ಜಲ ಜೀವನ್ ಹೆಸರಿನಲ್ಲಿ ರಸ್ತೆ, ಚರಂಡಿ ಹೊಂಡ!
– ಮಲೆನಾಡ ಎಲ್ಲೆಡೆ ಕೋಟ್ಯಂತರ ರೂಪಾಯಿ ಅವ್ಯವಹಾರ?
– ಎಲ್ಲೆಡೆ ಅರ್ಧ ಬರ್ಧ ಕಾಮಗಾರಿ: ಜನರಿಗೆ ಸಮಸ್ಯೆ
ವಿಶೇಷ ವರದಿ: ಅನೂಪ್
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕೇಂದ್ರ ಸರ್ಕಾರದ ಯೋಜನೆಯಾಗಿರುವ ಜಲಜೀವನ್ ಯೋಜನೆಗೆ ಸಂಬಂಧಿಸಿದಂತೆ ಇದೀಗ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಹಲವು ತಾಲೂಕುಗಳ ಹಲವು ಭಾಗಗಳಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದ್ದು ಎಲ್ಲೆಡೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ರಸ್ತೆ, ಚರಂಡಿ ಅಗೆದು ಮಳೆಗಾಲದಲ್ಲಿ ಸಮಸ್ಯೆ ಬಿಗಡಾಯಿಸಲಿದೆ.
ಮಲೆನಾಡಲ್ಲಿ ಮೊದಲೇ ಮಳೆ. ಆದರೆ ಇನ್ನು ಕಾಮಗಾರಿ ವೇಗ ಸಿಕ್ಕಿಲ್ಲ.
5 ವರ್ಷ ಆದರೂ ಪೂರ್ಣ ಆಗದ ಕಾಮಗಾರಿ: ಹಣ ರಿಲೀಸ್!
2021ರ ಕ್ರಿಯಾ ಯೋಜನೆಯ ಅನ್ವಯ ಅನುಷ್ಠಾನಗೊಂಡಿರುವ ಅನೇಕ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಆದರೆ ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿ, ಹಣವನ್ನು ಪಾವತಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಆಡಳಿತದಲ್ಲಿ ಕೋಟ್ಯಂತರ ರೂಪಾಯಿ ಹಣ ಲಪಟಾಯಿಸಿದ್ದು, ಸಂಗತಿ ಹೊರಬೀಳುತ್ತಿದ್ದಂತೆ ಅದನ್ನು ಮುಚ್ಚಿ ಹಾಕುವ ಸಂಚು ಕೂಡ ನಡೆಯುತ್ತಿದೆ ಎನ್ನಲಾಗಿದೆ.
ನಕಲಿ ವಸ್ತುಗಳು… ಕಳಪೆ ಕಾಮಗಾರಿ!
ಪೈಪ್ ಲೈನ್, ನಲ್ಲಿ, ನೀರಿನ ಟ್ಯಾಂಕ್, ನಲ್ಲಿಕಟ್ಟೆ ನಿರ್ಮಾಣ, ಮೀಟರ್ ಜೋಡಣೆ ಕಾಮಗಾರಿಗಳು ಸರಿಯಾಗಿ ನಡೆದಿಲ್ಲ. ಅಲ್ಲದೆ ಅನೇಕ ಕಡೆ ರಸ್ತೆ, ಚರಂಡಿ ಹಾಳು ಮಾಡಲಾಗಿದೆ. ಕಾಮಗಾರಿಗೆ ಬಳಸಿರುವ ಸಾಮಗ್ರಿಗಳು ಕಳಪೆ ಗುಣಮಟ್ಟದ್ದಾಗಿದ್ದು, ಆ ಮೂಲಕ ಅಂದಾಜು ಪಟ್ಟಿಯ ನಿಯಮವನ್ನು ಉಲ್ಲಂಘಿಸಲಾಗಿದೆ ಎನ್ನಲಾಗಿದೆ.
ಮನೆಯ ಸಂಪರ್ಕ ಕಲ್ಪಿಸುವ ಪೈಪ್ ಲೈನ್ ಕಾಮಗಾರಿ ಬೇಕಾಬಿಟ್ಟಿಯಾಗಿ ಮಾಡಿರುವುದರಿಂದ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಅಧಿಕಾರಿಗಳು, ರಾಜಕಾರಣಿಗಳು ಶಾಮೀಲು?!
ಜನರಿಗೆ ಶುದ್ಧ ನೀರು ಕುದಿಯುವ ನೀರು ಪೂರೈಕೆ ಯೋಜನೆಯ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಅನೇಕ ಕಡೆ ಮಾಧ್ಯಮಕ್ಕೆ ದೂರುಗಳು ಬಂದಿವೆ. ಇದರ ಕುರಿತು ಸೂಕ್ತ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕಿದೆ.
ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಈ ಬಗ್ಗೆ ಗಮನಿಸಬೇಕಿದೆ. ಎರಡು ಜಿಲ್ಲೆಯ ಜಿಲ್ಲಾ ಅಧಿಕಾರಿಗಳು, ಸಿಇಒ, ಇಲಾಖೆ ಮುಖ್ಯಸ್ಥರು, ಶಾಸಕರು ಗಮನಿಸಿ ಕ್ರಮ ತೆಗೆದುಕೊಳ್ಳಬೇಕಿದೆ. ಇಲ್ಲವಾದಲ್ಲಿ ಜನರ ಹಣ ಈ ಮಳೆಗಾಲದಲ್ಲಿ ನೀರಲ್ಲಿ ಹೋಮ ಆಗಲಿದೆ.








