ಮಲೆನಾಡಲ್ಲಿ ಕಾಡು ಕೋಣ ಹಾವಳಿಗೆ ಬ್ರೇಕ್?!
– ಕೊಪ್ಪದಲ್ಲಿ ಕಾಡುಕೋಣ ಸೆರೆ ಕಾರ್ಯಾಚರಣೆ ಆರಂಭ
– ರಾಜ್ಯದಲ್ಲೇ ಮೊದಲು ಈ ಕಾರ್ಯಚರಣೆ: ಏನಿದು ಯೋಜನೆ?
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಮೊದಲಿಗೆ ಕಾಡುಕೋಣಗಳನ್ನು ಹಿಡಿದು ಸ್ಥಳಾಂತರ ಮಾಡುವ ನಿರ್ಧಾರ ಕೈಗೊಂಡಿದೆ. ಇದು ರಾಜ್ಯದಲ್ಲೇ ಮೊದಲ ಪ್ರಯತ್ನ ಎನ್ನಲಾಗಿದೆ. ಗುರುವಾರದಿಂದಲೇ ಈ ಕಾರ್ಯಾಚರಣೆ ಕೊಪ್ಪ ವಿಭಾಗದಿಂದ ಪ್ರಾರಂಭಗೊಳ್ಳಲಿದೆ ಎನ್ನುವ ಮಾಹಿತಿ ಲಭಿಸಿದೆ. ಕಾಡಾನೆಯ ಜೊತೆಗೆ ಕಾಡುಕೋಣಗಳ ಹಾವಳಿಯಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಆರು ಜನ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎನ್ನುವುದು ವರದಿಯಾಗಿದೆ.
ಹೊರ ರಾಜ್ಯಗಳಿಗೆ ಹೋಗಿ ಅಧ್ಯಯನ!
ಕಾಡು ಕೋಣ ಸಮಸ್ಯೆ ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆಯು ಕಾಡುಕೋಣಗಳ ಉಪಟಳವನ್ನು ತಡೆಯಲು ಇರುವಂತಹ ಸಾಧ್ಯತೆಗಳ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಿ, ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡವೊಂದು ಮಧ್ಯಪ್ರದೇಶಕ್ಕೆ ತೆರಳಿ ಅಧ್ಯಯನ ನಡೆಸಿ ಹಿಂತಿರುಗಿತ್ತು. ಅಲ್ಲಿನ ಕನ್ಹಾ ಹುಲಿ ಸಂರಕ್ಷಿತ ಪ್ರದೇಶದಿಂದ, ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶಕ್ಕೆ ಕಾಡುಕೋಣಗಳನ್ನು ಸ್ಥಳಾಂತರಿಸಲಾಗುತ್ತಿದೆ. ಈ ಕ್ರಮವನ್ನು ಕರ್ನಾಟಕ ರಾಜ್ಯದಲ್ಲಿ ಅಳವಡಿಸಲು ಸಾಧ್ಯವಾಗುತ್ತದೆಯೇ ಎನ್ನುವುದರ ಕುರಿತು ಅಧಿಕಾರಿಗಳು ಅಧ್ಯಯನ ನಡೆಸಿದ್ದರು ಎನ್ನಲಾಗಿದೆ.
ಅದು ಸಾಧ್ಯವಾಗುತ್ತದೆ ಎನ್ನುವುದು ಸ್ಪಷ್ಟವಾಗಿ ತಿಳಿದ ಬಳಿಕ ಈ ವಿಧಾನವನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನಲ್ಲಿ ಅಳವಡಿಸಲು ಮುಂದಾಗಿದ್ದಾರೆ. ಆದರೆ ಯಾವ ಅರಣ್ಯಕ್ಕೆ ತಂದು ಬಿಡಬೇಕು ಎನ್ನುವುದು ನಿಖರವಾಗಿಲ್ಲವಾದ್ದರಿಂದ ಮೊದಲಿಗೆ ಕಾಡುಕೋಣಗಳನ್ನು ಸೆರೆಹಿಡಿದು, ಬಳಿಕ ಆ ವಿಚಾರದ ಕುರಿತು ಪಿಸಿಸಿಎಫ್ ನಿರ್ಧಾರ ಕೈಗೊಳ್ಳಲಿದೆ ಎನ್ನುವ ಸಂಗತಿ ತಿಳಿದುಬಂದಿದೆ.
ಪರಿಣಿತ ತಂಡದಿಂದ ಕಾರ್ಯಚರಣೆ!
ಪ್ರಮಾಣಿತ ಕಾರ್ಯಾಚರಣೆ ವಿಧಾನ, ತಜ್ಞರು, ವೈದ್ಯರು, ವಾಹನ, ಅಗತ್ಯ ಪರಿಕರ ಸೇರಿದಂತೆ ಪ್ರತ್ಯೇಕ ತಂಡವೊಂದನ್ನು ರಚಿಸಲಾಗಿದೆ. ಈ ನೂತನ ತಂಡವು ಬುಧವಾರದಂದು ಅಭ್ಯಾಸ ನಡೆಸಿದ್ದು, ಕಾಡುಕೋಣವನ್ನು ಸೆರೆಹಿಡಿಯಲು ಅದಕ್ಕೆ ಅಳವಡಿಸಬೇಕಾದ ಅರವಳಿಕೆಯ ಪ್ರಮಾಣ ಎಷ್ಟಿರಬೇಕೆಂಬುದರ ಬಗ್ಗೆ ಪಶುವೈದ್ಯಾಧಿಕಾರಿಗಳು ಅಂದಾಜು ಮಾಡಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ. ಈ ಹಿಂದೆ ಮೈಸೂರು ಮೃಗಾಲಯದಲ್ಲಿದ್ದ ಕಾಡುಕೋಣವನ್ನು ಬನ್ನೇರುಘಟ್ಟಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಅದು ಮೃಗಾಲಯದಲ್ಲಿದ್ದುದರಿಂದ ಯಾವುದೇ ರೀತಿಯ ಸಮಸ್ಯೆ ಎದುರಾಗಿರಲಿಲ್ಲ. ಆದರೆ, ಅರಣ್ಯದಲ್ಲಿರುವ ಕಾಡುಕೋಣವನ್ನು ಸ್ಥಳಾಂತರಿಸುವುದು ಇದೇ ಮೊದಲ ಪ್ರಯತ್ನವಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾಡು ಆನೆಗಳು ಬಂದಿವೆ…!
ಚಿಕ್ಕಮಗಳೂರು ವೃತ್ತ ಸಿಸಿಎಫ್ ಯಶಪಾಲ್ ಕ್ಷೀರಸಾಗರ ಅವರು ಕಾಡಾನೆಗಳು ಬುಧವಾರ ಬಂದಿಳಿದಿದ್ದು, ಅಭ್ಯಾಸ ಕೂಡ ಪ್ರಾರಂಭಗೊಂಡಿದೆ. ಪ್ರಾಯೋಗಿಕ ಕಾರ್ಯಾಚರಣೆಯನ್ನು ಆರಂಭಿಸಿದ ಬಳಿಕ ಒಂದೆರಡು ದಿನಗಳ ಒಳಗಾಗಿ ಕಾಡುಕೋಣಗಳನ್ನು ಸೆರೆಹಿಡಿಯಲಾಗುವುದು ಎಂದು ತಿಳಿಸಿದ್ದಾರೆ.








