ಮುಂದಿನ ವರ್ಷ ಕಾರ್ಕಳ ಬಾಹುಬಲಿ ಮಹಾ ಮಸ್ತಕಾಭಿಷೇಕ
– ಫೆಬ್ರವರಿ18 ರಿಂದ 28ರವರೆಗೆ ದೇಶದಲ್ಲೇ ವಿಭಿನ್ನ ಮಸ್ತಕಾಭಿಷೇಕ
– ಮಸ್ತಕಾಭಿಷೇಕದ ಮಾಹಿತಿ ನೀಡಿದ ಡಾ.ಎಂ.ಎನ್ ರಾಜೇಂದ್ರ ಕುಮಾರ್
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕಾರ್ಕಳ: ಸಾವಿರಾರು ಶತಮಾನಗಳಷ್ಟು ಹಿಂದಿನ ಇತಿಹಾಸ ಹೊಂದಿರುವ ಕಾರ್ಕಳದ ಬಾಹುಬಲಿ ವಿಗ್ರಹದ ಮಹಾ ಮಸ್ತಕಾಭಿಷೇಕವನ್ನು 2027ರ ಫೆಬ್ರವರಿ 18 ರಿಂದ 28ರವರೆಗೆ ನಡೆಸಲಾಗುತ್ತದೆ. ಒಂದು ವರ್ಷ ಇರುವಾಗಲೇ ಮಹಾ ಮಸ್ತಕಾಭಿಷೇಕಕ್ಕೆ ಸಿದ್ಧತೆ ಶುರುವಾಗಿದೆ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರು ಮಾಹಿತಿ ನೀಡಿದ್ದಾರೆ. ಕಾರ್ಕಳದ ದಾನಶಾಲೆ, ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಕಾರ್ಯಾಲಯದ ಉದ್ಘಾಟನೆಯಲ್ಲಿ ಘೋಷಿಸಿದ್ದಾರೆ.
ಜಾತಿ, ಧರ್ಮ, ಮತಗಳ ಭೇದವಿಲ್ಲದೆ ಭಾಗವಹಿಸಬಹುದು
ಮಹಾಮಸ್ತಕಾಭಿಷೇಕ ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ. ಕಾರ್ಕಳದವರು ಮಾತ್ರವಲ್ಲದೆ ನಾಡಿನ ಸಮಸ್ತ ಜನರು ಜಾತಿ, ಧರ್ಮ, ಮತಗಳ ಭೇದವಿಲ್ಲದೆ ಭಾಗವಹಿಸಿ ನಡೆಸಿಕೊಡಬೇಕು. ಮಹಾಮಸ್ತಕಾಭಿಷೇಕಕ್ಕೆ 3೦5 ದಿನಗಳು ಬಾಕಿ ಇದ್ದು, ಕಾರ್ಯಕ್ರಮ ಯಶಸ್ವಿಗೊಳ್ಳಲು ನಾವೆಲ್ಲರೂ ಶಕ್ತಿಮೀರಿ ಶ್ರಮಿಸಬೇಕಿದೆ ಎಂದು ರಾಜೇಂದ್ರ ಕುಮಾರ್ ಕರೆ ನೀಡಿದ್ದಾರೆ.
ಭಕ್ತರಿಗೆ ತೊಂದರೆಯಾಗಬಾರದು: ಹರ್ಷೇಂದ್ರ ಕುಮಾರ್ ಹೆಗ್ಡೆ
ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಹೆಗ್ಡೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಜೀವಿತಾವಧಿಯಲ್ಲಿ ವೇಣೂರು, ಧರ್ಮಸ್ಥಳ ಮತ್ತು ಕಾರ್ಕಳದ ಗೊಮ್ಮಟೇಶ್ವರನ ಮಹಾಮಸ್ತಕಾಭಿಷೇಕವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ನಾಡಿನ ವಿವಿಧ ಭಾಗಗಳಿಂದ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಎಂ.ಮೋಹನ್ ಆಳ್ವಾ, ಅಧಾನಿ ಗ್ರೂಪ್ ಕರ್ನಾಟಕ ಇದರ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಅಧ್ಯಕ್ಷರಾದ ಕಿಶೋರ್ ಆಳ್ವ, ಉಡುಪಿಯ ಜಿಲ್ಲಾಧಿಕಾರಿಗಳಾದ ಸ್ವರೂಪ ಟಿ.ಕೆ, ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿಗಳಾದ ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ಮಾಜಿ ಸಚಿವರಾದ ಅಭಯ್ ಚಂದ್ರ ಜೈನ್, ಸಮಿತಿಯ ಉಪಾಧ್ಯಕ್ಷರಾದ ಕೆ.ಪಿ.ಜಗದೀಶ್, ಕಾರ್ಕಳದ ಡಿವೈಎಸ್ ಪಿ ವಿಜಯ್ ಪ್ರಸಾದ್, ಎಸ್ ಸಿ ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ ಬೆಳಪು ದೇವಿಪ್ರಸಾದ್ ಶೆಟ್ಟಿ, ಮಹಾಮಸ್ತಕಾಭಿಷೇಕ ಸಮಿತಿಯ ಮುಖ್ಯಸ್ಥರಾದ ಪ್ರಭಾತ್ ಕುಮಾರ್, ಅನಂತರಾಜ ಪೂವಣಿ ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಯಾಲ್, ಹೆಚ್ಚುವರಿ ಎಸ್ ಪಿ ಸುಧಾಕರ ನಾಯ್ಕ, ಸಂಪತ್ ಸಾಮ್ರಾಜ್ಯ, ಸುಧೀರ್ ಪಡಿವಾಳ್, ಜಯಕೀರ್ತಿ ಕಡಂಬ, ಹೇಮಚಂದ್ರ ಜೈನ್, ಸುನಿಲ್ ಕುಮಾರ್ ಬಜಗೋಳಿ, ಮಹಾವೀರ ಹೆಗ್ಡೆ, ಭರತ್ ಕುಮಾರ್ ಜೈನ್, ಶೀತಲ್ ಜೈನ್, ಸುಭಾಷ್ ಚಂದ್ರ ಚೌಟ, ಶಾಂತಿರಾಜ ಜೈನ್, ಮಹೇಂದ್ರವರ್ಮ ಜೈನ್, ಶಿಶುಪಾಲ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.
ಜೈನ ಸಮುದಾಯದ ಅಭೂತಪೂರ್ವ ಕ್ಷಣ
ವೇಣೂರು, ಧರ್ಮಸ್ಥಳ ಮತ್ತು ಕಾರ್ಕಳದ ಗೊಮ್ಮಟೇಶ್ವರನ ಮಹಾಮಸ್ತಕಾಭಿಷೇಕ ಎಲ್ಲರಿಗೂ ಮಹತ್ವದ ಕ್ಷಣ. ಜತೆಗೆ ಕಾರ್ಕಳ ಮಹಾಮಸ್ತಕಾಭಿಷೇಕ ಈಗ ಜೈನ ಸಮುದಾಯಕ್ಕೆ ಸಂಭ್ರಮದ ಹಬ್ಬವಾಗಿದೆ.








