ರಾಜೇಗೌಡ ಮತ್ತೆ ಶೃಂಗೇರಿ ಶಾಸಕ!
– ರಾಜೇಗೌಡಗೆ ಸುಪ್ರೀಂನಿಂದ ಸಮ್ಮತಿ
– ರಾಜೇಗೌಡರನ್ನೇ ಶಾಸಕ ಸ್ಥಾನದಲ್ಲಿ ಮುಂದುವರಿಸಲು ಸೂಚನೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಶೃಂಗೇರಿ: ಶೃಂಗೇರಿ ಅಂಚೆ ಮತ ವಿವಾದ ಇದೀಗ ಮತ್ತೊಂದು ಶಾಕಿಂಗ್ ನ್ಯೂಸ್ ಕೊಟ್ಟಿದೆ. ಟಿ.ಡಿ.ರಾಜೇಗೌಡರಿಗೆ ‘ಸುಪ್ರೀಂ’ ರಿಲೀಫ್ ನೀಡಿದ್ದು , ಮತ್ತೆ ಶಾಸಕ ಸ್ಥಾನ ಸಿಕ್ಕಿದೆ. ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಿಂದ ಶಾಸಕ ಸ್ಥಾನ ಕಳೆದುಕೊಂಡಿದ್ದ ಕಾಂಗ್ರೆಸ್ನ ಟಿ.ಡಿ.ರಾಜೇಗೌಡ ಅವರಿಗೆ ಸುಪ್ರಿಂ ಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಹೈಕೋರ್ಟ್ನ ಆದೇಶಕ್ಕೆ ಮಧ್ಯಂತರ ತಡೆ ನೀಡಿ ಶಾಸಕ ಸ್ಥಾನವನ್ನು ಮುಂದುವರೆಸುವಂತೆ ಆದೇಶಿಸಿ, ಚುನಾವಣಾ ಆಯೋಗಕ್ಕೆ ನೋಟೀಸ್ ನೀಡಿ ವಿಚಾರಣೆಯನ್ನು ಮೇ.21 ಕ್ಕೆ ಮುಂದೂಡಿದೆ.
ಅಂಚೆ ಮತಗಳ ಮರು ಎಣಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜೇಗೌಡರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್ ನ್ಯಾಯಪೀಠ ಚುನಾವಣಾ ಆಯೋಗಕ್ಕೆ ಮತ ಎಣಿಕೆಯ ಸಂಪೂರ್ಣ ವರದಿ ನೀಡುವಂತೆ ಸೂಚನೆ ನೀಡಿದೆ. ಪ್ರಸ್ತುತ ಹಿಂದಿನ ಚುನಾವಣಾ ಆಯೋಗದ ಆದೇಶದಂತೆ ರಾಜೇಗೌಡ ಅವರು ಶೃಂಗೇರಿ ಕ್ಷೇತ್ರದ ಶಾಸಕರಾಗಿ ಮುಂದುವರೆಯಲಿದ್ದಾರೆ. ಈ ನಡುವೆ ಕರ್ನಾಟಕ ಹೈಕೋರ್ಟ್ ನೀಡಿದ ಆದೇಶಕ್ಕೂ ಕೂಡ ತಡೆ ನೀಡಲಾಗಿದೆ.
ಕಳೆದ ಒಂದು ವಾರದಿಂದ ಈ ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು. ಬಿಜೆಪಿಯ ಜೀವರಾಜ್ ಅವರು ಅಂಚೆ ಮತಗಳ ಎಣಿಕೆಯಲ್ಲಿ ಲೋಪವಿಧೆಯೆಂದು ಪ್ರಶ್ನಿಸಿ ನ್ಯಾಯಾಲಯದ ಮೊರೆಹೋಗಿದರು. ಮರು ಎಣಿಕೆಗೆ ನ್ಯಾಯಾಲಯ ಆದೇಶ ನೀಡಿತ್ತು. ಮರು ಎಣಿಕೆ ಸಂದರ್ಭದಲ್ಲಿ ಜೀವರಾಜ್ ಅವರ ಕೈ ಮೇಲಾಗಿ ಆಯೋಗ ಜೀವರಾಜ್ ಅವರನ್ನು ಶಾಸಕ ಎಂದು ಘೋಷಿಸಿ ದೃಢೀಕರಣ ಪತ್ರ ನೀಡಿತ್ತು.
ಕಳೆದ 4 ದಿನಗಳ ಹಿಂದಷ್ಟೆ ಅವರು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು. ಅಂಚೆ ಮತಗಳ ಮರು ಎಣಿಕೆಯಲ್ಲಿ ಲೋಪವನ್ನು ಪ್ರಶ್ನಿಸಿ ಟಿ.ಡಿ.ರಾಜೇಗೌಡ ಅವರು ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದರು. ಇಂದು ನ್ಯಾಯಾಲಯ ತಡೆ ನೀಡಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚಿಸಿದ ಪರಿಣಾಮ ರಾಜೇಗೌಡರ ಶಾಸಕಗಿರಿ ಮರುಕಳಿಸಿದಂತಾಗಿದೆ.








