುವ ನಲಪಾಡ್ ಇದೀಗ ಕೇಂದ್ರ ತನಿಖಾ ಸಂಸ್ಥೆಯ ದಾಳಿಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷದ ಕೆಲವರು ಇದು ರಾಜಕೀಯ ಪ್ರೇರಿತ ದಾಳಿ ಎಂದು ಆರೋಪಿಸಿದರೆ, ಬಿಜೆಪಿ ಪಕ್ಷದವರು ಭ್ರಷ್ಟಾಚಾರದ ವಿರುದ್ಧದ ಕ್ರಮ ಎಂದು ಸಮರ್ಥಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.








