ರೈತರ ಸಮಸ್ಯೆಗೆ ಸ್ಪಂದಿಸದ ಆಡಳಿತ: ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಹೋರಾಟ
– ಮೇ 16ರಂದು ಮತ್ತೊಮ್ಮೆ ಮನವಿ ಸಲ್ಲಿಕೆ: ಸ್ಪಂದಿಸದಿದ್ರೆ ಉಗ್ರ ಹೋರಾಟಕ್ಕೆ ಸಿದ್ಧತೆ
– ಬಗರ್ ಹುಕುಂ, ರೈತರ ಸಮಸ್ಯೆಗೆ ದನಿಯಾದ ಒಕ್ಕೂಟ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನರಸಿಂಹರಾಜಪುರ: ನರಸಿಂಹರಾಜಪುರ ತಾಲೂಕು ಕಚೇರಿಗೆ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದಿಂದ ರೈತರ ಸಮಸ್ಯೆಗಳ ಕಾನೂನು ಹೋರಾಟಕ್ಕಾಗಿ ಅಗತ್ಯ ದಾಖಲೆಗಳನ್ನು ಪಡೆಯಲು ಹಲವಾರು ಬಾರಿ ಅರ್ಜಿ ಹಾಗೂ ಮನವಿ ಸಲ್ಲಿಸಿದರು ಇದುವರೆಗೂ ಯಾವುದೇ ಸ್ಪಂದನೆ ದೊರೆತಿಲ್ಲ. ಆದ್ದರಿಂದ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಹಾಗೂ ರೈತ ಬಾಂಧವರು ಇದೆ ಶನಿವಾರ ದಿನಾಂಕ 16/05/2026 ರಂದು ಬೆಳಿಗ್ಗೆ 10:30ಕ್ಕೆ ನ. ರಾ. ಪುರ ತಾಲೂಕ್ ಕಚೇರಿಗೆ ಆಗಮಿಸಿ, ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷರಾದ ವಿಶ್ವನಾಥ್ ಗದ್ದೆಮನೆ ಅವರ ನೇತೃತ್ವದಲ್ಲಿ ಮತ್ತೊಮ್ಮೆ ಮನವಿ ಸಲ್ಲಿಸಲಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಈ ಮನವಿಗೂ ಸ್ಪಂದಿಸದಿದ್ದಲ್ಲಿ, ಬಡ ರೈತರ ಹಿತಾಸಕ್ತಿಗಾಗಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದಿಂದ ಉಗ್ರ ಹೋರಾಟ ಹಾಗೂ ಪ್ರತಿಭಟನೆ ನಡೆಸಲಾಗುವುದು ಎಂಬ ಎಚ್ಚರಿಕೆಯನ್ನು ಈ ಮೂಲಕ ನೀಡಲಾಗುತ್ತಿದೆ.ಆದ್ದರಿಂದ ಎಲ್ಲಾ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಲಾಗಿದೆ.
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟವನ್ನು ವಿಶ್ವನಾಥ್ ಗದ್ದೆಮನೆ ಅವರ ಸಾರಥ್ಯದಲ್ಲಿ ಸ್ಥಾಪಿಸಿರುವ ಮುಖ್ಯ ಉದ್ದೇಶ ರೈತರಿಗೆ ನ್ಯಾಯ ಹಾಗೂ ಅಗತ್ಯ ಸಹಾಯ ಒದಗಿಸುವುದಾಗಿದೆ. ಈ ಉದ್ದೇಶ ಯಶಸ್ವಿಯಾಗಲು ರೈತರ ಸ್ಪಂದನೆ ಹಾಗೂ ರೈತಾಪಿ ವರ್ಗದ ಬಗ್ಗೆ ಕಾಳಜಿ ಇರುವ ಎಲ್ಲಾ ವರ್ಗದ ಜನರ ಸಹಕಾರ ಅತ್ಯಂತ ಮುಖ್ಯವಾಗಿದೆ.ಈಗಾಗಲೇ ಅರಣ್ಯ ಇಲಾಖೆಯ 4(1) ನೋಟಿಫಿಕೇಶನ್ ಹಾಗೂ ಡಿಮ್ಡ್ ಫಾರೆಸ್ಟ್ಗೆ ಸಂಬಂಧಿಸಿದ ಅನೇಕ ದಾಖಲೆಗಳನ್ನು ರೈತ ಒಕ್ಕೂಟದ ವತಿಯಿಂದ ಸಂಗ್ರಹಿಸಲಾಗಿದೆ. ಯಾವುದೇ ರೈತರು ತಮ್ಮ ಗ್ರಾಮ ಅಥವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಖಲಾತಿಗಳನ್ನು ಪಡೆಯಬೇಕಿದ್ದಲ್ಲಿ, ಮುಂಚಿತವಾಗಿ ಎನ್.ಆರ್.ಪುರ ರೈತ ಒಕ್ಕೂಟದ ಕಚೇರಿಯನ್ನು ಸಂಪರ್ಕಿಸಿದರೆ ಗ್ರಾಮವಾರು ಹಾಗೂ ಪಂಚಾಯಿತಿ ಆಧಾರದ ಮೇಲೆ ಮಾಹಿತಿ ಒದಗಿಸಲು ರೈತ ಒಕ್ಕೂಟವು ಪ್ರಾಮಾಣಿಕ ಪ್ರಯತ್ನ ಮಾಡಲಿದೆ.








