ಅಯ್ಯೋ…ಹೆಚ್ಚಾಗಲಿದೆ ಭಾರೀ ಬಿಸಿಲು!
– ರಾಜ್ಯದಲ್ಲಿ ಉಷ್ಣ ಅಲೆ ತೀವ್ರ: ಆರೋಗ್ಯ ಇಲಾಖೆಯ ಎಚ್ಚರಿಕೆ
– 2 ದಿನಗಳಲ್ಲಿ ಭಾರೀ ಬಿಸಿಲು ಮತ್ತಷ್ಟು ಉಲ್ಬಣ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಭಾರೀ ಬಿಸಿಲು ಜನರನ್ನು ಕಾಡುತ್ತಿದೆ. ಮನೆಯಿಂದ ಹೊರ ಹೋಗಲು ಕೂಡ ಜನರಿಗೆ ಕಷ್ಟವಾಗುತ್ತಿದೆ. ಬೇಸಿಗೆಯ ತಾಪಮಾನ ದಿನ ಕಳೆದಂತೆ ಅಧಿಕಗೊಳ್ಳುತ್ತಿದ್ದು, ಕರ್ನಾಟಕದಲ್ಲಿ ಉಷ್ಣ ಅಲೆ ತೀವ್ರಗೊಂಡಿದೆ ಎನ್ನುವ ವರದಿ ಬಂದಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಅನೇಕ ಭಾಗಗಳಲ್ಲಿ ಬಿಸಿಲಿನ ತೀವ್ರತೆ ಮತ್ತಷ್ಟು ಹೆಚ್ಚಳವಾಗಲಿದ್ದು, ಮುಂದಿನ ಎರಡು ದಿನಗಳಲ್ಲಿ ಅದು ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ ಭಾಗಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಉಷ್ಣ ಅಲೆ ತೀವ್ರವಾಗಿದ್ದು, 37 ಡಿಗ್ರಿ ಸೆಲ್ಸಿಯಸ್ ನಿಂದ 42 ಡಿಗ್ರಿ ಸೆಲ್ಸಿಯಸ್ ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಕಲ್ಯಾಣ ಕರ್ನಾಟಕದ ಭಾಗಗಳಾದ ಕಲಬುರ್ಗಿ, ಬೀದರ್, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಹಿಟ್ ವೇವ್ ಅಲರ್ಟ್ ಅನ್ನು ಘೋಷಿಸಲಾಗಿದೆ. ಹವಾಮಾನ ಇಲಾಖೆಯು ತಿಳಿಸಿದಂತೆ ಕರಾವಳಿ ಭಾಗದ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದರೂ ಕೂಡ, ಬಿಸಿಲಿನ ತೀವ್ರತೆ ಮಾತ್ರ ಕಡಿಮೆಯಾಗುವ ಲಕ್ಷಣಗಳು ಇಲ್ಲ ಎನ್ನುವುದಾಗಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಬಳ್ಳಾರಿ, ರಾಯಚೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಇನ್ನು ದಕ್ಷಿಣ ಒಳನಾಡಾದ ಮೈಸೂರು, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭಿಸಿದೆ.
ಜನ ಏನೇನು ಮಾಡಬೇಕು..?
ಆರೋಗ್ಯ ಇಲಾಖೆಯು ಕೂಡ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡಿದ್ದು, ಬೆಳಿಗ್ಗೆ 10:00ಗಂಟೆಯಿಂದ ಸಂಜೆ 5:00ಗಂಟೆಯವರೆಗೆ ಅನವಶ್ಯಕವಾಗಿ ಹೊರಗಡೆ ತಿರುಗಾಡುವುದನ್ನು ನಿಯಂತ್ರಿಸಬೇಕು, ಮಧ್ಯಾಹ್ನ 12:೦೦ಗಂಟೆಯಿಂದ ಸಂಜೆ 4:೦0ಗಂಟೆಯವರೆಗೆ ನೇರವಾಗಿ ಸೂರ್ಯನ ಬೆಳಕು ಬೀಳುವ ಪ್ರದೇಶದಿಂದ ದೂರವಿರಬೇಕು, ಆದಷ್ಟು ನೀರು, ಎಳನೀರು, ಮಜ್ಜಿಗೆ ಹಣ್ಣಿನ ರಸವನ್ನು ಕುಡಿಯುವುದು ಉತ್ತಮ. ತಿಳಿ ಬಣ್ಣದ ಮತ್ತು ಹತ್ತಿಯಿಂದ ತಯಾರಿಸಿದ ಬಟ್ಟೆಗಳನ್ನು ಧರಿಸುವುದು, ಅನಿವಾರ್ಯವಾಗಿ ಹೊರಗಡೆ ಹೋಗುವ ಸಂದರ್ಭ ಒದಗಿಬಂದಲ್ಲಿ ಛತ್ರಿ ಅಥವಾ ಟೋಪಿಯನ್ನು ಬಳಸುವುದು ಒಳ್ಳೆಯದು. ಕಾಫಿ,ಟೀ ಮತ್ತು ಹೆಚ್ಚು ಸಕ್ಕರೆಯನ್ನು ಬಳಸಿದ ಪಾನೀಯಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಒಳಿತೆಂದು ತಿಳಿಸಿದೆ.
ಅರೋಗ್ಯ ಬಗ್ಗೆ ಎಚ್ಚರ ಎಚ್ಚರ
ಅತಿ ಹೆಚ್ಚು ಸಕ್ಕರೆಯನ್ನು ಬಳಸಿದ ಪಾನೀಯಗಳನ್ನು ಸೇವಿಸುವುದರಿಂದ ದೇಹದಲ್ಲಿ ನೀರಿನ ಕೊರತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಸಾರ್ವಜನಿಕರು ಬೇಸಿಗೆ ಸಂದರ್ಭದಲ್ಲಿ ತಮ್ಮ ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ನಿಗಾ ವಹಿಸಬೇಕೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.








