ಪೆಟ್ರೋಲ್, ಡೀಸೆಲ್ ಪ್ರಾಬ್ಲಮ್ ಆಗುತ್ತಾ?
– ಜಾಗತಿಕ ಮಟ್ಟದಲ್ಲಿ ಇಂಧನ ಸರಬರಾಜು ಸಮಸ್ಯೆ
– ಗ್ರಾಹಕರಿಗೆ ಬಾಟಲಿ, ಕ್ಯಾನ್ ಗಳಲ್ಲಿ ಪೆಟ್ರೋಲ್, ಡೀಸೆಲ್ ನೀಡುವಂತಿಲ್ಲ
– ಹೊಸ ನಿಯಮ ಏನು? ಬಂಕ್ ಗಳಿಗೆ ಸೂಚನೆ ಏನು?
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಅಭಾವದ ಕಾರಣದಿಂದಾಗಿ ರಾಜ್ಯ ಸರ್ಕಾರವು ಹೊಸ ಮಾರ್ಗಸೂಚಿಯೊಂದನ್ನು ಹೊರಡಿಸಿದೆ. ಜಾಗತಿಕ ಮಟ್ಟದಲ್ಲಿ ಇಂಧನ ಸರಬರಾಜು ಸಮಸ್ಯೆ ಎದುರಾಗಿದ್ದು ಈ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ನಿಯಮ 2022 ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರವು ಬಂಕ್ ಗಳಿಗೆ ಆದೇಶವನ್ನು ಹೊರಡಿಸಿದೆ. ನಿಯಮದ ಪ್ರಕಾರ ರಾಜ್ಯದ ಎಲ್ಲಾ ಪೆಟ್ರೋಲ್ ಬಂಕ್ ಗಳು ಸರ್ಕಾರ ನಿಗದಿಪಡಿಸಿರುವ ನಿಯಮಾವಳಿಯ ಪ್ರಕಾರವೇ ಇಂಧನಗಳನ್ನು ಮಾರಾಟ ಮಾಡಬೇಕಾಗಿದೆ.
ಒಂದು ವೇಳೆ ಇಂಧನವನ್ನು ಅಗತ್ಯಕ್ಕಿಂತ ಹೆಚ್ಚು ಸಂಗ್ರಹಿಸಿಟ್ಟುಕೊಂಡು ಅಭಾವವನ್ನು ಮತ್ತಷ್ಟು ಹೆಚ್ಚಿಸಿದರೆ ಅವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ. ಸರ್ಕಾರದ ಮಾರ್ಗಸೂಚಿಯ ಪ್ರಕಾರ ವಾಹನಗಳ ಕಂಟೇನರ್ ಗಳಿಗೆ ಗರಿಷ್ಠ 200 ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಬೇಕಿದೆ, ಗ್ರಾಹಕರಿಗೆ ಬಾಟಲಿ ಮತ್ತು ಕ್ಯಾನ್ ಗಳಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ನೀಡುವಂತಿಲ್ಲ, ಅನಧಿಕೃತ ಕಂಟೇನರ್ ಗಳಿಗೆ ಇಂಧನವನ್ನು ತುಂಬಿಸುವಂತಿಲ್ಲ, ವಾಹನಗಳ ಟ್ಯಾಂಕ್ ಗಳಿಗೆ ಮಾತ್ರ ಇಂಧನ ಪೂರೈಕೆ ಮಾಡಲಾಗುತ್ತದೆ. ಚಿಲ್ಲರೆ ಮಾರಾಟದ ಹೆಸರಿನಲ್ಲಿ ಸಗಟು ವ್ಯಾಪಾರಕ್ಕೆ ಅವಕಾಶವಿಲ್ಲ, ಕೃಷಿ ಚಟುವಟಿಕೆಗಳಿಗೆ ಮಾತ್ರ ಅಗತ್ಯ ಪ್ರಮಾಣದಲ್ಲಿ ಡೀಸೆಲ್ ಪೂರೈಕೆ, ಸಂಬಂಧಿತ ಅಧಿಕಾರಿಗಳಿಂದ ಕಾಲಕಾಲಕ್ಕೆ ಬಂಕ್ ಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಜಿಲ್ಲಾಧಿಕಾರಿಗಳಿಂದ ನಿರಂತರ ಮೇಲ್ವಿಚಾರಣೆ ನಡೆಯಲಿದೆ ಎನ್ನುವ ಮಾಹಿತಿ ಲಭಿಸಿದೆ.
ದೇಶದಲ್ಲಿ ಏನು ಆಗುತ್ತಿದೆ?
ಸರ್ಕಾರದ ಈ ನಿಯಮದಿಂದಾಗಿ ರಾಜ್ಯದಲ್ಲಿ ಇಂಧನ ಕೊರತೆ ಉಂಟಾಗುತ್ತದೆಯೇ ಎನ್ನುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು ರಾಜ್ಯದಲ್ಲಿ ಇಂಧನದ ಕೊರತೆ ಎದುರಾಗುವುದಿಲ್ಲ ಮತ್ತು ಬಂಕ್ ಗಳಲ್ಲಿ ಎಂದಿನಂತೆಯೇ ಸರಬರಾಜು ಮುಂದುವರಿಯಲಿದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಅದೇ ರೀತಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಈ ಮಾರ್ಗಸೂಚಿಯು ಮುನ್ನೆಚ್ಚರಿಕೆಯ ಕ್ರಮವಾಗಿದ್ದು, ಕಾಳಸಂತೆಯಲ್ಲಿ ಇಂಧನ ಮಾರಾಟ, ಅತಿಯಾದ ಸಂಗ್ರಹಣೆ ಮತ್ತು ಅದರ ದುರುಪಯೋಗವನ್ನು ತಡೆಯುವ ಉದ್ದೇಶವನ್ನು ಒಳಗೊಂಡಿದೆ ಎಂದು ತಿಳಿಸಿದೆ.








