ಟಾಪ್ ನ್ಯೂಸ್ ಕರಾವಳಿ
ಸಾರಿಗೆ ಉದ್ಯಮಿ ಎಂ. ಕೆ. ರತ್ನಾಕರ್ ನೆನಪು ಮಾತ್ರ!
– ನೂರಾರು ಮಂದಿಗೆ ಉದ್ಯೋಗ, ಹಳ್ಳಿಗೆ ಸೇವೆ ನೀಡಿದ್ದ ಮಹಾನ್ ವ್ಯಕ್ತಿ
– ಉಳ್ಳಾಲ: ಮೀನು ಹಿಡಿದು ನೀರಲ್ಲಿ ಮುಳುಗಿ ಬಾಲಕ ಸಾವು
– ಬೆಳ್ತಂಗಡಿ: ಹೊಟೇಲ್ ಕಾರ್ಮಿಕ ಶವ ಶೌಚಾಲಯದಲ್ಲಿ ಪತ್ತೆ
ಸಾರಿಗೆ ಉದ್ಯಮಿ ಎಂ. ಕೆ. ರತ್ನಾಕರ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಾರ್ಕಳ ದಾನಶಾಲಾ ಬಳಿಯ ನಿವಾಸಿಯಾಗಿದ್ದ ಅವರು ಮೂಲತಃ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದವರು. ನಿಧನ ಕಾಲಕ್ಕೆ ಅವರಿಗೆ 82 ವರ್ಷ ವಯಸ್ಸಾಗಿತ್ತು. ಗ್ರಾಮ ಕರಣಿಕ ಉದ್ಯೋಗ ಮಾಡಿಕೊಂಡಿದ್ದ ಅವರು ನಂತರ ಸಾರಿಗೆ ಬಸ್ ಉದ್ಯಮವನ್ನು ಪ್ರಾರಂಭಿಸಿದರು. ಎಂಭತ್ತರ ದಶಕದಲ್ಲಿ ಪ್ರಾರಂಭಿಸಿದ್ದ ಸರಳ ಮೋಟಾರ್ಸ್ ಬಸ್ ಸೇವೆಯು ಮುಂದೆ ವಿಸ್ತೃತವಾಗಿ ಬೆಳೆಯಿತು. ದರೆಗುಡ್ಡೆ,ಶಿರ್ತಾಡಿ ಮೂಡುಬಿದಿರೆ,ಇರ್ವತ್ತೂರು,ಕಾರ್ಕಳ ಮಾರ್ಗದಲ್ಲಿ ಮೊದಲ ಬಸ್ ಸೇವೆಯನ್ನು ಪ್ರಾರಂಭಿಸಿದ್ದ ಅವರು ತೀರಾ ಹಿಂದುಳಿದ ಗ್ರಾಮಾಂತರ ಪ್ರದೇಶಗಳ ಊರುಗಳಿಗೆ ಬಸ್ಸು ಸೇವೆ ಒದಗಿಸಿ ಜನಪ್ರೀತಿಯನ್ನು ಗಳಿಸಿದವರು.
ಸರಳ ಮೋಟಾರ್ಸ್ ಬಸ್ಸು ಓಡಾಟವಿಲ್ಲದ ಗ್ರಾಮಗಳೇ ಇಲ್ಲವೆನ್ನುವ ಮಟ್ಟಿಗೆ ಕಾರ್ಕಳ ಮತ್ತು ಮೂಡುಬಿದಿರೆ ಸುತ್ತಮುತ್ತಲಿನ ಹಳ್ಳಿ ಊರುಗಳಿಗೆ ಬಸ್ ಸೇವೆ ಒದಗಿಸಿದ್ದಾರೆ. ಸರಳ ಬಸ್ ಎನ್ನುವ ಹೆಸರು ಈಗಲೂ ಜನಮಾನಸವಾಗಿದೆ ಎನ್ನುವುದಕ್ಕೆ ಎರಡು ಮಾತಿಲ್ಲ. ಕೆಲವು ಮಾರ್ಗದ ಬಸ್ ಪರವಾನಗಿಯನ್ನು ಬೇರೆಯವರಿಗೆ ವರ್ಗಾಯಿಸಿದ್ದರಿಂದ ಹೊಸ ಹೆಸರಿನಲ್ಲಿ ಬಸ್ ಓಡಾಟ ಮಾಡುತ್ತಿದ್ದರೂ ಅದು ಸರಳ ಬಸ್ ಎಂತಲೇ ಹಳ್ಳಿಯ ಜನ ಈಗಲೂ ಅಂದುಕೊಳ್ಳುತ್ತಿದ್ದಾರೆ. ಕಾರ್ಕಳದ ಜೈನ ಸಮಾಜ ಸೇವಾ ಚಟುವಟಿಕೆ ಸಹಿತ ತನ್ನ ಊರಿನ ಹಾಗೂ ಜಿಲ್ಲೆಗಳ ಜೈನ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ರೀತಿಯ ಸೇವೆಯನ್ನು,ಕೊಡುಗೆಯನ್ನು ನೀಡಿದ್ದಾರೆ.
ಎಂ. ಕೆ. ರತ್ನಾಕರ್ ಅವರ ನಿಧನಕ್ಕೆ ಕಾರ್ಕಳದ ಡಾ।ಎಂ. ಎನ್.ರಾಜೇಂದ್ರ ಕುಮಾರ್ ಸಹಿತ ಅನೇಕ ಜೈನ ಮುಖಂಡರುಗಳು ಹಾಗೂ ಸಮಸ್ತ ಜೈನ ಸಮಾಜ ಬಂಧುಗಳೊಲ್ಲರೂ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಶಾಸಕ ವಿ. ಸುನಿಲ್ ಕುಮಾರ್, ಕಾಂಗ್ರೆಸ್ ಪಕ್ಷದ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿ ಸಹಿತ ಅನೇಕ ಮಂದಿ ಸಾಮಾಜಿಕ ಮುಖಂಡರುಗಳು ರತ್ನಾಕರ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದಾರೆ. ಮೃತರು ಪುತ್ರಿ ಸರಳ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
• ಉಳ್ಳಾಲ: ಮೀನು ಹಿಡಿದು ನೀರಲ್ಲಿ ಮುಳುಗಿ ಬಾಲಕ ಸಾವು
ಉಳ್ಳಾಲ: ಮೀನು ಹಿಡಿದ ಬಳಿಕ, ಕೈ ಕಾಲುಗಳನ್ನು ತೊಳೆಯಲು ಹೋದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಶನಿವಾರದಂದು ಅಂಬ್ಲಮೊಗರು ಝರಿ ಎನ್ನುವಲ್ಲಿ ನಡೆದಿದೆ. ನಾಲ್ವರು ಸ್ನೇಹಿತರೊಂದಿಗೆ ಶನಿವಾರ ಮಧ್ಯಾಹ್ನ ಮೀನು ಹಿಡಿಯಲು ತೆರಳಿದ್ದ ಸೃಜನ್, ಇಟ್ಟಿಗೆಗೆ ಮಣ್ಣು ತೆಗೆಯಲೆಂದು ನಿರ್ಮಿಸಿದ್ದ ನೀರು ತುಂಬಿದ ಪಾಯದಲ್ಲಿ ಕೈಕಾಲು ತೊಳೆಯಲು ಸ್ನೇಹಿತರೊಂದಿಗೆ ಇಳಿದಿದ್ದ ಎನ್ನಲಾಗಿದೆ. ಆಗ ಸೃಜನ್ ಆಯಾತಪ್ಪಿ ಬಿದ್ದು ನೀರಿನಲ್ಲಿ ಮುಳುಗಿದ್ದು, ಒಬ್ಬ ಗೆಳೆಯ ಕೈಯಿಂದ ಹಿಡಿದು ಎಳೆಯಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಇದರಿಂದ ಗಾಬರಿಗೊಂಡ ಸ್ನೇಹಿತರು ಮನೆಗೆ ಮರಳಿದ್ದು, ಯಾರಿಗೂ ವಿಷಯ ತಿಳಿಸಿಲ್ಲ ಎನ್ನುವ ಮಾಹಿತಿ ಲಭಿಸಿದೆ.
ರಾತ್ರಿಯಾದರೂ ಸೃಜನ್ ಮನೆಗೆ ಮರಳಿ ಬಾರದಿರುವುದನ್ನು ಕಂಡು ಆತನ ಪೋಷಕರು ಸೃಜನ್ ನ ಸ್ನೇಹಿತರ ಬಳಿ ವಿಚಾರಿಸಿದ್ದಾರೆ. ಸ್ನೇಹಿತರು ಮೀನು ಹಿಡಿದ ಬಳಿಕ, ಕೈ ಕಾಲು ತೊಳೆದುಕೊಂಡು ದನವನ್ನು ಹುಡುಕಲು ಹೋಗಿದ್ದ ಎಂದು ಸುಳ್ಳು ಹೇಳಿದ್ದಾರೆ. ನಂತರ ಗದರಿಸಿ ಕೇಳಿದಾಗ ಸತ್ಯ ಸಂಗತಿಯನ್ನು ಹೊರಹಾಕಿದ್ದಾರೆ. ವಿಚಾರ ತಿಳಿದ ತಕ್ಷಣ ಕೊಣಾಜೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಯಿತು. ಸ್ಥಳೀಯರ ಸಹಕಾರದಿಂದ ಅಗ್ನಿಶಾಮಕ ದಳದವರು ಕಾರ್ಯಾಚರಣೆಯನ್ನು ನಡೆಸಿ ಮೃತ ದೇಹ ತೆಗೆದಿದ್ದಾರೆ.
• ಬೆಳ್ತಂಗಡಿ: ಹೊಟೇಲ್ ಕಾರ್ಮಿಕನ ಶವ ಶೌಚಾಲಯದಲ್ಲಿ ಪತ್ತೆ
ಬೆಳ್ತಂಗಡಿ: ಹೊಟೇಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕನೊಬ್ಬ ಶೌಚಾಲಯದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರೆಖ್ಯ ಗ್ರಾಮದ ಎಂಜಿರ ಸಮೀಪದಲ್ಲಿ ನಡೆದಿದೆ. ಮೃತವ್ಯಕ್ತಿಯನ್ನು ಉತ್ತರ ಪ್ರದೇಶ ಮೂಲದ ಹರಿಶಂಕರ್ ಎಂದು ಗುರುತಿಸಲಾಗಿದೆ. ಶೌಚಾಲಯಕ್ಕೆಂದು ತೆರಳಿದ್ದ ಹರಿಶಂಕರ್ ಎಷ್ಟೇ ಸಮಯ ಕಳೆದರೂ ಹೊರಬಾರದಿರುವುದನ್ನು ಗಮನಿಸಿದ ಅವರ ಸಹೋದ್ಯೋಗಿಗಳು ಕಿಟಕಿಯಿಂದ ಇಣುಕಿ ನೋಡಿದಾಗ, ಹರಿಶಂಕರ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ತಕ್ಷಣ ಹೊಟೇಲ್ ನ ಮಾಲೀಕರು ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದು, ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆಯನ್ನು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.







