ಕೊಪ್ಪ: ಅದ್ಧೂರಿಯಾಗಿ ನಡೆದ ದೇವಾಲಯದ 75ನೇ ವಾರ್ಷಿಕೋತ್ಸವ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕೊಪ್ಪ: ಇಲ್ಲಿನ ಸಿಎಸ್ಐ ಅರ್ನಾಲ್ಡ್ ಸ್ಮಾರಕ ದೇವಾಲಯದ 75ನೇ ವರ್ಷದ ವಾರ್ಷಿಕೋತ್ಸವ ಮತ್ತು ಅದರ ಅಂಗವಾಗಿ ಹಮ್ಮಿಕೊಂಡಿದ್ದ ನೂತನ ಘಂಟೆ ಗೋಪುರದ ಪ್ರತಿಷ್ಠೆ ಮತ್ತು ದೃಢೀಕರಣದ ಆರಾಧನಾ ಸಮಾರಂಭವು ಮೇ 3ರ ಭಾನುವಾರದಂದು ಅದ್ಧೂರಿಯಾಗಿ ನೆರವೇರಿತು. ಗೋಪುರದ ಘಂಟೆಯ ಉದ್ಘಾಟನೆಯನ್ನು ಮತ್ತು ವಿಶೇಷ ಆರಾಧನೆಯನ್ನು ಕರ್ನಾಟಕ ದಕ್ಷಿಣ ಸಭಾಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಷಪ್ ರೈಟ್ ರೆವರೆಂಡ್ ಹೇಮಚಂದ್ರ ಕುಮಾರ್ ಅವರು ನೆರವೇರಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು “ಆಲಯದ ಘಂಟೆಯ ಇತಿಹಾಸವನ್ನು ಅವಲೋಕಿಸಿದಾಗ ಅದು ಪ್ರಾರ್ಥನೆಯ ಕರೆಘಂಟೆಯಂತೆ ಉಪಯೋಗವಾಗಿದ್ದರೂ, ಸಮಯವನ್ನು ತಿಳಿಸಲು ಉಪಯೋಗವಾಗುತ್ತಿತ್ತು. ಇಂದು ಅದು ಸಮುದಾಯದ ಮಧ್ಯೆ ಒಡನಾಟದ ಪ್ರತೀಕದಂತಾಗಿದೆ” ಎಂದು ತಿಳಿಸಿದರು. ಆರಾಧನಾ ಸಭೆಯಲ್ಲಿದ್ದ ಆರು ಜನ ಮಕ್ಕಳಿಗೆ ದೃಢೀಕರಣ ಆಶೀರ್ವಾದವನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಸಿಎಸ್ಐ ಕೆಎಸ್ ಡಿಯ ಖಜಾಂಚಿಯಾದ ರೆವರೆಂಡ್ ಐವನ್ ಡಿ.ಸೋನ್ಸ್, ಸಹ ಕಾರ್ಯದರ್ಶಿಗಳಾದ ಸ್ಟೀಫನ್ ಕರ್ಕಡ, ಹಾಸನ-ಚಿಕ್ಕಮಗಳೂರು ಜಿಲ್ಲೆಗಳ ವಲಯಾಧ್ಯಕ್ಷರಾದ ರೆವರೆಂಡ್ ದೀಪಕ್ ವಿನಿತ್ ಸ್ವರೂಪ್, ಈ ಹಿಂದೆ ಸೇವೆ ಸಲ್ಲಿಸಿದ್ದ ರೆವರೆಂಡ್ ಪ್ರವೀಣ್ ಮಾಬೆನ್, ರೆವೆರೆಂಡ್ ದೀಪಕ್ ವಿ. ಶಾಂತರಾಜ್, ಬಿಷಪ್ ಚಾಪ್ಲೈನ್, ರೆವರೆಂಡ್ ಜೋಸೆಫ್ ಜಾಕ್ಸನ್, ಸಭಾಪಾಲಕರಾದ ರೆವೆರೆಂಡ್ ವಿಲ್ಸನ್ ಸಾಧು, ಸಭಾಪಾಲನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.








