ಪದೇ ಪದೇ ಆಗುಂಬೆ ಟ್ರಾಫಿಕ್ ಜಾಮ್ ಕಿರಿಕಿರಿ!
– ಕರಾವಳಿ – ಮಲೆನಾಡಿಗರ ಓಡಾಟಕ್ಕೆ ತೊಂದರೆ
– ಚಿಕಿತ್ಸೆಗಾಗಿ ಇದೇ ಮಾರ್ಗದಲ್ಲಿ ಓಡಾಡಬೇಕು!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಪದೇ ಪದೇ ಆಗುಂಬೆ ಟ್ರಾಫಿಕ್ ಜಾಮ್ ಕಿರಿಕಿರಿ ಇದೀಗ ಕರಾವಳಿ – ಮಲೆನಾಡಿಗರ ಓಡಾಟಕ್ಕೆ ತೊಂದರೆಯಾಗಿದೆ. ಅಲ್ಲದೆ ಈ ಬಗ್ಗೆ ಎರಡು ಜಿಲ್ಲಾ ಆಡಳಿತ, ಪೊಲೀಸ್ ಇಲಾಖೆ ಗಮನ ಹರಿಸಬೇಕಿದೆ. ಇಲ್ಲವಾದಲ್ಲಿ ಸಾವಿರಾರು ಜನರಿಗೆ ತೊಂದರೆ ಜತೆಗೆ ಜೀವ ಹಾನಿ ಕೂಡ ಆಗಲಿದೆ. ಹೊಸನಗರ ಮತ್ತು ಕುಂದಾಪುರ ನಡುವಿನ ಹುಲಿಕಲ್ ಘಾಟಿಯ ಬಂದ್ ಕಾರಣದಿಂದಾಗಿ ಸಾಕಷ್ಟು ವಾಹನಗಳು ಆಗುಂಬೆ ಘಾಟಿಯ ಮಾರ್ಗವಾಗಿ ಸಂಚರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಈಗಲೂ ಮುಂದುವರಿದಿರುವ ಪರಿಣಾಮವಾಗಿ ಪ್ರಯಾಣಿಕರಿಗೆ ತೊಂದರೆಯುಂಟಾಗಿದೆ.
ಶನಿವಾರ ಮತ್ತು ಭಾನುವಾರಗಳಂದು ಈ ಸಮಸ್ಯೆ ಮತ್ತಷ್ಟು ಹೆಚ್ಚಳವಾಗುತ್ತಿದೆ. ಅಲ್ಲದೆ ಈಗ ಶುಭ ಸಮಾರಂಭ ಮತ್ತು ಶಾಲಾ ಕಾಲೇಜುಗಳ ರಜೆಯ ಕಾಲವಾಗಿರುವುದರಿಂದ ಪ್ರವಾಸಕ್ಕೆ ತೆರಳುವವರು, ಶುಭ ಸಮಾರಂಭಗಳಿಗೆ ತೆರಳುವವರ ಸಂಖ್ಯೆ ಮತ್ತಷ್ಟು ಅಧಿಕವಾಗಿರುತ್ತದೆ. ಅದಕ್ಕೆ ಅನುಗುಣವಾಗಿ ವಾಹನಗಳ ಓಡಾಟವೂ ಕೂಡ ದುಪ್ಪಟ್ಟು ಇರುತ್ತದೆ. ಅಲ್ಲದೆ ಸುತ್ತಿಬಳಸಿ ಹೋಗುವುದರಿಂದ ಸಮಯ ಕೂಡ ವ್ಯರ್ಥವಾಗುತ್ತಿದೆ.
ಚಿಕಿತ್ಸೆಗಾಗಿ ಇದೇ ಮಾರ್ಗದಲ್ಲಿ ಓಡಾಡಬೇಕು!
ಮಲೆನಾಡು ಮತ್ತು ಮಧ್ಯ ಕರ್ನಾಟಕದ ಭಾಗದ ಬಹುತೇಕ ಜನರು ಹೆಚ್ಚಿನ ಚಿಕಿತ್ಸೆಗಾಗಿ, ಇಲ್ಲದೆ ತೀವ್ರತರವಾದ ಅಪಘಾತ ಸಂಭವಿಸಿದಲ್ಲಿ ಮಣಿಪಾಲಕ್ಕೆ ತೆರಳುವುದು ಸಹಜ. ಆದರೆ ಹುಲಿಕಲ್ ಘಾಟಿಯ ಸ್ಥಗಿತದಿಂದಾಗಿ ಆಗುಂಬೆ ಘಾಟಿಯಲ್ಲಿ ವಾಹನಗಳ ದಟ್ಟಣೆ ಮತ್ತಷ್ಟು ಹೆಚ್ಚಾಗಿದ್ದು ಆ್ಯಂಬುಲೆನ್ಸ್ ಕೂಡ ಘಾಟಿಯಲ್ಲಿ ಸಿಲುಕಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರಕದೇ ಅನಾಹುತ ಸಂಭವಿಸುವ ಸಾಧ್ಯತೆ ಕೂಡ ಇದೆ. ಹೀಗಾಗಿ ಸಂಬಂಧಿತರು ಈ ತೊಂದರೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಿ ಕೊಡಬೇಕಾಗಿ ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.
ಉಡುಪಿ ಮತ್ತು ಶಿವಮೊಗ್ಗ, ಚಿಕ್ಕಮಗಳೂರು ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಗಮನಿಸಬೇಕು ಎಂಬ ಅಗ್ರಹ ವ್ಯಕ್ತವಾಗಿದೆ.








