ಸಿ.ಇ.ಟಿ. ಪರೀಕ್ಷೆಗೆ ವಿದ್ಯಾರ್ಥಿಗಳು ಸಜ್ಜು!
– ಪರೀಕ್ಷಾ ಕೇಂದ್ರಗಳಿಗೆ ಹೈ ಸೆಕ್ಯೂರಿಟಿ: ಏನೇನು ತರಂಗಿಲ್ಲ..?!
– ಆರಾಮಾಗಿ ಬರೆಯಿರಿ..!: ಬೆಸ್ಟ್ ಆಫ್ ಲಕ್ ಸ್ಟೂಡೆಂಟ್ಸ್
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಪಿಯುಸಿ ಬಳಿಕ ವಿದ್ಯಾರ್ಥಿಗಳ ಮಹತ್ವದ ಘಟ್ಟವಾದ ಸಾಮಾನ್ಯ ಪ್ರವೇಶ ಪರೀಕ್ಷೆ( ಸಿಇಟಿ ) ಏಪ್ರಿಲ್ 23 ಮತ್ತು 24 ರಂದು ನಡೆಯಲಿದ್ದು, ಲಕ್ಷ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಸಜ್ಜಾಗಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ, ಅತ್ಯಂತ ಪಾರದರ್ಶಕ ಮತ್ತು ವ್ಯವಸ್ಥಿತ ರೀತಿಯಲ್ಲಿ ನಡೆಯುವಂತೆ ಎಲ್ಲಾ ಜಿಲ್ಲಾ ಆಡಳಿತ ಕ್ರಮ ಕೈಗೊಂಡಿದ್ದು, ವಿದ್ಯಾರ್ಥಿಗಳ ಪೋಷಕರು ಕೂಡ ತಮ್ಮ ಮಕ್ಕಳ ಬಗ್ಗೆ ಜಾಗೃತಿ ವಹಿಸಿದ್ದಾರೆ.
ಪರೀಕ್ಷಾ ಕೇಂದ್ರಗಳಿಗೆ ಹೈ ಸೆಕ್ಯೂರಿಟಿ!
ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ, ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದಂತಹ ಮೂಲಸೌಕರ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ಸಾಗಾಟದ ವಾಹನಗಳಿಗೆ ಹಾಗೂ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಎಲ್ಲಾ ಕೇಂದ್ರಗಳಿಗೆ ಸಿ.ಸಿ.ಟಿ.ವಿ ಅಳವಡಿಸುವುದರ ಜೊತೆಗೆ ಜಿಲ್ಲಾ ಪಂಚಾಯತ್ನಲ್ಲಿ ವೆಬ್ ಕಾಸ್ಟಿಂಗ್ ಮೂಲಕ ವೀಕ್ಷಣೆ ಮಾಡಲಾಗುತ್ತದೆ.
ಏನೇನು ತರಂಗಿಲ್ಲ..?!
ಪರೀಕ್ಷಾ ಕೇಂದ್ರದಲ್ಲಿ ಮೋಬೈಲ್, ಬ್ಲೂಟೂಥ್, ಕ್ಯಾಲ್ಕುಲೇಟರ್ ಸೇರಿದಂತೆ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ಸಾಧನಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು. ಕೇಂದ್ರಗಳ 200 ಮೀಟರ್ ನಿಷೇದಾಜ್ಞೆ ವಿಧಿಸಲಾಗುತ್ತದೆ. ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆಯಿಂದ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಪರೀಕ್ಷಾ ದಿನಗಳಂದು ವಿದ್ಯಾರ್ಥಿಗಳಿಗೆ ಬಸ್ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಎಚ್ಚರವಹಿಸುವಂತೆ ಮತ್ತು ಬೇಡಿಕೆಗನುಗುಣವಾಗಿ ಬಸ್ ವ್ಯವಸ್ಥೆ ಮತ್ತು ನಿಲುಗಡೆ ವ್ಯವಸ್ಥೆ ಕಲ್ಪಿಸುವಂತೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.








