ಸರ್ಕಾರಿ ಶಾಲೆಯಲ್ಲಿ ಪಾಠ ಮಾಡ್ತಾರೆ ಎಐ ಶಿಕ್ಷಕಿ..!
– ರಾಜ್ಯದಲ್ಲೇ ಮೊದಲ ಬಾರಿಗೆ ಉಡುಪಿಯ ಬೈಂದೂರಲ್ಲಿ ಪ್ರಯೋಗ
– ಶಿಕ್ಷಣ ಕ್ಷೇತ್ರಕ್ಕೂ ಎಐ ಎಂಟ್ರಿ: ಹೇಗೆ ಪಾಠ ಮಾಡುತ್ತೆ..?
– 20 ಭಾಷೆ ಮಾತಾಡ್ತಾರೆ ರೋಬೋಟಿಕ್ ಟೀಚರ್
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೈಂದೂರು: ಈಗ ಎಲ್ಲಾ ಕಡೆ ಎ.ಐ ಹವಾ. ಲಕ್ಷ ಲಕ್ಷ ಉದ್ಯೋಗವನ್ನು ಎಐ ಕಸಿಯುತ್ತಿದೆ. ಉದ್ಯಮ ಮಾರುಕಟ್ಟೆಯಲ್ಲಿ ಎಐಯಿಂದ ಅಲ್ಲೋಲ ಕಲ್ಲೋಲ ಆಗುತ್ತಿದೆ. ಜತೆಗೆ ಇಂಜಿನಿಯರಿಂಗ್ ಸೇರಿ ಪದವಿ ಮೌಲ್ಯ ಕುಸಿಯುತ್ತಿದೆ. ಈ ನಡುವೆ ಶಿಕ್ಷಣ ಕ್ಷೇತ್ರಕ್ಕೂ ಎಐ ಎಂಟ್ರಿ ಆಗಿದೆ. ಉಡುಪಿ ಜಿಲ್ಲೆ ಬೈಂದೂರು ತಾಲೂಕು ವಂಡ್ಸೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು ಹೊಸದೊಂದು ಪ್ರಯೋಗದ ಮೂಲಕ ರಾಜ್ಯದ ಗಮನ ಸೆಳೆದಿದೆ. ತನ್ನ ಶಾಲೆಯಲ್ಲಿ ಬೋಧನೆಗೆ ಎಐ ಶಿಕ್ಷಕಿಯಾದ ‘ಐರಿಸ್’ ಅನ್ನು ಪರಿಚಯಿಸುವ ನಿಟ್ಟಿನತ್ತ ಹೆಜ್ಜೆ ಹಾಕುತ್ತಿದೆ. ಇದು ಈಗಾಗಲೇ ಕಾರ್ಯನಿರ್ವಹಣೆಗೆ ಸಜ್ಜಾಗಿದೆ. ಆ ಮೂಲಕ 2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಬೋಧನೆಗೆ ಎಐ ರೋಬೊ ಶಿಕ್ಷಕಿ ಲಭ್ಯವಾಗಲಿದೆ ಎನ್ನಲಾಗಿದೆ.
ಕೇರಳದಲ್ಲಿ ಮೊದಲ ಪ್ರಯೋಗ!
2024ರಲ್ಲಿ ಕೇರಳ ರಾಜ್ಯದ ಶಾಲೆಯೊಂದರಲ್ಲಿ ಎಐ ಶಿಕ್ಷಕಿ ಐರಿಸ್ ಅನ್ನು ಪರಿಚಯಿಸಲಾಗಿದ್ದು, ಇದೀಗ ವಂಡ್ಸೆ ಶಾಲೆ ಐರಿಸ್ ಳನ್ನು ಪರಿಚಯಿಸಲು ಮುಂದಾಗಿದೆ. ಈಗಾಗಲೇ ಕಂಪನಿಯೊಂದು ಐರಿಸ್ ಅನ್ನು ಶಾಲೆಗೆ ನೀಡಿದ್ದು, ಅದರಲ್ಲಿ ಪಠ್ಯಕ್ರಮವನ್ನು ಅಳವಡಿಸುವ , ನಿರ್ವಹಣೆ ತರಬೇತಿ ನೀಡುವ ಕಾರ್ಯಗಳು ನಡೆಯುತ್ತಿದೆ. ಮೇಕರ್ ಲ್ಯಾಬ್ಸ್ ಎಜುಟೆಕ್ ಪ್ರೈವೇಟ್ ಲಿಮಿಟೆಡ್ ನ ಸಹಯೋಗದೊಂದಿಗೆ ಇದನ್ನು ಅಭಿವೃದ್ಧಿಗೊಳಿಸಲಾಗಿದೆ ಎನ್ನಲಾಗಿದೆ.
ತಿರುವನಂತಪುರಂನಲ್ಲಿರುವ ಕೆಟಿಸಿಟಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅನಾವರಣಗೊಂಡ ಐರಿಸ್, ವಿದ್ಯಾರ್ಥಿಗಳ ಕಲಿಕೆಯ ಅನುಭವವನ್ನು ಹೆಚ್ಚಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. ಅಟಲ್ ಟಿಂಕರಿಂಗ್ ಲ್ಯಾಬ್ ಯೋಜನೆ ಅಡಿಯಲ್ಲಿ ನಿರ್ಮಿಸಿ, ನೀತಿ ಆಯೋಗವು ಪ್ರಾರಂಭಿಸಿರುವ ಐರಿಸ್ ಇಪ್ಪತ್ತು ಭಾಷೆಗಳನ್ನು ಮಾತನಾಡುವ ಮತ್ತು ಎಲ್ಲಾ ಬಗೆಯ ಪ್ರಶ್ನೆಗಳನ್ನು ನಿಭಾಯಿಸುವ ಸಾಮರ್ಥ್ಯದೊಂದಿಗೆ ಪ್ರತಿಯೊಬ್ಬ ವಿದ್ಯಾರ್ಥಿಗೆ ಕಲಿಕೆಯ ಅನುಭವವನ್ನು ನೀಡುತ್ತದೆ ಎನ್ನಲಾಗಿದೆ.
111 ವರ್ಷ ಇತಿಹಾಸ ಇರುವ ಶಾಲೆಗೆ ಬರಲಿದ್ದಾಳೆ ಎಐ ಟೀಚರ್!
ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು 111 ವರ್ಷಗಳ ಇತಿಹಾಸವನ್ನು ಹೊಂದಿದ್ದು, 2015ರಲ್ಲಿ ಕೇವಲ 89 ವಿದ್ಯಾರ್ಥಿಗಳಿದ್ದರು. 2016ರಲ್ಲಿ ಶತಮಾನೋತ್ಸವ ಆಚರಿಸಿಕೊಂಡ ಶಾಲೆಯನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ಶ್ರೀಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಸಾರಥ್ಯದಲ್ಲಿ ಎಸ್ ಡಿಎಂಸಿ, ಹಳೆಯ ವಿದ್ಯಾರ್ಥಿಗಳ ಸಂಘ ಮತ್ತು ಶಿಕ್ಷಕರ ಸಹಕಾರದೊಂದಿಗೆ ಉಡುಪಿ ಜಿಲ್ಲೆಯಲ್ಲಿಯೇ ಒಂದು ಪ್ರತಿಷ್ಠಿತ ಶಾಲೆಯಾಗಿ ಮೂಡಿ ಬರುವಲ್ಲಿ ಸಹಕಾರವಿದೆ. ಪ್ರಸ್ತುತ 350ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿದ್ದು, ಸುತ್ತಮುತ್ತಲಿನ 12 ಗ್ರಾಮಗಳಿಂದ ವಿದ್ಯಾರ್ಥಿಗಳು ಶಾಲೆಗೆ ಆಗಮಿಸುತ್ತಿದ್ದಾರೆ ಎನ್ನಲಾಗಿದೆ.








