ಜನರಿಗೆ ಕೇಂದ್ರದ ಶಾಕ್: ಚಿನ್ನ ಇನ್ನು ದುಬಾರಿ!
– ಆಮದು ಸುಂಕ ಹೆಚ್ಚಳ; ಬೆಲೆಗಳಲ್ಲಿ ಭಾರೀ ಏರಿಕೆ
– ಚಿನ್ನದ ಬೆಲೆ ಒಂದು ಗ್ರಾಂಗೆ 1.275 ರೂಪಾಯಿ ಹೆಚ್ಚಳ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನವದೆಹಲಿ: ಕೇಂದ್ರ ಸರ್ಕಾರವು ಚಿನ್ನ ಮತ್ತು ಬೆಳ್ಳಿಯ ಆಮದು ತೆರಿಗೆಯನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಅವುಗಳ ಬೆಲೆಯು ದುಪ್ಪಟ್ಟಾಗಿದೆ. ಸರ್ಕಾರವು ಮಧ್ಯರಾತ್ರಿಯಿಂದಲೇ ಆಮದು ತೆರಿಗೆ ಜಾರಿಗೆ ಬರುವಂತೆ ಮಾಡಿದ್ದು, ಶೇಕಡ 6ರಿಂದ ಶೇಕಡ 15ಕ್ಕೆ ಏರಿಸಿದ್ದರ ಪರಿಣಾಮವಾಗಿ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಅಮೂಲ್ಯ ವಸ್ತುಗಳ ಬೆಲೆ ಶೇಕಡ 6ರಷ್ಟು ಅಧಿಕವಾಗಿದೆ. ಪರಿಣಾಮವಾಗಿ ಜ್ಯುವೆಲ್ಲರಿ ಅಸೋಸಿಯೇಷನ್ ಬೆಲೆ ಪಟ್ಟಿಯ ಪ್ರಕಾರ ಚಿನ್ನದ ಬೆಲೆ ಒಂದು ಗ್ರಾಂಗೆ 1.275 ರೂಪಾಯಿಗಳಷ್ಟು ಹೆಚ್ಚಳವಾಗಿದ್ದು, ಆಭರಣವು 14.115 ರಿಂದ 15.390 ರೂಪಾಯಿಗಳಷ್ಟು ಹೆಚ್ಚಳಗೊಂಡಿದೆ.
ಅದೇ ರೀತಿ ಅಪರಂಜಿ ಚಿನ್ನದ ಬೆಲೆ 16.789 ರೂಪಾಯಿ ತಲುಪಿದೆ. ಇನ್ನು ಬೆಳ್ಳಿಯ ಬೆಲೆ ಬೆಂಗಳೂರು ಮತ್ತು ಮುಂಬೈಗಳಲ್ಲಿ ಒಂದು ಗ್ರಾಂಗೆ 310 ರೂಪಾಯಿಗಳಷ್ಟಿದ್ದರೆ, ಚೆನ್ನೈನಲ್ಲಿ ಇದರ ಬೆಲೆ 330ಕ್ಕೆ ಏರಿದೆ. ಅಂದರೆ ಬೆಳ್ಳಿಯ ಬೆಲೆ 20 ರೂಪಾಯಿಗಳಷ್ಟು ಹೆಚ್ಚಳಗೊಂಡಿದೆ. ವಿದೇಶಗಳಲ್ಲಿ ಚಿನ್ನದ ಬೆಲೆ ಕಡಿಮೆಯಾಗಿದ್ದರೂ ಸಹ, ಆಮದು ತೆರಿಗೆಯ ಕಾರಣದಿಂದಾಗಿ ಭಾರತ ದೇಶದಲ್ಲಿ ಮಾತ್ರ ಬೆಲೆ ಏರಿಕೆ ಕಂಡುಬಂದಿದೆ ಎನ್ನಲಾಗಿದೆ. 2024-25 ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಚಿನ್ನದ ಮೇಲಿನ ಆಮದು ತೆರಿಗೆಯನ್ನು ಶೇಕಡ 15 ರಿಂದ ಶೇಕಡ 6ಕ್ಕೆ ಇಳಿಸಲಾಗಿತ್ತು. ಈಗ ಅದೇ ಪ್ರಮಾಣದಲ್ಲಿ ಏರಿಸಲಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಸಧ್ಯದ ಪರಿಸ್ಥಿತಿಯಲ್ಲಿ ಭಾರತ ದೇಶದಲ್ಲಿ 10 ಗ್ರಾಂ ನ 22 ಕ್ಯಾರೆಟ್ ಚಿನ್ನದ ಬೆಲೆ 1.53.900, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 1.67.890, 100 ಗ್ರಾಂ ಬೆಳ್ಳಿಯ ಬೆಲೆ 31.೦೦೦ ರೂಪಾಯಿಗಳಷ್ಟಿದೆ ಎಂದು ಅಂದಾಜಿನ ಪ್ರಕಾರ ಮಾಹಿತಿ ಲಭಿಸಿದೆ.








