ಕರಾವಳಿ ಟಾಪ್ ನ್ಯೂಸ್
• ಮೂಡಬಿದರೆ: ಮನೆಗೆ ಸಿಡಿಲು ಬಡಿದು ಹಾನಿ
• ಕಾರ್ಕಳ: ವ್ಯಕ್ತಿಗಳ ಅನುಮಾನಾಸ್ಪದ ನಡೆ; ಬಂಧನ
• ಪುತ್ತೂರು: ಪೆಟ್ರೋಲ್ ಹಾಕಿಸಿ ಹಣ ನೀಡದೆ ಪರಾರಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮೂಡಬಿದರೆ: ಸಿಡಿಲು ಸಹಿತ ಮಳೆಯ ಅಬ್ಬರಕ್ಕೆ ಮನೆಯ ಕಾಂಕ್ರೀಟ್ ಮೇಲ್ಛಾವಣಿಗೆ ಹಾನಿಯಾಗಿರುವ ಘಟನೆ, ಶುಕ್ರವಾರದಂದು ನಡೆದಿದೆ. ಟೆಲಿಫೋನ್ ಬಿ.ಡಿ ರಸ್ತೆಯ ನಿವಾಸಿಯಾದ ಶಶಿಧರ್ ರಾವ್ ಎನ್ನುವವರ ಮನೆಯಲ್ಲಿ ಈ ರೀತಿಯ ಸನ್ನಿವೇಶ ಎದುರಾಗಿದೆ. ಜೊತೆಗೆ ಮನೆಯ ಬಲಭಾಗದಲ್ಲಿದ್ದ ತೆಂಗಿನಮರ ಸಿಡಿಲಿಗೆ ಸುಟ್ಟು ಕರಕಲಾಗಿದ್ದು, ಇನ್ವೆರ್ಟರ್ ಮತ್ತು ಎರಡು ಫ್ಯಾನ್ ಗಳು ಸೇರಿದಂತೆ ಹಲವಾರು ವಿದ್ಯುತ್ ಉಪಕರಣಗಳು ಹಾನಿಗೊಳಗಾಗಿರುವ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎನ್ನುವ ಸಂಗತಿ ತಿಳಿದುಬಂದಿದೆ.
•ಕಾರ್ಕಳ: ವ್ಯಕ್ತಿಗಳ ಅನುಮಾನಾಸ್ಪದ ನಡೆ; ಬಂಧನ
ಕಾರ್ಕಳ: ವ್ಯಕ್ತಿಗಳಿಬ್ಬರು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಘಟನೆ, ಗುರುವಾರ ರಾತ್ರಿ ಬಸ್ ನಿಲ್ದಾಣದ ಬಳಿ ನಡೆದಿದೆ. ಪೊಲೀಸ್ ಉಪನಿರೀಕ್ಷಕರಾದ ಮುರುಳಿಧರ ನಾಯ್ಕ ಮತ್ತು ತಂಡದವರು ಗಸ್ತಿನಲ್ಲಿದ್ದ ಸಂದರ್ಭದಲ್ಲಿ, ಇಬ್ಬರು ವ್ಯಕ್ತಿಗಳು ಹೂವಿನ ಅಂಗಡಿಯೊಂದರ ಹಿಂಭಾಗದಲ್ಲಿ ಮುಖಕ್ಕೆ ಬಟ್ಟೆ ಸುತ್ತಿಕೊಂಡು, ಕೈಯಲ್ಲಿ ಚೂರಿ ಹಿಡಿದುಕೊಂಡ ರೀತಿಯಲ್ಲಿ ಕಂಡುಬಂದಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಕೊಪ್ಪಳ ಜಿಲ್ಲೆಯ ಹನುಮಪ್ಪ ಮತ್ತು ಮರಿಯಪ್ಪ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಪುತ್ತೂರು: ಪೆಟ್ರೋಲ್ ಹಾಕಿಸಿ ಹಣ ನೀಡದೆ ಪರಾರಿ
ಪುತ್ತೂರು: ಕಾರಿಗೆ ಪೆಟ್ರೋಲ್ ಹಾಕಿಸಿ ಹಣ ನೀಡದೆ ವ್ಯಕ್ತಿಗಳು ಪರಾರಿಯಾದ ಘಟನೆ, ಕೆಮ್ಮಾಯಿಯಲ್ಲಿ ನಡೆದಿದೆ. ಪೆಟ್ರೋಲ್ ಬಂಕ್ ಗೆ ಕಾರೊಂದರಲ್ಲಿ ಆಗಮಿಸಿದ ವ್ಯಕ್ತಿಗಳು 3.000 ರೂಪಾಯಿ ಮೌಲ್ಯದ ಪೆಟ್ರೋಲ್ ಹಾಕಿಸಿ, ಯುಪಿಐ ಸ್ಕ್ಯಾನ್ ಮೂಲಕ ಹಣವನ್ನು ಪಾವತಿ ಮಾಡಿರುವುದಾಗಿ ಪೆಟ್ರೋಲ್ ಬಂಕ್ ನವರಿಗೆ ನಂಬಿಸಿ ಪರಾರಿಯಾಗಿದ್ದಾರೆ. ಅವರು ಹೋದ ಬಳಿಕ ಹಣ ಪಾವತಿಯಾಗದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೆಟ್ರೋಲ್ ಬಂಕ್ ನವರು ಸಿಸಿ ಕ್ಯಾಮೆರಾದ ಮೂಲಕ ಪರಿಶೀಲನೆ ನಡೆಸಿ, ಕಾರಿನ ನಂಬರ್ ಅನ್ನು ಪತ್ತೆ ಹಚ್ಚಿ ಪೊಲೀಸರಿಗೆ ನೀಡುವ ಮೂಲಕ ದೂರು ನೀಡಿದ್ದಾರೆ. ಪೊಲೀಸರ ಕಾರ್ಯಾಚರಣೆಯ ಸಂದರ್ಭದಲ್ಲಿ ಕಾರಿನ ನಂಬರ್ ನಕಲಿ ನೋಂದಣಿ ಸಂಖ್ಯೆಯಾಗಿದೆ ಎನ್ನುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗಾಗಿ ಪೊಲೀಸರ ತನಿಖೆ ಚುರುಕುಗೊಂಡಿದೆ ಎನ್ನುವ ಸಂಗತಿ ತಿಳಿದುಬಂದಿದೆ.







