ರಾಜ್ಯಾದ್ಯಂತ 5 ದಿನ ಬಿರುಗಾಳಿ ಮಳೆ!
– ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ
– ಎಲ್ಲೆಲ್ಲಿ ಎಷ್ಟು ಮಳೆ? ಜನರಿಗೆ ಎಚ್ಚರಿಕೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮವಾಗಿ ಕರ್ನಾಟಕದಲ್ಲಿ ಮುಂದಿನ 5 ದಿನಗಳ ಕಾಲ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಿಗೆ ಬಿರುಗಾಳಿ ಸಹಿತ ಗುಡುಗು-ಮಿಂಚಿನ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರಿನಲ್ಲಿ ಭಾಗಶಃ ಮೋಡಕವಿದ ವಾತಾವರಣ, ಮೇ 14 ರಿಂದ ಮಳೆಯ ಸಿಂಚನ ಆಗಲಿದೆ. ಇಂದಿನಿಂದ ಮುಂದಿನ ಐದು ದಿನಗಳ ಕಾಲ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಎಚ್ಚರಿಕೆ ರವಾನಿಸಿದೆ.
ಹವಾಮಾನ ತಜ್ಞರ ಪ್ರಕಾರ, ಈ ಸುಳಿಗಾಳಿಯ ಪ್ರಭಾವದಿಂದಾಗಿ ಮುಂದಿನ 48 ಗಂಟೆಗಳಲ್ಲಿ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಲಘು ವಾಯುಭಾರ ಕುಸಿತ ಉಂಟಾಗುವ ನಿರೀಕ್ಷೆಯಿದೆ. ಈ ವ್ಯವಸ್ಥೆಯು ತೇವಾಂಶ ಭರಿತ ಮಾರುತಗಳನ್ನು ಭೂಭಾಗದತ್ತ ತಳ್ಳುವುದರಿಂದ, ಕರ್ನಾಟಕದ ಒಳನಾಡು ಮತ್ತು ಕರಾವಳಿ ಭಾಗಗಳಲ್ಲಿ ಹವಾಮಾನ ಸಂಪೂರ್ಣವಾಗಿ ಬದಲಾಗಲಿದ್ದು, 40-50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ.
ಕರಾವಳಿ ಹಾಗೂ ದಕ್ಷಿಣ ಒಳನಾಡು: ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೇ 14ರವರೆಗೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಇದೇ ಅವಧಿಯಲ್ಲಿ ದಕ್ಷಿಣ ಒಳನಾಡಿನ ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿಯೂ ನಿರಂತರವಾಗಿ ಗುಡುಗು ಸಹಿತ ಮಳೆಯಾಗಲಿದ್ದು, ತಾಪಮಾನದಲ್ಲಿ ಗಣನೀಯ ಇಳಿಕೆ ಕಂಡುಬರಲಿದೆ.
ಉತ್ತರ ಒಳನಾಡು: ಉತ್ತರ ಒಳನಾಡಿನ ಪ್ರಮುಖ ಜಿಲ್ಲೆಗಳಾದ ಹಾವೇರಿ, ಗದಗ, ಧಾರವಾಡ ಮತ್ತು ಬೆಳಗಾವಿ ಭಾಗಗಳಲ್ಲಿ ಹವಾಮಾನ ವೈಪರೀತ್ಯದ ಪ್ರಭಾವ ಹೆಚ್ಚಿರಲಿದ್ದು, ಪ್ರತಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬೀಸುವ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಇದರ ಜೊತೆಗೆ, ಮೇ 14 ರಂದು ಕಲಬುರಗಿ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು ಹಾಗೂ ಸುತ್ತಮುತ್ತ: ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಕೊಂಚ ಕಡಿಮೆಯಿರಲಿದೆ. ಆರಂಭಿಕ ದಿನಗಳಲ್ಲಿ ಈ ಭಾಗಗಳಲ್ಲಿ ಬಹುತೇಕ ಮೋಡಕವಿದ ವಾತಾವರಣ ಮುಂದುವರೆಯಲಿದ್ದು, ಮೇ 14 ರಿಂದ ಸಾಧಾರಣ ಮಳೆಯ ಸಿಂಚನವಾಗುವ ನಿರೀಕ್ಷೆಯಿದೆ.








