ಟಾಪ್ 3 ನ್ಯೂಸ್
ಬೆಂಗಳೂರಿಗೆ ಮೇ 10ಕ್ಕೆ ಪ್ರಧಾನಿ ಆಗಮನ!
– ರವಿಶಂಕರ್ ಗುರೂಜಿ ಅವರ 70ನೇ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗಿ
– ಶಿವಮೊಗ್ಗ: ಪೊಲೀಸರ ಮೇಲೆ ಹಲ್ಲೆ; ಆರೋಪಿಗಳ ಬಂಧನ
– ಪತ್ನಿ, ಮಕ್ಕಳಿಗೆ ಜೀವನಾoಶ: ಕೋರ್ಟ್ ಮಹತ್ವದ ತೀರ್ಪು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷಾಚರಣೆ ಹಾಗೂ ರವಿಶಂಕರ್ ಗುರೂಜಿ ಅವರ 70ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಮೇ 10ರ ಭಾನುವಾರದಿಂದ ಮೇ 25ರ ಸೋಮವಾರದವರೆಗೆ ಆಶ್ರಮದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಪ್ರಯುಕ್ತ ಮೊದಲ ದಿನವಾದ ಮೇ 10ರ ಭಾನುವಾರದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಸಾಂಪ್ರದಾಯಿಕ ಕಲೆಗಳಿಂದ ಶೃಂಗಾರಗೊಂಡಿರುವ ಆರ್ಟ್ ಆಫ್ ಲಿವಿಂಗ್ ನ ನೂತನ ಧ್ಯಾನ ಮಂದಿರವನ್ನು ಉದ್ಘಾಟಿಸಲಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ
•ಶಿವಮೊಗ್ಗ: ಪೊಲೀಸರ ಮೇಲೆ ಹಲ್ಲೆ; ಆರೋಪಿಗಳ ಬಂಧನ
ಶಿವಮೊಗ್ಗ: ಸಂಚಾರಿ ನಿಯಮವನ್ನು ಉಲ್ಲಂಘಿಸಿದ್ದರ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಪ್ರಶ್ನಿಸಿದ್ದರಿಂದ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿದ ಘಟನೆ, ಗಾಂಧಿ ಬಜಾರ್ ನಲ್ಲಿ ನಡೆದಿದೆ. ಪೂರ್ವ ಸಂಚಾರ ಪೊಲೀಸ್ ಠಾಣೆಯ ಎಎಸ್ಐ ಮಂಜುನಾಥ್ ಮತ್ತು ಸಿಪಿಸಿ ಸಂತೋಷ್ ಅವರು ಬೆಳಿಗ್ಗೆ ಗಾಂಧಿ ಬಜಾರಿನಲ್ಲಿ, ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಆಗಮಿಸಿದ್ದಾರೆ. ಆಗ ಪೊಲೀಸರು ತಡೆದು ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಧರಿಸುವಂತೆ ಸೂಚನೆಯನ್ನು ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ ಸಯ್ಯದ್ ಮುಜಾಮಿಲ್ ರಸ್ತೆಯ ನಡುವೆಯೇ ಪೊಲೀಸರ ಮೇಲೆ ವಾಗ್ದಾಳಿ ನಡೆಸಿದ್ದಾನೆ.
ಆಗ ಸ್ಥಳಕ್ಕೆ ಆಗಮಿಸಿದ ಜಬಿವುಲ್ಲಾ ಎನ್ನುವ ವ್ಯಕ್ತಿಯು ಸಯ್ಯದ್ ಮುಜಾಮಿಲ್ ಜೊತೆಗೆ ಸೇರಿಕೊಂಡು “ನಾವು ಹೆಲ್ಮೆಟ್ ಹಾಕುವುದಿಲ್ಲ. ನೀವು ಏನು ಮಾಡುತ್ತೀರಾ?”ಎಂದು ಅವಾಚ್ಯ ಶಬ್ದಗಳಿಂದ ಬೈದು, ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಅಷ್ಟೇ ಅಲ್ಲದೆ ಸಮವಸ್ತ್ರದಲ್ಲಿದ್ದ ಅಧಿಕಾರಿಗಳನ್ನು ದೂಡಿ, ಸರ್ಕಾರಿ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ಬೈಕ್ ಕೀ ಅನ್ನು ಕಿತ್ತುಕೊಂಡಿದ್ದರಿಂದ, ಆರೋಪಿಗಳು ಪೊಲೀಸರಿಗೆ ಬೆದರಿಕೆ ಹಾಕಿ ಪರಾರಿಯಾಗಲು ಯತ್ನಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಪರಿಣಾಮವಾಗಿ ಪೊಲೀಸರು ಸಯ್ಯದ್ ಮುಜಾಮಿಲ್ ಮತ್ತು ಜಬಿವುಲ್ಲಾ ಅವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪತ್ನಿ, ಮಕ್ಕಳಿಗೆ ಜೀವನಾoಶ: ಕೋರ್ಟ್ ಮಹತ್ವದ ತೀರ್ಪು
ಬೆಂಗಳೂರು: ಪುರುಷನೊಬ್ಬ ಎರಡನೇ ವಿವಾಹವಾದರೆ ಮೊದಲ ಪತ್ನಿಗೆ ಮತ್ತು ಆಕೆಯ ಮಕ್ಕಳ ಜೊತೆಗೆ ಪುರುಷನ ವೃದ್ಧ ತಾಯಿಯಿದ್ದರೆ ಅವರಿಗೆ ಜೀವನಾಂಶ ನೀಡಲು ಹಣವಿಲ್ಲವೆಂದು ಹೇಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಉಚ್ಚ ನ್ಯಾಯಾಲಯವು ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಕೌಟುಂಬಿಕ ನ್ಯಾಯಾಲಯವು ನೀಡಿದ್ದ ಮಾಸಿಕ 30.000 ರೂಪಾಯಿ ಜೀವನಾಂಶದ ಆದೇಶವನ್ನು ಎತ್ತಿ ಹಿಡಿದಿರುವ ನ್ಯಾಯಪೀಠವು ತನ್ನ ಪತ್ನಿ ಮತ್ತು ವೃದ್ಧ ತಾಯಿಯನ್ನು ಸಲಹುವುದು ಪುರುಷನ ಕಾನೂನಾತ್ಮಕ ಜವಾಬ್ದಾರಿಯಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಿದೆ.
ಮೊದಲ ಪತ್ನಿ ಮತ್ತವರ ಮಕ್ಕಳಿಗೆ ಮಾಸಿಕ 30.000 ರೂಪಾಯಿಗಳಷ್ಟು ಹಣವನ್ನು ಪರಿಹಾರದ ರೂಪದಲ್ಲಿ ನೀಡಬೇಕೆಂದು ಕೌಟುಂಬಿಕ ನ್ಯಾಯಾಲಯವು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಪುರುಷರೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಕೆ.ಬಿ.ಗೀತಾ ಅವರಿದ್ದ ಏಕಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದೆ ಎನ್ನುವ ಮಾಹಿತಿ ಲಭಿಸಿದೆ.








