ಮಳೆ ಕಡಿಮೆ.. ಬಿಸಿಲಿನ ತಾಪ ಹೆಚ್ಚು!
– ಈ ವರ್ಷ ಭಾರತಕ್ಕೆ ‘ಎಲ್ ನಿನೋ’ ಭೀತಿ
– ಕೃಷಿ ಕ್ಷೇತ್ರಕ್ಕೆ ಭಾರೀ ತೊಂದರೆ ಸಾಧ್ಯತೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನವದೆಹಲಿ/ ಬೆಂಗಳೂರು: ಈ ವರ್ಷ ಇದೀಗ ಭಾರೀ ಬಿಸಿಲು ಜನ ಮನೆಯಿಂದ ಹೊರಗಡೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ. ತೀವ್ರ ತಾಪಮಾನ, ಮಳೆ ಕೊರತೆ ಮುನ್ಸೂಚನೆ ಕಾಣುತ್ತಿದೆ. ಈ ವರ್ಷ ಪೆಸಿಫಿಕ್ ಸಾಗರದಲ್ಲಿ ‘ಎಲ್ ನಿನೋ’ ಎಫೆಕ್ಟ್ ನಿಂದಾಗಿ ಭಾರತದ ನೈಋತ್ಯ ಮಾನ್ಸೂನ್ ಮೇಲೆ ನೇರ ಪರಿಣಾಮ ಬೀರಲಿದೆ. ಈ ಬಾರಿ ದೇಶದಲ್ಲಿ ಸರಾಸರಿಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ. ಮಳೆ ಕೊರತೆಯ ಜೊತೆಗೆ, ದೇಶದಾದ್ಯಂತ ವಾಡಿಕೆಗಿಂತ ಅಧಿಕ ತಾಪಮಾನ ಕಂಡುಬರುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ವರ್ಷ ಭಾರತದಲ್ಲಿ ನೈಋತ್ಯ ಮಾನ್ಸೂನ್ ಮೇಲೆ ‘ಎಲ್ ನಿನೊ’ ಪ್ರಭಾವ ಸಾಧ್ಯತೆ ಇದ್ದು ಅಧಿಕ ತಾಪಮಾನ ಮತ್ತು ಮಳೆ ಕೊರತೆ ಮುನ್ಸೂಚನೆ ಕಾಣುತ್ತಿದೆ.
ಮಳೆಯ ಪ್ರಮಾಣವು ದೀರ್ಘಾವಧಿಯ ಸರಾಸರಿಗಿಂತ ಶೇ. 92 ಅಥವಾ ಅದಕ್ಕಿಂತ ಕಡಿಮೆ ಇರಬಹುದು ಎಂದು ಅಂದಾಜು ಮಾಡಲಾಗಿದೆ. ದೇಶವು ಅಧಿಕ ತಾಪಮಾನ ಮತ್ತು ಮಳೆ ಕೊರತೆಯನ್ನು ಎದುರಿಸಬೇಕಾಗಬಹುದು ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಮಳೆ ಕೊರತೆ:ಭಾರತದ ವಾರ್ಷಿಕ ಮಳೆಯ ಶೇ. 75 ರಷ್ಟು ಪೂರೈಸುವ ನೈಋತ್ಯ ಮಾನ್ಸೂನ್ ಈಬಾರಿ ಎಲ್ ನಿನೋ ಪ್ರಭಾವದಿಂದಾಗಿ ದುರ್ಬಲಗೊಳ್ಳುವ ಸಾಧ್ಯತೆಯಿದೆ. ಮಳೆಯ ಪ್ರಮಾಣವು ದೀರ್ಘಾವಧಿಯ ಸರಾಸರಿಗಿಂತ ಶೇ. 92 ಅಥವಾ ಅದಕ್ಕಿಂತ ಕಡಿಮೆ ಇರಬಹುದು ಎಂದು ಅಂದಾಜಿಸಲಾಗಿದೆ. ಎಲ್ ನಿನೊ ಪ್ರಭಾವ: ಪ್ರಸ್ತುತ ಪೆಸಿಫಿಕ್ ಸಾಗರದಲ್ಲಿ ‘ಲಾ ನಿನಾ’ ಸ್ಥಿತಿ ಇದ್ದರೂ, ಜುಲೈ ವೇಳೆಗೆ ಅದು ‘ಎಲ್ ನಿನೋ ‘ ಆಗಿ ಬದಲಾಗುವ ಸಾಧ್ಯತೆ ಇದೆ. ಈ ಬದಲಾವಣೆಯು ಮುಂಗಾರು ಮಳೆಯ ಮೇಲೆ ನೇರ ಪರಿಣಾಮ ಬೀರಲಿದ್ದು, ವಿಶೇಷವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಮಳೆ ಗಣನೀಯವಾಗಿ ಕಡಿಮೆಯಾಗಬಹುದು.
ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳು ಬೆಳೆಗಳಿಗೆ ಅತ್ಯಂತ ನಿರ್ಣಾಯಕವಾಗಿದ್ದು, ಈ ಅವಧಿಯಲ್ಲಿ ದೀರ್ಘಕಾಲದ ಶುಷ್ಕ ಹವಾಮಾನ ಕಂಡುಬಂದರೆ ಕೃಷಿ ಚಟುವಟಿಕೆಗಳಿಗೆ ಭಾರಿ ಹೊಡೆತ ಬೀಳಲಿದೆ. ವಾಯುವ್ಯ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಸಾಮಾನ್ಯ ಮಳೆಯಾಗುವ ನಿರೀಕ್ಷೆಯಿದ್ದರೂ, ಮಧ್ಯ ಭಾರತದ ಪ್ರಮುಖ ಕೃಷಿ ಪ್ರದೇಶಗಳಲ್ಲಿ ತೀವ್ರ ಮಳೆ ಕೊರತೆ ಮತ್ತು ಬರಗಾಲದಂತಹ ಪರಿಸ್ಥಿತಿ ಉಂಟಾಗುವ ಅಪಾಯವಿದೆ. ಮಳೆ ಕೊರತೆಯನ್ನು ಎದುರಿಸಲು ಕಡಿಮೆ ನೀರು ಬಳಸುವ ಮತ್ತು ಹವಾಮಾನ ವೈಪರೀತ್ಯಕ್ಕೆ ತಡೆದುಕೊಳ್ಳುವ ಬೆಳೆಗಳನ್ನು ಬೆಳೆಯಲು ರೈತರಿಗೆ ಸಲಹೆ ನೀಡಲಾಗಿದೆ. ಅಲ್ಲದೆ, ನೀರಿನ ಸಮರ್ಪಕ ನಿರ್ವಹಣೆ ಮತ್ತು ವಿದ್ಯುತ್ ನಿರ್ವಹಣೆಗೆ ಸರ್ಕಾರಗಳು ಸಜ್ಜಾಗಬೇಕಿದೆ ಎಂದು ತಜ್ಞರು ತಿಳಿಸಿದ್ದಾರೆ. ಹಿಂದೂ ಮಹಾಸಾಗರದ ದ್ವಿಗುಣ ಪ್ರಭಾವವು ಸಕಾರಾತ್ಮಕವಾಗಿದ್ದರೆ ಎಲ್ ನಿನೊ ಪರಿಣಾಮ ಸ್ವಲ್ಪ ಮಟ್ಟಿಗೆ ತಗ್ಗಬಹುದು ಎಂದು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ.








