ಕರಾವಳಿ ಟಾಪ್ ನ್ಯೂಸ್
•ಕಾರ್ಕಳ: ಮಣ್ಣು ತೆಗೆಯಲು ಹೋಗಿ ಮೂವರು ಅಪಾಯಕ್ಕೆ
•ಬೆಳ್ತಂಗಡಿ: ವೇಶ್ಯಾವಾಟಿಕೆ ದಂಧೆಯ ಮೇಲೆ ದಾಳಿ
• ಉಳ್ಳಾಲ: ಇಸ್ರೇಲ್ ಗೆ ತೆರಳಬೇಕಿದ್ದ ವ್ಯಕ್ತಿ ಆತ್ಮಹತ್ಯೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
•ಕಾರ್ಕಳ: ಮಣ್ಣು ತೆಗೆಯಲು ಹೋಗಿ ಮೂವರು ಅಪಾಯಕ್ಕೆ
ಕಾರ್ಕಳ: ಬಾವಿಯ ಮಣ್ಣು ತೆಗೆಯಲು ಹೋಗಿ ಮೂವರು ಅಪಾಯಕ್ಕೆ ಸಿಲುಕಿದ ಘಟನೆ, ಭಾನುವಾರದಂದು ಕುಕ್ಕುಂದೂರು ಅಶ್ವಥಪುರದಲ್ಲಿ ನಡೆದಿದೆ. ರಾಜೇಶ್ ಎನ್ನುವವರು ಬಾವಿಯ ಮಣ್ಣು ತೆಗೆಯಲೆಂದು ಇಳಿದಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದಾರೆ. ಇದನ್ನು ಗಮನಿಸಿದ ಪವನ್ ಮತ್ತು ಗೋಪಾಲ್ ನಾಯ್ಕ ಎನ್ನುವವರು ಪವನ್ ಅವರನ್ನು ರಕ್ಷಿಸಲು ಹೋಗಿ ಬಾವಿಯಿಂದ ಮೇಲೆ ಬರಲಾಗದೆ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕಾರ್ಕಳದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹರಸಾಹಸಪಟ್ಟು ಠಾಣಾಧಿಕಾರಿಯಾದ ಆಲ್ಬರ್ಟ್ ಮೋನಿಸ್ ಅವರ ನೇತೃತ್ವದಲ್ಲಿ ಮೂವರು ವ್ಯಕ್ತಿಗಳನ್ನು ಬಾವಿಯಿಂದ ಮೇಲಕ್ಕೆತ್ತಿ ರಕ್ಷಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಬಳಿಕ ಗಾಯಗೊಂಡಿದ್ದ ರಾಜೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎನ್ನುವ ಸಂಗತಿ ತಿಳಿದುಬಂದಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳ ತಕ್ಷಣದ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಅಪಾರ ಪ್ರಶಂಸೆ ವ್ಯಕ್ತವಾಗಿದೆ.
• ಬೆಳ್ತಂಗಡಿ: ವೇಶ್ಯಾವಾಟಿಕೆ ದಂಧೆಯ ಮೇಲೆ ದಾಳಿ
ಬೆಳ್ತಂಗಡಿ: ಕ್ಯಾಂಟೀನ್ ಒಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಿಖರ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಪೊಲೀಸರು ದಾಳಿ ನಡೆಸಿದ ಘಟನೆ ಕೆಇಬಿ ರಸ್ತೆಯಲ್ಲಿರುವ ಕ್ಯಾಂಟೀನ್ ನಲ್ಲಿ ನಡೆದಿದೆ. ಸುಂದರ್ ಶೆಟ್ಟಿ ಎನ್ನುವವರ ಮಾಲೀಕತ್ವದ ಕ್ಯಾಂಟೀನ್ ನಲ್ಲಿ ಮೂವರು ವ್ಯಕ್ತಿಗಳು ಈ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ. ಆರೋಪಿಗಳನ್ನು ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ನಿವಾಸಿ ಸುಂದರ್ ಶೆಟ್ಟಿ, ನಾವೂರು ಗ್ರಾಮದ ಉಸ್ಮಾನ್ ಮತ್ತು ಕಲ್ಲೇರಿ ನಿವಾಸಿ ಹೈದರ್ ಎಂದು ಗುರುತಿಸಲಾಗಿದೆ.
ಪ್ರಮುಖ ಆರೋಪಿಗಳಾದ ಸುಂದರ್ ಶೆಟ್ಟಿ ಮತ್ತು ಉಸ್ಮಾನ್ ಅವರಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದ್ದು, ಹೈದರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರಿದಿದೆ ಎನ್ನುವ ಮಾಹಿತಿ ಲಭಿಸಿದೆ. ಈ ಸಂದರ್ಭದಲ್ಲಿ ದಂಧೆಗೆ ಒಳಪಟ್ಟ 29 ವರ್ಷದ ಮಹಿಳೆಯೊಬ್ಬರನ್ನು ಪೊಲೀಸರು ರಕ್ಷಿಸಿ, ಬೆಳ್ತಂಗಡಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದ್ದು, ಬಳಿಕ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.
• ಉಳ್ಳಾಲ: ಇಸ್ರೇಲ್ ಗೆ ತೆರಳಬೇಕಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ, ಉಲ್ಲಾಳ ಹೊಯ್ಗೆ ಎನ್ನುವಲ್ಲಿ ನಡೆದಿದೆ. ಮೃತವ್ಯಕ್ತಿಯನ್ನು ಸೂರ್ಯಪ್ರಕಾಶ್ ಡಿಸೋಜಾ ಎಂದು ಗುರುತಿಸಲಾಗಿದೆ. ಕಳೆದ ಒಂದು ವರ್ಷದಿಂದ ಸೂರ್ಯಪ್ರಕಾಶ್ ಡಿಸೋಜಾ ಅವರು ಇಸ್ರೇಲ್ ನಲ್ಲಿ ಉದ್ಯೋಗದಲ್ಲಿದ್ದು, ತಂಗಿಯೊಂದಿಗೆ ಅಲ್ಲಿಯೇ ವಾಸವಾಗಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಸೂರ್ಯಪ್ರಕಾಶ್ ಡಿಸೋಜಾ ಮತ್ತವರ ಸಹೋದರಿ ಹುಟ್ಟೂರಿಗೆ ಬಂದಿದ್ದು, ಮೇ 17ರ ಶುಕ್ರವಾರದಂದು ಇಸ್ರೇಲ್ ಗೆ ಮರಳುವುದಿತ್ತು.
ಆದರೆ, ಮನೆಗೆ ಬಂದ ಸಂದರ್ಭದಲ್ಲಿ ಸೂರ್ಯಪ್ರಕಾಶ್ ಡಿಸೋಜಾ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸೂರ್ಯಪ್ರಕಾಶ್ ಡಿಸೋಜಾ ಅವರಿಗೆ ಎದೆ ನೋವು ನಿರಂತರವಾಗಿ ಕಾಡುತ್ತಿದ್ದು, ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ಈ ಯಾತನೆಯನ್ನು ಸಹಿಸಿಕೊಳ್ಳಲಾಗದೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೂರ್ಯಪ್ರಕಾಶ್ ಡಿಸೋಜಾ ಅವರ ಅಂತ್ಯಸಂಸ್ಕಾರವು ಮೇ 12ರ ಮಂಗಳವಾರದಂದು ತೊಕ್ಕೊಟ್ಟು ಚರ್ಚ್ ನಲ್ಲಿ ನಡೆಯಲಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.







