ಮಾತಲ್ಲೇ ಜನಮನ ಸೆಳೆದ ದೀಕ್ಷಾ!
– ಶಿಕ್ಷಕಿಯಾಗಿ ವಿಡಿಯೋ ಮೂಲಕವೇ ಕಲಾ ಕ್ಷೇತ್ರಕ್ಕೆ ಎಂಟ್ರಿ
– ಕಲಾ ಸೇವೆ ಜತೆ ಸಮಾಜ ಸೇವೆ ಪಯಣ
ಸಾಮಾಜಿಕ ಜಾಲತಾಣಗಳಲ್ಲಿ ಕುಂದಾಪ್ರ ಕನ್ನಡದಲ್ಲಿ ಅರಳು ಹುರಿದಂತೆ ಮಾತನಾಡಿ, ತಮ್ಮ ಅಭಿನಯದ ಮೂಲಕ ಜನರ ಮನೆ ಮಾತಾದ ದೀಕ್ಷಾ ಎಸ್ ಬ್ರಹ್ಮಾವರ ಕನ್ನಡದ ಅಪ್ರತಿಮ ಕಲಾವಿದೆ. ಸಿಕ್ಕ ಸಣ್ಣ ಸಣ್ಣ ಅವಕಾಶಗಳನ್ನೇ ಸಮರ್ಥವಾಗಿ ಬಳಸಿಕೊಂಡ ದೀಕ್ಷಾ ಅವರು ಮೂಲತಃ ವಿಜ್ಞಾನ ವಿಷಯದ ಶಿಕ್ಷಕಿ. ಮುರಾರ್ಜಿ ದೇಸಾಯಿ ಶಾಲೆಯಲ್ಲಿ ಆರರಿಂದ ಹತ್ತನೇ ತರಗತಿ ಮಕ್ಕಳಿಗೆ ಪಾಠವನ್ನು ಹೇಳಿಕೊಡುತ್ತಾ, ತಮಾಷೆಯಾಗಿ ಮಾತನಾಡುತ್ತಾ, ಆಟದಿಂದ ಪಾಠವನ್ನು ಹೇಳಿಕೊಡುತ್ತಿದ್ದರು. ಇವರ ತರಗತಿಯನ್ನು ವಿದ್ಯಾರ್ಥಿಗಳು ಎಂದಿಗೂ ತಪ್ಪಿಸಿಕೊಂಡವರಲ್ಲ. ತಾಯಿ ಕೂಡ ಶಿಕ್ಷಕಿಯಾಗಿದ್ದರು. ದೀಕ್ಷಾ ಅವರು ಬೋಧನೆಯನ್ನು ವೃತ್ತಿಯಾಗಿಸಿಕೊಂಡರೆ ರಂಗಭೂಮಿ, ಭರತನಾಟ್ಯ, ಯಕ್ಷಗಾನ, ಸಾಮಾಜಿಕ ಜಾಲತಾಣಗಳು, ಹೊಲಿಗೆ, ಫ್ಯಾಶನ್ ಡಿಸೈನಿಂಗ್ ಮೊದಲಾದವುಗಳನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ.
ಕರಾವಳಿಯ ಅಪ್ರತಿಮ ಕಲಾವಿದೆ!
ದೀಕ್ಷಾ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಮಂಗಳೂರಿನಲ್ಲಿ, ಎಂಟರಿಂದ ದ್ವಿತೀಯ ಪಿಯುಸಿವರೆಗೆ ಬ್ರಹ್ಮಾವರದ ಎಸ್ಎಂಎಸ್ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ, ಬಿಎಸ್ಸಿ (ಸಿಬಿಜಡ್) ಪದವಿ ಶಿಕ್ಷಣವನ್ನು ಪಿಪಿಸಿ ಕಾಲೇಜಿನಲ್ಲಿ, ಎಂಎಸ್ಸಿ ಸ್ನಾತಕೋತ್ತರ ಪದವಿಯನ್ನು ಕೊಣಾಜೆಯಲ್ಲಿ ಹಾಗೂ ಬಿಎಡ್ ಪದವಿಯನ್ನು ಜಿಸಿಟಿಯಲ್ಲಿ ಪಡೆದುಕೊಂಡರು. ಆದರೆ ಎಂದಿಗೂ ಅಂಕದ ಹಿಂದೆ ಓಡಿದವರಲ್ಲ. ಬದಲಿಗೆ ಆಸಕ್ತಿಯ ಬೆನ್ನು ಹತ್ತಿದರು. ತನ್ನ ಬಳಿ ಕಲಿಯುವ ವಿದ್ಯಾರ್ಥಿಗಳಿಗೂ ಇದನ್ನೇ ಬೋಧಿಸುತ್ತಿದ್ದಾರೆ. ಜೊತೆಗೆ ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುವ ನಿಟ್ಟಿನಲ್ಲಿ, ನಾಟಕಗಳನ್ನು, ಜನಪದ ಕಲೆಗಳನ್ನೂ ಸಹ ಕಲಿಸುತ್ತಿದ್ದಾರೆ. ಬಾಲ್ಯದಲ್ಲಿ ತಾಯಿಯು ಮಗಳಿಗೆ ಹಾಡು ಹೇಳಲು, ನೃತ್ಯ ಮಾಡಲು ವೇದಿಕೆಯನ್ನು ಹತ್ತಿಸುತ್ತಿದ್ದರಿಂದ, ಕಲೆ ಎನ್ನುವುದು ದೀಕ್ಷಾ ಅವರಿಗೆ ಕರಗತವಾಯಿತು.
ಮೂರನೇ ವರ್ಷಕ್ಕೆ ವೇದಿಕೆ ಏರಿದರು!
ದೀಕ್ಷಾ ಅವರು ತಮ್ಮ ಮೂರನೇ ವಯಸ್ಸಿಗೆ ವೇದಿಕೆಯನ್ನೇರಿದರು. ‘ಕೋಳಿ ಕಳ್ಳ’ ಎಂಬ ನಾಟಕದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸುವ ಮೂಲಕ, ರಂಗಭೂಮಿಯನ್ನು ಪ್ರವೇಶಿಸಿದರು. ಸುಮಾರು 50 ರಿಂದ 60 ನಾಟಕಗಳಲ್ಲಿ ಅಭಿನಯಿಸಿದ್ದು, 500ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಹಾಗೆಯೇ ‘ವಠಾರ’ ಎಂಬ ನಾಟಕದ ಮೂಲಕ, ತುಳು ರಂಗಭೂಮಿಯನ್ನು ಪ್ರವೇಶಿಸಿದರು.
ವೇತನವನ್ನು ಸಮಾಜ ಸೇವೆಗೆ ಮುಡಿಪು!
ದೀಕ್ಷಾ ಅವರು ಬಾಲ್ಯದಲ್ಲಿ ಛದ್ಮವೇಷಕ್ಕೆ, ಕಾಲೇಜು ದಿನಗಳಲ್ಲಿ ಮೂಕಾಭಿನಯಕ್ಕೆ ರಾಜ್ಯ ಮಟ್ಟದಲ್ಲಿ ಬಹುಮಾನಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಅಲ್ಲದೆ ಕಲಾರತ್ನ ಮತ್ತು ಕುಂದಾಪ್ರ ಯುವಸಿರಿ ಪ್ರಶಸ್ತಿಗೂ ಭಾಜನರಾಗಿದ್ದಾರೆ. ವೃತ್ತಿ, ಪ್ರವೃತ್ತಿಗಳಿಂದ ಬರುವ ವೇತನದಲ್ಲಿ, ಸ್ವಲ್ಪ ಭಾಗವನ್ನು ಸಮಾಜ ಸೇವೆಗಾಗಿ ಮೀಸಲಿಟ್ಟಿದ್ದಾರೆ. ಅಷ್ಟೇ ಅಲ್ಲದೆ ನಾಯಿಗಳ ಮೇಲಿರುವ ಇವರ ವ್ಯಾಮೋಹ, ಬೀದಿ ನಾಯಿಗಳನ್ನು ಪೋಷಿಸುವಂತೆ ಪ್ರೇರಣೆ ನೀಡಿದೆ.
ರಾಜ್ಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ಕಲಾವಿದೆ!
ಕಲರ್ಸ್ ಕನ್ನಡ ವಾಹಿನಿಯ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಮೂಲಕ ‘ಜೂನಿಯರ್ ಸಾಧು ಕೋಕಿಲ’ ಎಂದು ಖ್ಯಾತಿ ಪಡೆದ ದೀಕ್ಷಾ ಬ್ರಹ್ಮಾವರ ಅವರು ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಸೀಸನ್ 5ರಲ್ಲಿ ಭಾಗವಹಿಸಿ ಕನ್ನಡಿಗರ ಮನವನ್ನು ಗೆದ್ದಿದ್ದಾರೆ. ತಮ್ಮ ಮಾತು, ಸಣ್ಣ ಸಣ್ಣ ಸ್ಕಿಟ್, ವಿಶೇಷ ವಿಡಿಯೋ ಮೂಲಕ ತಮ್ಮದೇ ಅಭಿಮಾನಿ ವಲಯವನ್ನು ಸೃಷ್ಟಿಸಿಕೊಂಡಿದ್ದಾರೆ. ಇನ್ನಷ್ಟು ವೇದಿಕೆಗಳು ಸಿಗಲಿ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಲಿ ಎಂಬುದು ನಮ್ಮೂರ್ ಎಕ್ಸ್ ಪ್ರೆಸ್ ಹಾರೈಕೆ.
ತಂದೆ, ತಾಯಿಯ ಪ್ರೇರಣೆಯಿಂದ ಕಲಾ ಸೇವೆ!
ತಂದೆ ತಾಯಿಯ ಪ್ರೇರಣೆಯಿಂದ ಕಲಾ ಸೇವೆ ಮಾಡುತ್ತಿರುವ ದೀಕ್ಷಾ ಇನ್ನು ಅವಿವಾಹಿತರು. ಬ್ರಹ್ಮಾವರ ಅವರು ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಸೀಸನ್ 5ರಲ್ಲಿ ಭಾಗವಹಿಸಿ ಕನ್ನಡಿಗರ ಮನವನ್ನು ಗೆದ್ದಿದ್ದಾರೆ. ತಮ್ಮ ಮಾತು, ಸಣ್ಣ ಸಣ್ಣ ಸ್ಕಿಟ್, ವಿಶೇಷ ವಿಡಿಯೋ ಮೂಲಕ ತಮ್ಮದೇ ಅಭಿಮಾನಿ ವಲಯವನ್ನು ಸೃಷ್ಟಿಸಿಕೊಂಡಿದ್ದಾರೆ.








