ಬಹುಮುಖ ಪ್ರತಿಭೆ, ಸಕಲಕಲಾ ವಲ್ಲಭೆ ಶೃತಿ ಅಜ್ಜಂಪುರ
ಬಹುಮುಖ ಪ್ರತಿಭೆ, ಸಕಲಕಲಾ ವಲ್ಲಭೆ ಎಸ್. ಶೃತಿ ಅಜ್ಜಂಪುರ ಇದೀಗ ಮಲೆನಾಡಿನ ಬಹುಮುಖ ಪ್ರತಿಭೆಯಲ್ಲಿ ಒಬ್ಬರು. ನಿರೂಪಕಿ,ಲೇಖಕಿ,ಕಲಾವಿದೆ, ಹಾಗೂ ಶಿಕ್ಷಕಿಯಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಎಸ್. ಶೃತಿ ಅಜ್ಜಂಪುರ ಅವರು 1995ರ ಡಿಸೆಂಬರ್ 29 ರಂದು ಜನಿಸಿದರು. ತಂದೆ ಸೂರಿ ಶ್ರೀನಿವಾಸ್, ತಾಯಿ ಪದ್ಮಾವತಿ. 2021ರ ಆಗಸ್ಟ್ 2ರಂದು ಉಲ್ಲಾಸ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರ ದಂಪತಿಗೆ ಅವ್ಯನ್ ವಿ ರಾಜ್ ಎಂಬ ಎರಡೂವರೆ ವರ್ಷದ ಪುಟ್ಟ ಮಗನಿದ್ದಾನೆ. ಶೃತಿ ಅವರ ನಿರೂಪಣೆಗೆ ತಂದೆ ಸ್ಪೂರ್ತಿ.ಇವರಲ್ಲಿ ಸುಪ್ತವಾಗಿ ಅಡಗಿದ್ದ ಕಲಾವಿದೆ, ಕವಿ ಹೊರಹೊಮ್ಮಲು, ಓದಿನ ಗೀಳು ಹತ್ತಲು ತಾತನ ಪ್ರಭಾವ ಬಹಳ ಇದೆ.
ವಿದ್ಯಾಭ್ಯಾಸ
ಇವರ ಪ್ರಾಥಮಿಕ ವಿದ್ಯಾಭ್ಯಾಸ ಕಡೂರಿನ ವಿಶ್ವಭಾರತಿ ಮತ್ತು ಪ್ರೇಮಜ್ಯೋತಿ ಶಾಲೆಗಳಲ್ಲಿ, ಪ್ರೌಢ ಶಿಕ್ಷಣ ತರಳಬಾಳು ಸಂಸ್ಥೆಯ ವೇದಾವತಿ ಬಾಲಿಕಾ ಪ್ರೌಢಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದಲ್ಲಿ ಪಡೆದರು. ಬಿ.ಎ ಪದವಿಯನ್ನು ಚಿಕ್ಕಮಗಳೂರಿನ ಎಂಇಎಸ್ ಕಾಲೇಜಿನಲ್ಲಿ ಇಂಗ್ಲಿಷನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಳ್ಳುವ ಮೂಲಕ ಪೂರೈಸಿದರು. ಇವರು ಎಲ್ ಕೆ ಜಿ ಇಂದ ಪಿಯುಸಿವರೆಗೂ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಪಡೆದುಕೊಂಡರು. ಕುವೆಂಪು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದುಕೊಂಡರು.ವಿದ್ಯಾಭ್ಯಾಸದ ಬಳಿಕ ಕಡೂರಿನ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಅತಿಥಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದರು.
ನಿರೂಪಕಿಯಾಗಿ ಹಲವು ಕಡೆ ನಿರೂಪಣೆ!
ಶೃತಿ ಅವರು ನಿರೂಪಕರಾಗಿ ಹೆಚ್ಚು ಪ್ರಖ್ಯಾತಿ ಪಡೆದುಕೊಂಡರು. ಕಡೂರಿನ ಕಸಾಪ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಿರೂಪಕರಾಗುವ ಮೂಲಕ ಈ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. ಬಳಿಕ ಬೀದರ್ ಮತ್ತು ಚಿತ್ರದುರ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ, ಹೊಳೆಹೊನ್ನೂರಿನ ಮಠದ ಕಾರ್ಯಕ್ರಮಕ್ಕೆ, ಶಿವಮೊಗ್ಗ ಜಿಲ್ಲೆಯ ಕಾರ್ಯಕ್ರಮಕ್ಕೆ ನಿರೂಪಣೆ ಮಾಡುವ ಮೂಲಕ ತಮ್ಮ ಪಯಣವನ್ನು ಮುಂದುವರಿಸಿದರು. ಇವರು ಕಲೆ ಆಧಾರಿತ ಕಾರ್ಯಕ್ರಮಗಳಿಗೆ ನಿರೂಪಕರಾಗಲು ಹೆಚ್ಚಿನ ಆದ್ಯತೆ ನೀಡಿದರು. ಭದ್ರಾವತಿಯ ಆಕಾಶವಾಣಿಯಲ್ಲಿ ಆರು ವರ್ಷ ಮತ್ತು ಚಂದನ ವಾಹಿನಿಯಲ್ಲಿ ಕೂಡ ಕಾರ್ಯಕ್ರಮ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಮಾಲ್ಗುಡಿ ಡೇಸ್’ ಚಿತ್ರದಲ್ಲಿ ನಟನೆ
ಇವರಿಗೆ ಅಭಿನಯದಲ್ಲೂ ಆಸಕ್ತಿ ಇದ್ದು. ಶಿವಮೊಗ್ಗದಲ್ಲಿ ನಡೆದ ಆಡಿಷನ್ ನಲ್ಲಿ ಆಯ್ಕೆಯಾಗುವ ಮೂಲಕ ವಿಜಯ ರಾಘವೇಂದ್ರ ಅವರ ಅಭಿನಯದ ‘ಮಾಲ್ಗುಡಿ ಡೇಸ್’ ಚಿತ್ರದಲ್ಲಿ ನಾಯಕನ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಆತನ ಬರವಣಿಗೆಯ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಸ್ಪೂರ್ತಿದಾಯಕ ಗುರುವಿನ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ.
ಸಾಹಿತ್ಯಕ್ಕೂ ಸೈ…
ಮೊದಲ ಕವನ ಸಂಕಲನ ‘ಹೆಜ್ಜೆ ಗುರುತು’ 2012ರಲ್ಲಿ ಬಿಡುಗಡೆಗೊಂಡಿತು. ಅರಣ್ಯ ಇಲಾಖೆಗೆ ಸಂಬಂದಿಸಿದ ಪುಸ್ತಕವೊಂದನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದಾರೆ. ಇವರ ಮೆಚ್ಚಿನ ಕವಿ ಕುವೆಂಪು. ಇವರ ಸಾಧನೆಗೆ ಹತ್ತು ಹಲವಾರು ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದಿದೆ. ಇವರ ಸಾಧನೆಗೆ ಹಲವಾರು ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಎಂಎ ಓದುತ್ತಿದ್ದ ಸಂದರ್ಭದಲ್ಲಿ ಸಿದ್ಧರಾಮಯ್ಯ ಅವರ ಸರ್ಕಾರ ನಡೆಸಿದ ‘ನವ ಕರ್ನಾಟಕ ವಿಷನ್ 2025’ ಎಂಬ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು. ಬೀದರ್ ನ ದೇಶಪಾಂಡೆ ಸಾಹಿತ್ಯ ಕಾವ್ಯ ಸಾಂಸ್ಕೃತಿಕ ಪ್ರತಿಷ್ಠಾನ ನಡೆಸಿದ ಕವಿಗೋಷ್ಠಿಯಲ್ಲಿ ‘ಕಲಾ ನಿರೂಪಕಿ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಜ್ಯ ಮಟ್ಟದ ಯುವ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾನಿಲಯದ ಇಪ್ಪತ್ತೊಂಭತ್ತನೇ ಘಟಿಕೋತ್ಸವದಲ್ಲಿ ‘ನಿರಂಕುಶಮತಿ’ ಚಿನ್ನದ ಪದಕ ಲಭಿಸಿದೆ. ತರೀಕೆರೆಯ ರೋಟರಿ ಕ್ಲಬ್ ರಾಯಬಾರಿಯಾಗಿದ್ದಾರೆ. ‘ಕನಸುಗಳ ಇನ್ಫಿನಿಟಿ’, ‘ಶೃತಿ ಲಯ’ ಎಂಬ ಯುಟ್ಯೂಬ್ ವಾಹಿನಿಗಳ ಮುಖ್ಯ ಕಾರ್ಯ ನಿರ್ವಾಹಕಿಯಾಗಿದ್ದಾರೆ.








