ಕೋಟಿ ಕೋಟಿ ಜನರ ಹೃದಯ ಗೆದ್ದ ಗಿಲ್ಲಿ!
– ಹಳ್ಳಿ ಭಾಷೆ.. ಸಕತ್ ಡೈಲಾಗ್: ಜನರಿಂದ ಸಿಕ್ತು ಸ್ಟಾರ್ ಗಿರಿ
– ರಾಜ್ಯದಲ್ಲೇ ಈಗ ಫೇಮಸ್ ಸೆಲೆಬ್ರಿಟಿ
ಅದೃಷ್ಟ, ಸತತ ಪ್ರಯತ್ನ, ಆತ್ಮ ವಿಶ್ವಾಸ ಯಾರನ್ನು ಎಲ್ಲಿ ಬೇಕಾದರೂ ಗೆಲ್ಲಿಸಬಹುದು ಎಂಬುದಕ್ಕೆ ಸ್ಪಷ್ಟ ಉದಾಹರಣೆ ಗಿಲ್ಲಿ ನಟ. ಸಣ್ಣ ಹಳ್ಳಿಯಿಂದ ಬಂದು ತನ್ನ ಕಲೆ ಮೂಲಕವೇ ಕೋಟಿ ಕೋಟಿ ಜನರ ಮನ ಗೆದ್ದ ನಟ ಇದೀಗ ಕರುನಾಡ ಸ್ಟಾರ್. ಯಾವ ಸ್ಟಾರ್ ನಟರಿಗೂ ಕಡಿಮೆ ಇಲ್ಲದಸ್ಟು ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಅಶ್ಲೀಲ ಮಾತುಗಳೇ ಹಾಸ್ಯ ಎನಿಸಿಕೊಳ್ಳುತ್ತಿರುವ ಇಂದಿನ ಕಾಲಮಾನದಲ್ಲಿ, ತನ್ನ ಹಳ್ಳಿ ಸೊಗಡಿನ ಮಾತಿನ ಮೂಲಕ, ಮುಗ್ಧ ಮತ್ತು ಸಹಜ ನಡತೆಯಿಂದ ಜನರಿಗೆ ಆರೋಗ್ಯಕರವಾದ ಮತ್ತು ಮುಜುಗರ ತರಿಸದಂತಹ ಹಾಸ್ಯವನ್ನು ಉಣಬಡಿಸಿ, ಕನ್ನಡಿಗರ ಹೃದಯ ಗೆದ್ದ ‘ಬಿಗ್ ಬಾಸ್’ ಈ ಗಿಲ್ಲಿ.
ಮೂಲ ಹೆಸರು ನಟರಾಜ. ಮಂಡ್ಯ ಜಿಲ್ಲೆಯ ಮಳವಳ್ಳಿಯ ಮಟದಪುರದ ರೈತ ಕುಟುಂಬದ ನಟರಾಜ ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಗದ್ದೆ, ತೋಟಗಳ ಕೆಲಸ, ಸರಸರನೇ ಮರ ಹತ್ತುವುದು ಇವರನ್ನು ಚುರುಕಾಗಿರುವಂತೆ ಮಾಡಿತು. ಎಸ್ ಎಸ್ ಎಲ್ ಸಿ ಬಳಿಕ ಮದ್ದೂರಿನ ಕೆ.ಎಂ.ದೊಡ್ಡಿಯಲ್ಲಿ ಎರಡು ವರ್ಷಗಳ ಕಾಲ ಐಟಿಐ ವ್ಯಾಸಂಗ ಮಾಡಿದರು. ಚಲನಚಿತ್ರಗಳನ್ನು ಬಹಳ ವೀಕ್ಷಿಸುತ್ತಿದ್ದ ನಟರಾಜನಿಗೆ ತಾನು ನಿರ್ದೇಶಕನಾಗಬೇಕೆಂಬುದು ಬಹುದೊಡ್ಡ ಕನಸು.
ಊರಿನಲ್ಲಿದ್ದಾಗ ಸಾಮಾಜಿಕ ಜಾಲತಾಣವಾದ ಯೂಟ್ಯೂಬ್ ಅನ್ನು ಚೆನ್ನಾಗಿ ಬಳಸಿಕೊಂಡು, ಸ್ಥಳೀಯರ ಮನವೊಲಿಸಿ, ಅವರು ಪಾತ್ರಗಳನ್ನು ನಿರ್ವಹಿಸುವಂತೆ ಮಾಡಿ, ಸಿದ್ಧಪಡಿಸಿದ ಕಿರುಚಿತ್ರ ‘ನಲ್ಲಿ ಮೂಳೆ’ ಇದು ಅವರಿಗೆ ತಕ್ಕಮಟ್ಟಿಗೆ ಖ್ಯಾತಿಯನ್ನು ತಂದು ಕೊಟ್ಟಿತು. ನಂತರ ತನ್ನ ನಿರ್ದೇಶನದ ಕನಸನ್ನು ಹೊತ್ತು ಗಾಂಧಿನಗರವನ್ನು ಪ್ರವೇಶಿಸಿದರು. ಕೆಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಚಿತ್ರೀಕರಣದ ಸೆಟ್ ನಲ್ಲಿ ಇವರ ಚಟುವಟಿಕೆಯನ್ನು ಕಂಡು ಸಹೋದ್ಯೋಗಿಗಳು ‘ಗಿಲ್ಲಿ’ ಎಂದು ಕರೆಯಲಾರಂಭಿಸಿದರು. ಅದರೊಂದಿಗೆ ತನ್ನ ತಂದೆ ತಾಯಿಗಳು ಇಟ್ಟ ಹೆಸರಿನ ಅರ್ಧ ಭಾಗವನ್ನು ಸೇರಿಸಿ, ‘ಗಿಲ್ಲಿ ನಟ’ ಎನ್ನುವ ಹೆಸರನ್ನು ತಾವೇ ಇಟ್ಟುಕೊಂಡುಬಿಟ್ಟರು.
ಕಾಮಿಡಿ ಮೂಲಕ ಜನರ ಮನಗೆದ್ದ ಕಲಾವಿದ!
ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಸೀಸನ್ 2, ಭರ್ಜರಿ ಬ್ಯಾಚುಲರ್ಸ್ ಸೀಸನ್ 2ರ ಮೂಲಕ ಕಿರುತೆರೆಯನ್ನು ಪ್ರವೇಶಿಸಿ, ಕನ್ನಡಿಗರ ಮನೆ ಮಾತಾದರು. ಗಿಲ್ಲಿ ನಟ ಅವರ ‘ಪ್ರಾಪರ್ಟಿ ಕಾಮಿಡಿ’ ಅವರಿಗೆ ಸಾಕಷ್ಟು ಹೆಸರನ್ನು ತಂದುಕೊಟ್ಟಿತು. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ನಲ್ಲಿ ಸ್ಪರ್ಧಿಯಾಗಿ, ಅದರಲ್ಲೂ ತಮ್ಮ ಪ್ರಾಪರ್ಟಿ ಕಾಮಿಡಿ ಪ್ರದರ್ಶನ ಮತ್ತು ಹಾಸ್ಯಭರಿತ ಮಾತುಗಳ ಮೂಲಕ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರ ಮನಗೆದ್ದರು. ಅನಾರೋಗ್ಯಕ್ಕೆ ಒಳಗಾಗಿದ್ದ ಶಿವರಾಜ್ ಕುಮಾರ್ ಅವರು “ಕೆಲವು ಗಂಟೆಗಳ ಕಾಲ ತಮ್ಮ ನೋವನ್ನು ಮರೆಯಲು ಗಿಲ್ಲಿಯಿಂದ ಸಾಧ್ಯವಾಯಿತು” ಎಂದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನ ಫೈನಲ್ ನಲ್ಲಿ ದಂಪತಿ ಸಮೇತರಾಗಿ ತಿಳಿಸಿದ್ದು, ಹೃದಯಸ್ಪರ್ಶಿ ಸನ್ನಿವೇಶವಾಗಿತ್ತು. ಅಂದೇ ಗಿಲ್ಲಿ ನಟ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಸಿನಿಮಾಕ್ಕೂ ಎಂಟ್ರಿ ಕೊಟ್ಟ ನಟ: ಬಿಗ್ ಬಾಸ್ ವಿನ್ನರ್!
ರಿಯಾಲಿಟಿ ಶೋಗಳ ಜೊತೆಗೆ ‘ಕಾಲಾಪತ್ಥರ್’, ‘ಡೆವಿಲ್’ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಕೂಡ ನಿರ್ವಹಿಸಿದ್ದಾರೆ. ಇನ್ನು ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಯಾಗಿ ಭಾಗವಹಿಸಿ, ಲಕ್ಷಾಂತರ ಜನರ ಪ್ರೀತಿಯನ್ನು ಸಂಪಾದಿಸಿ, ಆ ಮೂಲಕ ಟ್ರೋಫಿಯನ್ನು ಸಹ ಗೆದ್ದುಕೊಂಡರು. ಗಿಲ್ಲಿ ನಟ ಅವರ ಉತ್ತಮ ಪ್ರದರ್ಶನಕ್ಕೆ ಮನಸೋತ ಅಭಿನಯ ಚಕ್ರವರ್ತಿ ಸುದೀಪ್ ಅವರು ಸ್ಪರ್ಧೆಯ 50 ಲಕ್ಷ ರೂಪಾಯಿಗಳ ಜೊತೆಗೆ ವೈಯಕ್ತಿಕವಾಗಿ ತಮ್ಮ ಕಡೆಯಿಂದ 10 ಲಕ್ಷ ರೂಪಾಯಿಯನ್ನು ಕಾಣಿಕೆಯಾಗಿ ನೀಡಿದ್ದು, ಗಿಲ್ಲಿ ಅವರ ಪ್ರತಿಭೆಗೆ ಸಾಕ್ಷಿಯಾಗಿದೆ. ಜೊತೆಗೆ “ಮುಂದಿನ ಯೋಜನೆಗಳನ್ನು ನಿರ್ಧರಿಸುವಾಗ ಸರಿಯಾಗಿ ಆಲೋಚಿಸು. ಅವಸರಪಟ್ಟು ಯಶಸ್ಸನ್ನು ಹಾಳು ಮಾಡಿಕೊಳ್ಳಬೇಡ” ಎನ್ನುವ ಸಲಹೆಯನ್ನು ಕೂಡ ನೀಡಿದರು.
ಬಿಗ್ ಬಾಸ್ ಸೀಸನ್ 12ರ ಟ್ರೋಪಿಯೊಂದಿಗೆ ಶಿವರಾಜ್ ಕುಮಾರ್ ದಂಪತಿಗಳನ್ನು ಭೇಟಿ ಮಾಡಿದ ಗಿಲ್ಲಿ ನಟ ಅವರಿಗೆ ಆಶೀರ್ವಾದದ ಜೊತೆಗೆ “ಜನರ ನಿಷ್ಕಲ್ಮಶ ಪ್ರೀತಿಯನ್ನು ಸಂಪಾದಿಸಿದ್ದೀಯಾ. ಅದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಿನ್ನ ಮೇಲಿದೆ. ಯಾವುದೇ ಕಾರಣಕ್ಕೂ ಅದನ್ನು ಹಾಳು ಮಾಡಿಕೊಳ್ಳಬೇಡ. ಎಂದಿಗೂ ಯಶಸ್ಸನ್ನು ತಲೆಗೇರಿಸಿಕೊಳ್ಳಬೇಡ” ಎನ್ನುವ ಹಿತನುಡಿಗಳು ಕೂಡ ಲಭಿಸಿದೆ.
ರಾಜಕಾರಣಿಗಳಿಂದಲೂ ಗಿಲ್ಲಿಗೆ ಮೆಚ್ಚುಗೆ
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ರಿಯಾಲಿಟಿ ಶೋವೊಂದರಲ್ಲಿ ಗಿಲ್ಲಿ ಅವರ ಪ್ರತಿಭೆಯನ್ನು ಕಂಡು ತಮಗೆ ಪರಿಚಯವಿರುವ ಗಿಲ್ಲಿ ನಟ ಅವರ ಊರಿನವರೊಬ್ಬರ ಬಳಿ “ತುಂಬಾ ಚೆನ್ನಾಗಿ ಮಾಡುತ್ತಾನೆ. ನಿಮ್ಮ ಊರಿನವನು ಅಂದಮೇಲೆ ಒಮ್ಮೆ ಅವನನ್ನು ನಮ್ಮಲ್ಲಿಗೆ ಕರೆದುಕೊಂಡು ಬನ್ನಿ” ಎನ್ನುವ ಆಹ್ವಾನ ಕೂಡ ಲಭಿಸಿತ್ತು. ಬಿಗ್ ಬಾಸ್ ಸೀಸನ್ 12ರ ಟ್ರೋಫಿಯನ್ನು ಗೆದ್ದ ಬಳಿಕ ಅದು ಸಾಧ್ಯವಾಯಿತು. ಜೊತೆಗೆ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ ಅವರು ಸೇರಿದಂತೆ ನಾಡಿನ ರೈತರು, ಯೋಧರು ಕೂಡ ಗಿಲ್ಲಿ ಅವರಿಗೆ ಕರೆ ಮಾಡಿ ಶುಭಾಶಯ ಕೋರಿದ್ದು ಗಿಲ್ಲಿ ಅವರ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ . ಬಿಗ್ ಬಾಸ್ ನಲ್ಲಿ ಬಂದ ಹಣದಲ್ಲಿ ಜಮೀನನ್ನು ಕೊಳ್ಳುವುದು ಗಿಲ್ಲಿ ನಟ ಅವರ ಬಯಕೆಯಾಗಿದೆ. ಜೊತೆಗೆ ”ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದೆ ಈಗಿರುವ ಹಾಗೆಯೇ ಕೊನೆಯವರೆಗೂ ಇರುತ್ತೇನೆ” ಎನ್ನುವುದು ಗಿಲ್ಲಿ ನಟ ಅವರ ಅಂತರಂಗದ ಮಾತು.








