ಪಡಿತರ ಚೀಟಿ ತಿದ್ದುಪಡಿ ಪ್ರಕ್ರಿಯೆ ಪ್ರಾರಂಭ!
– ಹೆಸರು ಸೇರ್ಪಡೆ, ಹೆಸರು ತೆಗೆದು ಹಾಕಲು ಅವಕಾಶ
– ಮದುವೆ ಆದವರಿಗೆ, ಅಡ್ರೆಸ್ ಬದಲಾವಣೆ ಮಾಡಬಹುದು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಪಡಿತರ ಚೀಟಿ ತಿದ್ದುಪಡಿ ಮತ್ತು ಬಿಪಿಎಲ್ ಸೇರಿದಂತೆ ಇತರ ಪಡಿತರ ಚೀಟಿಗಳಲ್ಲಿ ಬೇಕಾಗಿರುವಂತಹ ಅಗತ್ಯ ಬದಲಾವಣೆಗಳನ್ನು ಮಾಡಿಸಿಕೊಳ್ಳಲು ರಾಜ್ಯ ಸರ್ಕಾರವು ಮತ್ತೊಮ್ಮೆ ಅವಕಾಶ ಕಲ್ಪಿಸಿದೆ. ಮೇ 8ರ ಶುಕ್ರವಾರದಿಂದ ಈ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಆನ್ ಲೈನ್ ಮತ್ತು ಆಫ್ ಲೈನ್ ಮೂಲಕ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳ ಹಾಗೂ ಸೈಬರ್ ಸೆಂಟರ್ ಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಎಂದು ತಿಳಿಸಲಾಗಿದೆ.
ಮದುವೆಯಾಗಿ ಹೊಸ ಮನೆಗೆ ತೆರಳಿರುವ ಮಹಿಳೆಯರು, ಮಕ್ಕಳ ಹೆಸರನ್ನು ಪಡಿತರ ಚೀಟಿಗೆ ನೋಂದಾಯಿಸಿರದ ಕುಟುಂಬದವರು ಮತ್ತು ವಿಳಾಸವನ್ನು ಬದಲಾಯಿಸಿದವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಲಾಗಿದೆ. ಜೊತೆಗೆ ತಿದ್ದುಪಡಿ ಪ್ರಕ್ರಿಯೆಯಲ್ಲಿ ಹೊಸ ಸದಸ್ಯರ ಹೆಸರನ್ನು ಸೇರಿಸುವುದು, ಇಲ್ಲದಿದ್ದಲ್ಲಿ ಹೆಸರನ್ನು ತೆಗೆದು ಹಾಕುವುದು, ಮೊಬೈಲ್ ಸಂಖ್ಯೆಯಲ್ಲಿನ ಬದಲಾವಣೆ, ಕುಟುಂಬದ ಮುಖ್ಯಸ್ಥರ ಹೆಸರಲ್ಲಿನ ಬದಲಾವಣೆ ಮತ್ತು ವಿಳಾಸ ಬದಲಾವಣೆಯ ಸೇವೆಗಳು ಲಭ್ಯವಿವೆ ಎನ್ನುವ ಮಾಹಿತಿ ಲಭಿಸಿದೆ. ಇದರಿಂದಾಗಿ ಸರ್ಕಾರದ ವಿವಿಧ ಯೋಜನೆಗಳ ಮತ್ತು ಪಡಿತರ ಸೌಲಭ್ಯಗಳನ್ನು ಪಡೆಯಲು ನೆರವಾದಂತಾಗುತ್ತದೆ.
ಈ ವರ್ಷ ಮದುವೆ ಆದವರಿಗೆ ಅವಕಾಶ
ಹೊಸದಾಗಿ ಮದುವೆಯಾದವರು ಪತ್ನಿಯ ಹೆಸರನ್ನು ನೋಂದಾಯಿಸಲು ಆಧಾರ್ ಕಾರ್ಡ್, ವಿವಾಹ ನೋಂದಣಿ ಪ್ರಮಾಣ ಪತ್ರ ಮತ್ತು ಪಡಿತರ ಚೀಟಿಯ ಅವಶ್ಯಕತೆ ಇದೆ.
ಮಕ್ಕಳ ನೋಂದಣಿಗೆ ಏನೇನು ದಾಖಲೆ?
ಮಕ್ಕಳ ಹೆಸರನ್ನು ನೋಂದಾಯಿಸಲು ಜನನ ಪ್ರಮಾಣ ಪತ್ರ ಮತ್ತು ಪೋಷಕರ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಇನ್ನು ಆರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಪಡಿತರ ಚೀಟಿಯನ್ನು ಮಾಡಿಸಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ತಿಂಗಳಲ್ಲಿ ಹೊಸ ಚೀಟಿ?!
ಗ್ರಾಮೀಣ ಭಾಗದ ಜನರಿಗೆ ಖಾಸಗಿ ಕಂಪ್ಯೂಟರ್ ಕೇಂದ್ರಗಳಲ್ಲಿಯೂ ಇದರ ಸೇವೆ ಲಭ್ಯವಿದೆ. ತುರ್ತಾಗಿ ಪಡಿತರ ಚೀಟಿಯ ಅವಶ್ಯಕತೆ ಇದ್ದವರು ಕೂಡಲೇ ತಾಲ್ಲೂಕು ಕಛೇರಿಗೆ ಭೇಟಿ ನೀಡಿ, ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಬಹುದಾಗಿದೆ. ಅಧಿಕಾರಿಗಳು ಅರ್ಜಿಯನ್ನು ಪರಿಶೀಲಿಸಿದ ನಂತರ ಸಾಮಾನ್ಯವಾಗಿ ಒಂದು ತಿಂಗಳ ಒಳಗಾಗಿ ಹೊಸ ಪಡಿತರ ಚೀಟಿ ಲಭ್ಯವಾಗಲಿದೆ ಎಂದು ಈ ಮೂಲಕ ತಿಳಿಸಲಾಗಿದೆ. ಮತ್ತೊಂದೆಡೆ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ರಾಜ್ಯ ಸರ್ಕಾರವು ರಾಗಿ ಮತ್ತು ಜೋಳದ ವಿತರಣೆಯನ್ನು ಹೆಚ್ಚಿಸುವ ಕುರಿತು ಚಿಂತನೆ ನಡೆಸಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.








