ನೀಟ್ ಪರೀಕ್ಷೆ ರದ್ದು: ಶೀಘ್ರದಲ್ಲೇ ಮರು ಪರೀಕ್ಷೆ!
– ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಿಬಿಐಗೆ: ವಿದ್ಯಾರ್ಥಿಗಳಿಗೆ ಕಿರಿಕಿರಿ
– ರಾಜ್ಯ ಬಿಜೆಪಿ ನಾಯಕರ ಮೌನಕ್ಕೆ ಶಿಕ್ಷಣ ಸಚಿವರ ಸಿಟ್ಟು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನವದೆಹಲಿ: ದೇಶದಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿರುವ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಕೇಂದ್ರ ಸರ್ಕಾರವು ಕೇಂದ್ರೀಯ ತನಿಖಾ ದಳಕ್ಕೆ (CBI) ವಹಿಸಿದೆ. ಪರೀಕ್ಷಾ ಅಕ್ರಮದ ಆರೋಪಗಳು ದೃಢಪಟ್ಟ ಹಿನ್ನೆಲೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರೀಕ್ಷೆಯನ್ನು ರದ್ದುಗೊಳಿಸಿದ್ದು, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಮತ್ತೆ ಅನಿಶ್ಚಿತತೆಯೊಳಗೆ ಸಿಲುಕಿದೆ. ಮರುಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಎನ್ಟಿಎ ತಿಳಿಸಿದೆ.
ಮೇ 3ರಂದು ನಡೆದ ಪರೀಕ್ಷೆಯ ಬಳಿಕ ರಾಜಸ್ಥಾನ ಸೇರಿದಂತೆ ಕೆಲವು ರಾಜ್ಯಗಳಿಂದ ಪ್ರಶ್ನೆ ಪತ್ರಿಕೆ ಸೋರಿಕೆಯ ಆರೋಪಗಳು ಕೇಳಿಬಂದಿದ್ದವು. ಆರಂಭದಲ್ಲಿ ಇದನ್ನು ವದಂತಿ ಎಂದು ಪರಿಗಣಿಸಲಾಗಿದ್ದರೂ, ಬಳಿಕ ಗುಪ್ತಚರ ಇಲಾಖೆ ಹಾಗೂ ಕಾನೂನು ಜಾರಿ ಸಂಸ್ಥೆಗಳ ಪ್ರಾಥಮಿಕ ತನಿಖೆಯಲ್ಲಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಗಂಭೀರ ಲೋಪಗಳು ನಡೆದಿರುವುದು ಬೆಳಕಿಗೆ ಬಂದಿದೆ. ‘ಗೆಸ್ ಪೇಪರ್’ ಹೆಸರಿನಲ್ಲಿ ಪರೀಕ್ಷೆಗೆ ಮುನ್ನವೇ ಕೆಲವು ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು ಎಂಬ ಮಾಹಿತಿ ತನಿಖೆಯಲ್ಲಿ ಪತ್ತೆಯಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪರೀಕ್ಷೆಯ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಯನ್ನು ಕಾಪಾಡುವ ಉದ್ದೇಶದಿಂದ ಪರೀಕ್ಷೆಯನ್ನು ರದ್ದುಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣವನ್ನು ಸಿಬಿಐಗೆ ವಹಿಸಿರುವ ಕೇಂದ್ರ ಸರ್ಕಾರ, ಈ ಹಗರಣದ ಹಿಂದೆ ಸಂಘಟಿತ ಜಾಲ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಕುರಿತು ಸಮಗ್ರ ತನಿಖೆ ನಡೆಸಲು ಸೂಚಿಸಿದೆ. ಪರೀಕ್ಷಾ ಕೇಂದ್ರ ಸಿಬ್ಬಂದಿ, ಮಧ್ಯವರ್ತಿಗಳು ಮತ್ತು ಪ್ರಶ್ನೆ ಪತ್ರಿಕೆ ಮುದ್ರಣ ಹಾಗೂ ಸಾಗಣೆ ಪ್ರಕ್ರಿಯೆಯಲ್ಲಿ ಭಾಗಿಯಾದವರ ಪಾತ್ರವನ್ನೂ ತನಿಖೆ ಒಳಗೊಂಡಿರಲಿದೆ.
ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿರುವ ವಿದ್ಯಾರ್ಥಿಗಳಿಗೆ ಎನ್ಟಿಎ ಕೆಲ ಸ್ಪಷ್ಟನೆಗಳನ್ನು ನೀಡಿದೆ. ಮರುಪರೀಕ್ಷೆಗೆ ಹೊಸದಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ತಿಳಿಸಿರುವ ಸಂಸ್ಥೆ, ಈಗಾಗಲೇ ನೋಂದಾಯಿತ ಅಭ್ಯರ್ಥಿಗಳ ಮಾಹಿತಿಯನ್ನೇ ಮುಂದಿನ ಪರೀಕ್ಷೆಗೆ ಬಳಸಿಕೊಳ್ಳಲಾಗುತ್ತದೆ ಎಂದಿದೆ. ವಿದ್ಯಾರ್ಥಿಗಳಿಂದ ಯಾವುದೇ ಹೆಚ್ಚುವರಿ ಶುಲ್ಕ ವಸೂಲಿ ಮಾಡುವುದಿಲ್ಲ ಎಂದು ಕೂಡ ಸ್ಪಷ್ಟಪಡಿಸಲಾಗಿದೆ. ಹೊಸ ಪ್ರವೇಶ ಪತ್ರಗಳನ್ನು ಮರುಪರೀಕ್ಷೆಗೆ ಕೆಲವು ದಿನಗಳ ಮುನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ಬಹುತೇಕ ಹಳೆಯ ಪರೀಕ್ಷಾ ಕೇಂದ್ರಗಳನ್ನೇ ಮುಂದುವರಿಸಲಾಗುವುದು ಎಂದು ತಿಳಿಸಲಾಗಿದೆ.
ಮಕ್ಕಳ ಭವಿಷ್ಯದ ಜೊತೆ ಕೇಂದ್ರದ ಚೆಲ್ಲಾಟ: ಮಧು ಬಂಗಾರಪ್ಪ
ಬೆಂಗಳೂರು: ಕೇಂದ್ರ ಸರ್ಕಾರವು ನೀಟ್ ಯುಜಿ 2026 ಪರೀಕ್ಷೆಯನ್ನು ರದ್ದುಗೊಳಿಸಿ, ಮರುಪರೀಕ್ಷೆಗೆ ಆದೇಶಿಸಿರುವ ಹಾಗೂ ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಸೂಚಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್ ಮಧು ಬಂಗಾರಪ್ಪ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಪರೀಕ್ಷಾ ವ್ಯವಸ್ಥೆಯು ಪದೇ ಪದೇ ಹಳ್ಳ ಹಿಡಿಯುತ್ತಿರುವುದು ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವರ್ಷಗಟ್ಟಲೆ ಹಗಲಿರುಳು ಶ್ರಮಪಟ್ಟು ಪರೀಕ್ಷೆ ಬರೆದಿದ್ದ ಲಕ್ಷಾಂತರ ಮಕ್ಕಳ ಮೇಲೆ ಈ ದಿಢೀರ್ ‘ಮರುಪರೀಕ್ಷೆ’ಯ ನಿರ್ಧಾರವು ಗದಾಪ್ರಹಾರದಂತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.








