- ಕಿಡಿ ಹಚ್ಚಿದ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ
- ಉತ್ತರ ಕರ್ನಾಟಕದವ್ರೆ ಸಿಎಂ ಆಗಲು ಪ್ಲಾನ್?
ಹುಬ್ಬಳ್ಳಿ: ರಾಜ್ಯ ಬಿಜೆಪಿಯಲ್ಲಿ ಒಂದೆಡೆ ನಾಯಕತ್ವ ಬದಲಾವಣೆ ಕೂಗು ಹೆಚ್ಚಾಗುತ್ತಿದ್ದಂತೆಯೇ ಮತ್ತೊಂದೆಡೆ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಮಂಗಳವಾರ ರಾತ್ರಿ ಹುಬ್ಬಳ್ಳಿಯ ಖಾಸಗಿ ಹೊಟೇಲಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನಡೆದ ರಾಜ್ಯ ನಾಯಕರುಗಳ ರಹಸ್ಯ ಸಭೆಯಲ್ಲಿ ನಡೆದ ಕಾವೇರಿದ ಚರ್ಚೆಯಲ್ಲಿ
ಬೆಳಗಾವಿಯ ರಾಜಕಾರಣ ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಬಿರುಗಾಳಿ ಎಬ್ಬಿಸಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ. ಯಡಿಯೂರಪ್ಪನವರ ಬದಲಾವಣೆ ಕುರಿತಂತೆ ತೆರೆಮರೆಯಲ್ಲಿ ಕಸರತ್ತು ಜೋರಾಗಿ ನಡೆದಿದ್ದು ಗಟ್ಟಾಗಿ ಏನೂ ಉಳಿದಿಲ್ಲ. ಮುಂದಿನ ಸಿಎಂ ಉತ್ತರ ಕರ್ನಾಟಕದವರೇ ಆಗಬೇಕೆಂಬ ದನಿಗೆ ನಗರದಲ್ಲಿ ನಡೆದ ರಹಸ್ಯ ಸಭೆ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಹೆಸರು ಹೇಳಲಿಚ್ಛಿಸದ ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ನೇತೃತ್ವದಲ್ಲಿ ನಡೆದ ರಹಸ್ಯ ಸಭೆಯಲ್ಲಿ ಡಿಸಿಪಿ ಲಕ್ಷ್ಮಣ ಸವದಿ, ಸಚಿವ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಾಲಚಂದ್ರ ಜಾರಕಿಹೋಳಿ, ಉಮೇಶ ಕತ್ತಿ ಸಹೋದರರು, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಮಹಾಂತೇಶ ಕವಟಗಿಮಟ, ವೀರಣ್ಣ ಕದಾಡಿ ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆ ಆರಂಭಗೊಳ್ಳುತ್ತಿದ್ದಂತೆಯೇ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರ ಗದ್ದಲಕ್ಕೆ ಕಾರಣವಾಗಿದೆ. ಉಮೇಶ ಕತ್ತಿ ಸಹೋದರರು ಹಾಗೂ ಬಾಲಚಂದ್ರ ಜಾರಕಿಹೋಳಿ ಒಂದಾಗಿದ್ದು, ಡಿಸಿಎಂ ಲಕ್ಷಣ ಸವದಿ ಬಣದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಎರಡು ಬಣಗಳ ನಡುವೆ ಮಾತಿಗೆ ಮಾತು ಬೆಳೆದಿದೆ. ಶತಾಯಗತಾಯ ಎರಡೂ ಬಣದ ಮುಖಂಡರು ಅಧಿಕಾರದ ಚುಕ್ಕಾಣಿ ಹಿಡಿಯಲು ಪಟ್ಟು ಸಡಿಲಿಸಲು ಸಿದ್ಧರಾಗಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕಿಗೆ ಬೆಂಬಲ ನೀಡಲು ಉಮೇಶ ಕತ್ತಿ ಮುಂದಾಗಿರುವುದು ಲಕ್ಷ್ಮಣ ಸವದಿ ಕೆಂಗಣ್ಣಿಗೆ ಗುರಿಯಾಗಿದೆ. ವರಿಷ್ಠರು ಸೂಚನೆ ನೀಡಿದ್ದರೂ ಬಗ್ಗದ ಉಮೇಶ ಕತ್ತಿ, ಸವದಿ ಬೆಂಬಲಿಗರು ಚುನಾವಣೆಯಲ್ಲಿ ನಿಲ್ಲದಂತೆ ಬಿಗಿಪಟ್ಟು ಹಿಡಿದಿದ್ದಾರೆ. ಇದಕ್ಕೆ ಸವದಿ ಸುತಾರಾಂ ಒಪ್ಪದಿದ್ದಾಗ ಸಿಟ್ಟಿನಿಂದ ಕತ್ತಿ ಸಹೋದರರು ಸಭೆಯಿಂದ ಹೊರ ನಡೆದಿದ್ದಾರೆ.
ಕತ್ತಿ ಮಸಿಯಲು ಯತ್ನ!: ಸಚಿವ ಸ್ಥಾನ ಸಿಗದೇ ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಂಡಿರುವ ಉಮೇಶ ಕತ್ತಿ ಡಿಸಿಸಿ ಬ್ಯಾಂಕ್ ವಿಚಾರ ಮುಂದಿಟ್ಟುಕೊಂಡು ವರಿಷ್ಠರ ಮೇಲೆ ಕತ್ತಿ ಮಸೆಯಲು ಮುಂದಾಗಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನಕ್ಕೆ ನಾಂದಿ ಹಾಡಿದ್ದು ಇದೇ ಡಿಸಿಸಿ ಬ್ಯಾಂಕ್ ವಿಚಾರ ಎಂಬುದು ಉಲ್ಲೇಖನೀಯ. ಇದೀಗ ಇದೇ ವಿಚಾರ ಮತ್ತೊಮ್ಮೆ ಬಿರುಗಾಳಿ ಎಬ್ಬಿಸಿದ್ದು ಬೆಳಗಾವಿ ರಾಜಕಾರಣದ ಒಳಮರ್ಮ ಅರಿತ ಪಕ್ಷದ ವರಿಷ್ಠರು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಭಿನ್ನಮತ ಶಮನಕ್ಕೆ ನಡೆಸಿದ ಪ್ರಯತ್ನವೂ ಇದೀಗ ಕೈಕೊಟ್ಟಿದೆ.
ಪಕ್ಷದಲ್ಲಿನ ಆಂತರಿಕ ಬೇಗುದಿ ಮುಂಬರುವ ಬೆಳಗಾವಿ ಲೋಕಸಭಾ ಚುನಾವಣೆ ಮೇಲೂ ಪರಿಣಾಮ ಬೀರಲಿದ್ದು, ಅಭ್ಯರ್ಥಿ ಯಾರು ಆಗಬೇಕು ಎಂಬುದರ ಬಗ್ಗೆಯೂ ಚರ್ಚೆ ಆಗಿದೆ. ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರನ್ನೇ ಕಣಕ್ಕಿಳಿಸಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗುತ್ತಿದ್ದಂತೆಯೇ, ಮತ್ತೇ ಸಿಎಂ ಬದಲಾವಣೆ ಕೂಗು ಕೇಳಿ ಬಂದಿದೆ.







