ಟೈಲರ್ ಮಗಳು ಬೃಂದಾ ರಾಜ್ಯಕ್ಕೆ ಟಾಪರ್!
– ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625/625 ಅಂಕ
– ಚಿಕ್ಕಮಗಳೂರು ಹುಡುಗಿಗೆ ರಾಜ್ಯ ಮಟ್ಟದಲ್ಲಿ ಅಗ್ರಸ್ಥಾನ
– ಸಾಧನೆಗೆ ಬಡತನ ಅಡ್ಡಿಯಲ್ಲ, ಶ್ರಮ, ಗುರಿ ಇರಬೇಕಷ್ಟೆ!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಚಿಕ್ಕಮಗಳೂರು: ಬಡತನ ಎನ್ನುವುದು ಸಾಧನೆಗೆ ಎಂದೂ ಅಡ್ಡಿ ಅಲ್ಲ. ಬಡತನ ಸಾಧನೆ ಹಾದಿಯಲ್ಲಿ ಕೇವಲ ಒಂದು ಸಣ್ಣ ಕಲ್ಲು ಮಾತ್ರ, ಅದು ಗುರಿಯನ್ನು ತಡೆಯುವ ಗೋಡೆಯಲ್ಲ ಎಂಬುದನ್ನು ಚಿಕ್ಕಮಗಳೂರಿನ ಈ ಪ್ರತಿಭೆ ಬೃಂದಾ ಇಡೀ ರಾಜ್ಯಕ್ಕೆ ತೋರಿಸಿಕೊಟ್ಟಿದ್ದಾರೆ. ಟೈಲರ್ ಮಗಳು ಬೃಂದಾ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದು – 625/625 ಅಂಕ ಗಳಿಸಿದ್ದಾಳೆ. ಚಿಕ್ಕಮಗಳೂರಿನ ಕೋಟೆ ಬಡಾವಣೆಯ ಪುಟ್ಟ ಮನೆಯಲ್ಲಿರುವ ಈಕೆಯ ಸಾಧನೆ ಇಡೀ ದೇಶಕ್ಕೆ, ಇಂದಿನ ಯುವ ಜನಕ್ಕೆ ಮಾದರಿ ಆಗಿದೆ.
ಪರಿಶ್ರಮ ಕೈ ಹಿಡಿಯಿತು.. ಸಾಧನೆ ಫಲಿಸಿತು…!
ತಂದೆ ಮಂಜುನಾಥ್ ಥಾಪ್ಸೆ ಮತ್ತು ತಾಯಿ ಹರ್ಷಿಣಿ ಅವರು ದಿನವಿಡೀ ಬಟ್ಟೆ ಹೊಲಿದು ಗಳಿಸುವ ಆದಾಯದಲ್ಲೇ ಸಂಸಾರ ನಡೆಯಬೇಕು. ಇಂತಹ ಅತಂತ್ರ ಆರ್ಥಿಕ ಪರಿಸ್ಥಿತಿಯ ನಡುವೆಯೂ, ಮಗಳ ಕಣ್ಣಿನಲ್ಲಿದ್ದ ದೊಡ್ಡ ಕನಸಿಗೆ ಈ ದಂಪತಿಗಳು ಎಂದೂ ಅಡ್ಡಿಯಾಗಲಿಲ್ಲ. ಬೃಂದಾ ಅವರ ಯಶಸ್ಸಿನ ಹಿಂದೆ ಯಾರೂ ಊಹಿಸಲಾಗದ ಕಠಿಣ ಪರಿಶ್ರಮವಿದೆ. ಸೂರ್ಯ ಮುಳುಗಿದ ಮೇಲೆ ಆರಂಭವಾಗುತ್ತಿದ್ದ ಅವರ ಓದು, ಮಧ್ಯರಾತ್ರಿ 12 ಗಂಟೆಯವರೆಗೂ ಮುಂದುವರಿಯುತ್ತಿತ್ತು. ನಿದ್ರೆ ಆವರಿಸುವ ಮೊದಲೇ, ಮತ್ತೆ ಮುಂಜಾನೆ 4.30ಕ್ಕೆ ಎದ್ದು ಪುಸ್ತಕ ಹಿಡಿಯುತ್ತಿದ್ದರು. ಬೆಳಗಿನ ಜಾವದ ಚಳಿಯಿರಲಿ, ಹಸಿವಿರಲಿ… ಅವರ ಕಣ್ಣ ಮುಂದೆ ಇದ್ದದ್ದು ಮಾತ್ರ ಹೆತ್ತವರ ಕಷ್ಟವನ್ನು ನೀಗಿಸುವ “ರಾಜ್ಯಕ್ಕೆ ಪ್ರಥಮ” ಸ್ಥಾನದ ಗುರಿ. ಅದೀಗ ಈಡೇರಿದ್ದು, ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿರುವ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಜಿಲ್ಲೆಯ ವಿದ್ಯಾರ್ಥಿನಿ ಬೃಂದಾ ಅಪೂರ್ವ ಸಾಧನೆ ಮಾಡಿದ್ದಾರೆ. ಸೆಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿಯಾಗಿರುವ ಅವರು ಒಟ್ಟು 625 ಅಂಕಗಳಿಗೆ 625 ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಬೃಂದಾ ಅವರು ಮೊದಲಿನಿಂದಲೇ ಓದಿನ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದು, ಶಿಕ್ಷಕರ ಮಾರ್ಗದರ್ಶನ ಹಾಗೂ ಪೋಷಕರ ಬೆಂಬಲದೊಂದಿಗೆ ಈ ಅಸಾಧಾರಣ ಗುರಿಯನ್ನು ಸಾಧಿಸಿದ್ದಾರೆ. ವಿಷಯವಾರು ಶೇಕಡಾ 100 ಅಂಕಗಳನ್ನು ಗಳಿಸಿರುವುದು ಇವರ ಸಾಧನೆಗೆ ಮತ್ತಷ್ಟು ಮೆರುಗು ತಂದಿದೆ.








