ಕರ್ನಾಟಕ ಟಾಪ್ 5 ನ್ಯೂಸ್
ಅಕಾಲಿಕ ಮಳೆಯಿಂದಾಗಿ ಈ ವರ್ಷ ಭಾರೀ ಅನಾಹುತ!
– ಭೂಮಿ ತಲ್ಲಣ; ಕೋಡಿಮಠದ ಶ್ರೀ ಹೇಳಿಕೆ
ಪ್ರಮಾಣ ಸ್ವೀಕರಿಸಿದ ರಾಜ್ಯದ ಅತೀ ಕಿರಿಯ ಶಾಸಕ!
– 27 ವರ್ಷದ ಸಮರ್ಥ್ ಶ್ಯಾಮನೂರು ಅಧಿಕಾರ ಸ್ವೀಕಾರ
ನಾರಾಯಣ ಗುರು ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಉದ್ಘಾಟನೆ
ಮದ್ಯಪ್ರಿಯರಿಗೆ ಆಘಾತ: ಮದ್ಯ ದರ ಭಾರೀ ಏರಿಕೆ!
ಕೇರಳದಲ್ಲಿ ಸಿಡಿಲಿಗೆ ನಾಲ್ವರು ಬಲಿ: ರಾಜ್ಯದಲ್ಲೂ ಭಾರೀ ಮಳೆ!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಸೊರಬ: ಈ ಬಾರಿ ಸಕಾಲಿಕ ಮಳೆಯಾಗದೆ ಅಕಾಲಿಕ ಮಳೆಯಿಂದಾಗಿ ಜಲಕಂಟಕಗಳು ಎದುರಾಗಲಿದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಭವಿಷ್ಯ ನುಡಿದಿದ್ದಾರೆ. ಸೊರಬದ ಜಡೆ ಸಂಸ್ಥಾನ ಮಠದಲ್ಲಿ ಮಾತನಾಡಿರುವ ಶ್ರೀಗಳು “ರಾಜ್ಯದಲ್ಲಿ ಉತ್ತಮ ಮಳೆ ಬೆಳೆ ಆಗಲಿದೆ. ಆಕಸ್ಮಿಕವಾದ ಘಟನೆಗಳು ಎದುರಾಗಿ ದೊಡ್ಡ ದೊಡ್ಡ ನಗರಗಳು ಆಪತ್ತನ್ನು ಎದುರಿಸಲಿವೆ. ರಾಜಕಾರಣದಲ್ಲಿ ಅರಸನ ಅರಮನೆ ಕಳೆಗುಂದಿತು. ಪಟ್ಟದ ಆನೆ ಗಾಂಭೀರ್ಯ ನಡೆದೀತು. ಸತ್ಯ ಯಾವಾಗಲೂ ಕಹಿಯಾಗಿರುತ್ತದೆ, ಅಸತ್ಯ ಸಿಹಿಯಾಗಿರುತ್ತದೆ. ಹಿಂಗಾರು ಮಳೆ ಗಾಳಿಯ ಆರ್ಭಟ ಹೆಚ್ಚಳವಾಗಲಿದೆ. ಆದರೆ ಜನಜೀವನದ ಮೇಲೆ ಯಾವುದೇ ತೀವ್ರ ರೀತಿಯ ಪರಿಣಾಮವನ್ನುಂಟು ಮಾಡುವುದಿಲ್ಲ” ಎಂದು ತಿಳಿಸಿದ್ದಾರೆ.
ಪ್ರಮಾಣ ಸ್ವೀಕರಿಸಿದ ರಾಜ್ಯದ ಅತೀ ಕಿರಿಯ ಶಾಸಕ!
ದಾವಣಗೆರೆ ಶಾಸಕರಾಗಿ ಸಮರ್ಥ ಶ್ಯಾಮನೂರು ಬೆಂಗಳೂರಿನ ವಿಧಾನ ಸೌಧದಲ್ಲಿ ಗುರುವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ. ತಂದೆ ಸಚಿವ ಮಲ್ಲಿಕಾರ್ಜುನ, ತಾಯಿ ಸಂಸದೆ ಪ್ರಭಾ ಮಲ್ಲಿಕಾರ್ಜುನ ಸೇರಿ ದಾವಣಗೆರೆ ಭಾಗದ ಪ್ರಮುಖರು ಹಾಜರಿದ್ದರು. 1999 ರಲ್ಲಿ ಜನಿಸಿದ ಕೇವಲ 27 ವಯಸ್ಸಿನ ಸಮರ್ಥ್ ಅತೀ ಚಿಕ್ಕ ವಯಸ್ಸಿಗೆ MLA ಆಗಿದ್ದಾರೆ., ಸಮರ್ಥ್ ರವರು ಒಳ್ಳೆ ಕೆಲಸಗಳನ್ನು ಮಾಡಲಿ, ಸಮಾಜಕ್ಕೆ ಅಲ್ಲಿನ ಜನರಿಗೆ ಮೂಲ ಸೌಕರ್ಯಗಳನ್ನು ಪೂರೈಸಲಿ ಎಂಬ ಆಶಯ ನಮ್ಮದು.
ಮದ್ಯಪ್ರಿಯರಿಗೆ ಆಘಾತ: ಮದ್ಯ ದರ ಭಾರೀ ಏರಿಕೆ!
ಬೆಂಗಳೂರು: ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶವೊಂದು ಮದ್ಯಪ್ರಿಯರಲ್ಲಿ ಆಘಾತವನ್ನುಂಟು ಮಾಡಿದೆ. ಇನ್ನು ಮುಂದೆ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ಶೇಕಡ 20ರಷ್ಟು ತೆರಿಗೆಯನ್ನು ಹೆಚ್ಚಿಸುವ ಹೊಸ ನೀತಿಯೊಂದನ್ನು ಸರ್ಕಾರವು ಜಾರಿಗೊಳಿಸಿದೆ. ಆಲ್ಕೋಹಾಲ್ ಇನ್ ಬೇವರೇಜ್ ನೀತಿಯ ಪ್ರಕಾರ ಮದ್ಯದ ದರದಲ್ಲಿ ಶೇಕಡ 20 ರಿಂದ ಶೇಕಡ 30ರಷ್ಟು ಏರಿಕೆ ಕಂಡಿದೆ. ಹೊಸ ನಿಯಮದ ಪ್ರಕಾರ ಮದ್ಯದ ಬಾಟಲ್ ನಲ್ಲಿ ಇರುವ ಆಲ್ಕೋಹಾಲ್ ಅಂಶದ ಆಧಾರದ ಮೇಲೆ ತೆರಿಗೆ ನಿಗದಿಯಾಗಲಿದೆ.
ಅಂದರೆ ಹೆಚ್ಚು ಆಲ್ಕೋಹಾಲ್ ಹೊಂದಿರುವ ಮದ್ಯಕ್ಕೆ ಹೆಚ್ಚಿನ ತೆರಿಗೆ ಮತ್ತು ಕಡಿಮೆ ಆಲ್ಕೋಹಾಲ್ ಮದ್ಯಕ್ಕೆ ಕಡಿಮೆ ತೆರಿಗೆ ಎಂದು ತಿಳಿಸಲಾಗಿದೆ. ಈಗಾಗಲೇ ವಿಸ್ಕಿ, ರಮ್, ಬ್ರಾಂಡಿ ಮತ್ತು ಜಿನ್ ಸೇರಿದಂತೆ ಭಾರತೀಯ ಮದ್ಯದ ದರದಲ್ಲಿ ಶೇಕಡ 20ರಷ್ಟು ಏರಿಕೆಯಾಗಿದ್ದು, ಕರ್ನಾಟಕದಲ್ಲಿ 180 ಮಿಲಿ ಟೆಟ್ರಾ ಪ್ಯಾಕ್ ಗಳ ವಿಸ್ಕಿ, ರಮ್, ಬ್ರಾಂಡಿ, ಜಿನ್ ಮತ್ತು ವೋಡ್ಕಾ ಬೆಲೆಯು ಕನಿಷ್ಠ ಶೇಕಡ 20ರಷ್ಟು ಹೆಚ್ಚಳವಾಗಲಿದೆ ಎನ್ನುವ ಮಾಹಿತಿ ಲಭಿಸಿದೆ. ಕಡಿಮೆ ಆದಾಯವನ್ನು ಹೊಂದಿರುವ ವರ್ಗದವರು ಬಳಸುವ ಮೊದಲ ನಾಲ್ಕು ಸ್ಲ್ಯಾಬ್ ಗಳ ಮದ್ಯಗಳು ಹೆಚ್ಚು ದುಬಾರಿಯಾಗಿದ್ದು, ಇದರಲ್ಲಿ ಆಲ್ಕೋಹಾಲ್ ಪ್ರಮಾಣ ಸರಾಸರಿ ಶೇಕಡ 42ರಷ್ಟಿದೆ ಎನ್ನಲಾಗಿದೆ. ಈ ನಾಲ್ಕು ಸ್ಲ್ಯಾಬ್ ಗಳು ಎಕ್ಸೈಸ್ ಆದಾಯದಲ್ಲಿ ಶೇಕಡ 80ರಷ್ಟು ಪಾಲನ್ನು ಹೊಂದಿರುವುದರಿಂದ ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳಲ್ಲಿ ಎಂಆರ್ ಪಿಗಿಂತ ಹೆಚ್ಚು ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ನಾರಾಯಣ ಗುರು ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಉದ್ಘಾಟನೆ
ಬೆಂಗಳೂರಿನಲ್ಲಿ ಶ್ರೀ ನಾರಾಯಣ ಗುರು ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಉದ್ಘಾಟನಾ ಸಮಾರಂಭ ನಡೆದಿದ್ದು ಈಡಿಗ ಬಿಲ್ಲವ ಸಮುದಾಯಕ್ಕೆ ಇದೊಂದು ಅಭೂತಪೂರ್ವ ಕ್ಷಣವಾಗಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ನಿಗಮ ಘೋಷಣೆ ಮಾಡಿದ್ದು, ಇದೀಗ ಕಚೇರಿ ಸೌಲಭ್ಯ ನೀಡಿದೆ. ಸಂದರ್ಭದಲ್ಲಿ ಸಚಿವರು ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಶ್ರೀ ನಾರಾಯಣ ಗುರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮಂಜುನಾಥ ಪೂಜಾರಿ, ಮಾಜಿ ಸಚಿವರು ಬಿ ರಮಾನಾಥ್ ರೈ ಮತ್ತಿತರರು ಉಪಸ್ಥಿತರಿದ್ದರು.
ಕೇರಳದಲ್ಲಿ ಸಿಡಿಲಿಗೆ ನಾಲ್ವರು ಬಲಿ: ರಾಜ್ಯದಲ್ಲೂ ಭಾರೀ ಮಳೆ!
ಕೇರಳದ ಮಲಪ್ಪುರಂ ವ್ಯೂ ಪಾಯಿಂಟ್ನಲ್ಲಿ ಸಿಡಿಲಿನ ಅಬ್ಬರದಿಂದ ನಾಲ್ವರು ವಿದ್ಯಾರ್ಥಿಗಳ ದಾರುಣ ಸಾವು ಆಗಿದ್ದು ಮೂವರು ಗಂಭೀರ ಗಾಯಗೊಂಡಿದ್ದಾರೆ. ಮಲಪ್ಪುರಂ ಜಿಲ್ಲೆಯ ಮಂಕಡ ಪ್ರದೇಶದಲ್ಲಿ ಭೀಕರ ಗುಡುಗು–ಸಿಡಿಲಿನ ಅಬ್ಬರ ನಾಲ್ವರು ಯುವ ವಿದ್ಯಾರ್ಥಿಗಳ ಜೀವ ಬಲಿ ಪಡೆದಿರುವ ದುರ್ಘಟನೆ ಸೋಮವಾರ ಸಂಜೆ ಸಂಭವಿಸಿದೆ. ಘಟನೆಯಲ್ಲಿ ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.
ಘಟನೆ ನಡೆದ ಪ್ರದೇಶ ದಟ್ಟ ಕಾಡಿನ ಮಧ್ಯೆ ಇರುವ ದುರ್ಗಮ ವ್ಯೂ ಪಾಯಿಂಟ್ ಆಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡಚಣೆ ಉಂಟಾಯಿತು. ಇದೇ ವೇಳೆ ಭಾರೀ ಮಳೆಯೊಂದಿಗೆ ಗುಡುಗು–ಸಿಡಿಲಿನ ಆರ್ಭಟ ಹೆಚ್ಚಾಗಿದ್ದರಿಂದ ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ಸಂಕಷ್ಟ ಎದುರಿಸಿದರು. ಕರ್ನಾಟಕದಲ್ಲೂ ಈ ವಾರ ಎಲ್ಲೆಡೆ ಭಾರೀ ಸಿಡಿಲು ಗಾಳಿ ಸಮೇತ ಮಳೆ ಕಂಡು ಬಂದಿದೆ.








