ಕರಾವಳಿ ಟಾಪ್ ನ್ಯೂಸ್
• ಕಾರ್ಕಳ: ಪಂಪ್ ಸೆಟ್ ಪೈಪ್ ಮೇಲೆತ್ತಲು ಹೋಗಿ ಬಾಲಕ ಸಾವು
• ಉಳ್ಳಾಲ: ರೈಲು ಡಿಕ್ಕಿ; ವ್ಯಕ್ತಿಗೆ ಗಂಭೀರ ಗಾಯ
• ಬ್ರಹ್ಮಾವರ: ಆತ್ಮಹತ್ಯೆಗೆ ಶರಣಾದ ಉದ್ಯಮಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಳ್ಳಾಲ: ವ್ಯಕ್ತಿಯೊಬ್ಬರಿಗೆ ರೈಲು ಡಿಕ್ಕಿ ಹೊಡೆದ ಘಟನೆ, ಮಂಗಳವಾರದಂದು ತೊಕ್ಕೊಟ್ಟು ಸಮೀಪದಲ್ಲಿ ನಡೆದಿದೆ. ಗಾಯಾಳುವನ್ನು ಕೇರಳ ಮೂಲದ ಸಜಿತ್ ಎಂದು ಗುರುತಿಸಲಾಗಿದೆ. ಸಜಿತ್ ಅವರು ರೈಲ್ವೆ ಹಳಿಯ ಬಳಿ ಇದ್ದ ಸಂದರ್ಭದಲ್ಲಿ, ರೈಲು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ರೈಲ್ವೆ ಪೊಲೀಸರು ಗಂಭೀರ ಸ್ಥಿತಿಯಲ್ಲಿದ್ದ ಸಜಿತ್ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ಕೊಡಿಸಿದ್ದಾರೆ. ಅವರ ಪರ್ಸ್ ನಲ್ಲಿ ಇದ್ದ ಆಧಾರ್ ಕಾರ್ಡ್ ಮೂಲಕ ಸಜಿತ್ ಅವರು ಕೇರಳದ ಕಣ್ಣೂರಿನವರು ಎನ್ನುವ ಸಂಗತಿ ತಿಳಿದುಬಂದಿದೆ. ಸಜಿತ್ ಅವರಿಗೆ ಅಪಘಾತವಾಗಿರುವ ಕುರಿತು ಅವರ ಪೋಷಕರಿಗೆ ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
•ಕಾರ್ಕಳ: ಪಂಪ್ ಸೆಟ್ ನ ಪೈಪ್ ಮೇಲೆತ್ತಲು ಹೋಗಿ ಬಾಲಕ ಸಾವು
ಕಾರ್ಕಳ: ಪಂಪ್ ಸೆಟ್ ಗೆ ಅಳವಡಿಸಿದ್ದ ಪೈಪ್ ಅನ್ನು ಮೇಲೆತ್ತಲು ಹೋದ ಸಂದರ್ಭದಲ್ಲಿ, ಬಾಲಕನೊಬ್ಬ ಮೃತಪಟ್ಟ ಘಟನೆ, ಬೋಳ ಗ್ರಾಮದ ಪುರ್ಲಡ್ಕ ಪರಾರಿ ಎನ್ನುವಲ್ಲಿ ನಡೆದಿದೆ. ರಾಜೇಶ್ ಶೆಟ್ಟಿ ಅವರು ತೋಟಕ್ಕೆ ನೀರು ಬಿಡಲೆಂದು ಬಾವಿಗೆ ಪಂಪ್ ಸೆಟ್ ಅನ್ನು ಅಳವಡಿಸಿದ್ದು, ಪಂಪ್ ಆನ್ ಮಾಡಿದಾಗ ನೀರು ಬಾರದೆ ಇದ್ದ ಹಿನ್ನೆಲೆಯಲ್ಲಿ, ಅವರ ಮಕ್ಕಳಾದ ರಿತಿಕ್ ಮತ್ತು ರಿತೇಶ್ ಬಾವಿಯ ಬಳಿಗೆ ಹೋಗಿದ್ದರು. ನಂತರ ರಿತಿಕ್ ಬಾವಿಯಲ್ಲಿ ಅಳವಡಿಸಿದ್ದ ಪೈಪ್ ಅನ್ನು ಮೇಲಕ್ಕೆತ್ತಲು ಪ್ರಯತ್ನಿಸಿದಾಗ, ಆಯಾತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಬ್ರಹ್ಮಾವರ: ಆತ್ಮಹತ್ಯೆಗೆ ಶರಣಾದ ಉದ್ಯಮಿ
ಬ್ರಹ್ಮಾವರ: ಉದ್ಯಮಿಗಳಾದ ಎಚ್.ಎಸ್. ನರಸಿಂಹ ಎನ್ನುವವರು ಬೆಂಗಳೂರಿನಲ್ಲಿ ಲೇಬರ್ ಕಾಂಟ್ರಾಕ್ಟ್ ಸಂಸ್ಥೆ ನಡೆಸುತ್ತಿದ್ದು, ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ವ್ಯವಹಾರದಲ್ಲಿ ಆರ್ಥಿಕ ನಷ್ಟ ಉಂಟಾಗಿದ್ದು, ಹಲವರಿಂದ ಸಾಲ ಪಡೆದಿದ್ದರು ಎನ್ನಲಾಗಿದೆ. ಕಳೆದೆರಡು ತಿಂಗಳಿನಿಂದ ಬಡ್ಡಿಯನ್ನು ಪಾವತಿಸಲು ಸಾಧ್ಯವಾಗದೆ ಸಾಲಗಾರರಿಂದ ಎದುರಾಗುತ್ತಿದ್ದ ಕಿರುಕುಳವನ್ನು ಸಹಿಸಲಾಗದೆ, ಮನನೊಂದು ಬ್ರಹ್ಮಾವರದ ಲಾಡ್ಜ್ ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ನರಸಿಂಹ ಅವರ ಪುತ್ರ ನೀಡಿರುವ ದೂರಿನ ಆಧಾರದ ಮೇಲೆ ಐದು ಜನರ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







