ಕರಾವಳಿ ಟಾಪ್ ನ್ಯೂಸ್
ಭಗ್ನ ಪ್ರೇಮಿಯಿಂದ ಯುವತಿಗೆ ಚೂರಿ ಇರಿತ!
– ಮಣಿಪಾಲದ ಶಾಂತಿನಗರ ಸಮೀಪದ ಮಹಿಳಾ ಪಿಜಿಯಲ್ಲಿ ಘಟನೆ
• ಕಡಬ: ಬಾಲಕಿಯ ಮಾನಭಂಗಕ್ಕೆ ಯತ್ನ; ಕೇಸ್
• ಉಳ್ಳಾಲ: ಯು.ಟಿ.ಖಾದರ್ ಮೇಲೆ ಹಲ್ಲೆಗೆ ಯತ್ನ
ಉಡುಪಿ: ಭಗ್ನ ಪ್ರೇಮಿಯಿಂದ ಯುವತಿಗೆ ಚೂರಿಯಿಂದ ಇರಿದ ಘಟನೆ ಮಣಿಪಾಲ- ಅಲೆವೂರು ರಸ್ತೆಯ ಶಾಂತಿನಗರ ಸಮೀಪದ ಐಡಿಯಲ್ ಬಿಲ್ಡಿಂಗ್ ನಲ್ಲಿರುವ ಮಹಿಳಾ ಪಿಜಿಯಲ್ಲಿ ನಡೆದಿದೆ. ಅಂಕೋಲ ಮೂಲದ ಯೋಗಿತಾ(23) ಮಾರಣಾಂತಿಕ ಹಲ್ಲೆಗೊಳಗಾದ ಯುವತಿ. ಈಕೆ ಮಣಿಪಾಲ- ಅಲೆವೂರು ರಸ್ತೆಯ ಶಾಂತಿನಗರ ಸಮೀಪದ ಐಡಿಯಲ್ ಬಿಲ್ಡಿಂಗ್ ನಲ್ಲಿರುವ ಮಹಿಳಾ ಪಿಜಿಯಲ್ಲಿ ವಾಸವಾಗಿದ್ದಳು. ಮಂಗಳವಾರ ರಾತ್ರಿ ಆಕೆಗೆ ಚೂರಿ ಇರಿಯಲಾಗಿದೆ. ಯುವತಿಯು ಪ್ರೀತಿ ನಿರಾಕರಿಸಿರುವುದಕ್ಕೆ ಭಗ್ನ ಪ್ರೇಮಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಕಡಬ: ಅಪ್ರಾಪ್ತ ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ ಘಟನೆ, ಕಳೆದ ಕೆಲವು ದಿನಗಳ ಹಿಂದೆ ಅಜಕಾರುವಿನಲ್ಲಿ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಬಾಲಕಿಯು ಪಕ್ಕದ ಮನೆಗೆ ಟಿವಿ ನೋಡಲೆಂದು ಹೋಗಿದ್ದ ಸಂದರ್ಭದಲ್ಲಿ, ಅಲ್ಲಿಗೆ ಆಗಮಿಸಿದ ಆರೋಪಿಯು ಬಾಲಕಿಯ ಕೈಹಿಡಿದೆಳೆದು, ಎದೆಗೆ ಕೈಹಾಕಿ ಮಾನಭಂಗಕ್ಕೆ ಪ್ರಯತ್ನಿಸಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಾಲಕಿಯ ತಾಯಿಯು ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಆರೋಪಿಯನ್ನು ಕೊಂಡಾಡಿಕೊಪ್ಪ ನಿವಾಸಿ ಜಗದೀಶ್ ಕುಂಬಾರ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಉಳ್ಳಾಲ: ಯು.ಟಿ.ಖಾದರ್ ಮೇಲೆ ಹಲ್ಲೆಗೆ ಯತ್ನ
ಉಳ್ಳಾಲ: ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿರುವ ಘಟನೆ ಬುಧವಾರದಂದು ನಡೆದಿದೆ. ಮೇ 7ರ ಗುರುವಾರದಂದು ಉಳ್ಳಾಲದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಯು.ಟಿ.ಖಾದರ್ ಅವರು ಬೆಂಗಾವಲು ಪಡೆಯಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ಸನ್ನಿವೇಶ ಎದುರಾಗಿದೆ.
ಪ್ರತಿಭಟನಾಕಾರರ ಗುಂಪೊಂದು ಸಭಾಧ್ಯಕ್ಷರ ಬೆಂಗಾವಲು ಪಡೆಯನ್ನು ಬಾಪುನಿ ಸರ್ಕಾರಿ ಅತಿಥಿ ಗೃಹದ ಮುಂದೆ ತಡೆಯಲು ಯತ್ನಿಸಿ, ಭದ್ರತಾ ಅಧಿಕಾರಿಗಳನ್ನು ಕೈಗಳಿಂದ ಹಿಂದಕ್ಕೆ ತಳ್ಳಿ, ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯು.ಟಿ.ಖಾದರ್ ಅವರ ಗನ್ ಮ್ಯಾನ್ ಆಗಿರುವ ಮೊಹಮ್ಮದ್ ಯಾಸೀನ್ ಅವರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕಾರ್ಯಾಚರಣೆಯನ್ನು ನಡೆಸಿದ ಪೊಲೀಸರು ಮದನಿ ನಗರದ ನಿವಾಸಿ ಜುನೈದ್ ಸೇರಿದಂತೆ 11 ಜನ ಆರೋಪಿಗಳ ವಿರುದ್ಧ ಭಾರತೀಯ ನೀತಿ ಸಂಹಿತೆಗೆ ಸಂಬಂಧಿಸಿದಂತ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.








