ಹಳ್ಳಿಯಲ್ಲಿ ಓದಿ ರಾಜಧಾನಿಯಲ್ಲಿ ಕಂಪನಿ ಕಟ್ಟಿದ ಸಾಧಕ
ವನಮಾಲಯ್ಯ ಇಳಿಮನೆ
– ನೂರಾರು ಮಂದಿಗೆ ಉದ್ಯೋಗ: ಸಮಾಜಿಕ ಕೆಲಸಕ್ಕೂ ಸೈ
ಹಳ್ಳಿಯಲ್ಲಿ ಓದಿ ರಾಜಧಾನಿಯತ್ತ ಪಯಣ ಬೆಳೆಸಿ ಅಲ್ಲಿ ಕಂಪನಿ ಕಟ್ಟಿ ಈಗ ನೂರಾರು ಮಂದಿಗೆ ಉದ್ಯೋಗ ಕೊಟ್ಟ ವನಮಾಲಯ್ಯ ಇಳಿಮನೆ ಅವರ ಜೀವನಗಾಥೆ ಎಲ್ಲರಿಗೂ ಮಾದರಿ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ನಾಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದಾಸನಕೊಡಿಗೆ ಗ್ರಾಮದ ಇಳಿಮನೆಯಲ್ಲಿ ಜನಿಸಿದರು. ತಂದೆ ತಿಮ್ಮಪ್ಪ ಗೌಡ, ತಾಯಿ ರುಕ್ಮಿಣಮ್ಮ.
ಹಳ್ಳಿಯಲ್ಲಿ ಓದಿ ರಾಜಧಾನಿಯತ್ತ ಪಯಣ!
ವನಮಾಲಯ್ಯ ಅವರು ಒಂದರಿಂದ ನಾಲ್ಕನೇ ತರಗತಿಯವರೆಗೆ ತೀರ್ಥಹಳ್ಳಿ ತಾಲೂಕು ನಾಲೂರು ಸಮೀಪದ ಇಳಿಮನೆಯಲ್ಲಿ, ಐದರಿಂದ ಏಳನೇ ತರಗತಿಯವರೆಗೆ ನಾಲೂರಿನಲ್ಲಿ ಮತ್ತು ಎಂಟರಿಂದ ಹತ್ತನೇ ತರಗತಿಯವರೆಗೆ ಗುಡ್ಡೇಕೇರಿಯಲ್ಲಿ ಶಿಕ್ಷಣವನ್ನು ಪಡೆದರು. ಮೇಗರವಳ್ಳಿಯಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪೂರೈಸಿದ ಇವರು, ಭದ್ರಾವತಿಯ ವಿಐಎಸ್ಎಸ್ ಜೆ ಪಾಲಿಟೆಕ್ನಿಕ್ ಕಾಲೇಜಿನಿಂದ ಮೆಟಲರ್ಜಿ ವಿಷಯದಲ್ಲಿ ಡಿಪ್ಲೊಮಾ ಪದವಿ ಗಳಿಸಿದರು.
ಬೆಂಗಳೂರಿನ ರಾಮಕೃಷ್ಣ ಹೆಗ್ಡೆ ಕಂಪನಿಯಿಂದ ವೃತ್ತಿ ಜೀವನವನ್ನು ಆರಂಭಿಸಿದ ವನಮಾಲಯ್ಯ ಅವರು ಕರ್ನಾಟಕದ ವಿವಿಧ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿ ಎಲ್ಲೆಲ್ಲಿ ಸೇವೆ ಸಲ್ಲಿಸಿದ್ದರೋ ಅಲ್ಲಿ ಎಲ್ಲರಿಂದಲೂ ಸೈ ಎನಿಸಿಕೊಂಡರು. ಅಪಾರ ಅನುಭವ, ಕೆಲಸದ ಶ್ರದ್ಧೆ, ಪ್ರಾಮಾಣಿಕತೆ, ಸ್ನೇಹ ಮಯ ವ್ಯಕ್ತಿತ್ವ ಅವರನ್ನು ಗೆಲ್ಲಿಸಿದೆ. ಪತ್ನಿ ಗೀತಾ ವನಮಾಲಯ್ಯ ಅವರು ಕೂಡ ಪತಿಯ ಉದ್ಯಮದಲ್ಲಿ ಜತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಗಳು ವರ್ಷಿತಾ ವನಮಾಲಯ್ಯ, ಮಗ ಸ್ಕಂದ ಗೌಡ ವನಮಾಲಯ್ಯ ತಂದೆ ಕಟ್ಟಿದ ಕಂಪನಿ ಯಶಸ್ಸಿಗೆ ಸಹಾಯ ಮಾಡುತ್ತಿದ್ದಾರೆ.
2004ರಲ್ಲಿ ಮಂಜುಶ್ರೀ ಟೆಕ್ನಾಲಜಿಸ್ ಕಂಪನಿ ಕಟ್ಟಿದರು..!
2004ರಲ್ಲಿ ಮಂಜುಶ್ರೀ ಟೆಕ್ನಾಲಜಿಸ್ ಎಂಬ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಉದ್ಯಮ ಕ್ಷೇತ್ರವನ್ನು ಪ್ರವೇಶಿಸಿದರು. 2010ರಲ್ಲಿ ಮಂಜುಶ್ರೀ ಹೀಟ್ ಟೆಕ್ ಪ್ರೈವೇಟ್ ಲಿಮಿಟೆಡ್, 2017 ರಲ್ಲಿ ಮಂಜುಶ್ರೀ ಎಂಟರ್ ಪ್ರೈಸಸ್ ಅನ್ನು ಸ್ಥಾಪಿಸಿದರು. ಇವುಗಳನ್ನು ಒಗ್ಗೂಡಿಸಿ ಮಂಜುಶ್ರೀ ಗ್ರೂಪ್ ಆಫ್ ಕಂಪನೀಸ್ ಎಂದು ಕರೆಯಲಾಯಿತು. ನೂರಾರು ಮಂದಿಗೆ ಉದ್ಯೋಗ ಕೊಟ್ಟಿದ್ದಾರೆ. ಕಾರ್ಮಿಕರ ಕೊರತೆ, ಆರ್ಥಿಕ ಹೊಡೆತದ ನಡುವೆ ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ತಮ್ಮದೇ ಹೆಸರು ಮಾಡಿದ್ದಾರೆ.
ಮಂಜುಶ್ರೀ ಗ್ರೂಪ್ ಆಫ್ ಕಂಪನೀಸ್ ಕಛೇರಿಗಳು ಮತ್ತು ಶಾಖೆಗಳು ಬೆಂಗಳೂರಿನ ಪೀಣ್ಯ, ಬೊಮ್ಮಸಂದ್ರ, ದಾಬಸ್ ಪೇಟೆ, ತಿಗಳರಪಾಳ್ಯ, ಚೊಕ್ಕಸಂದ್ರಗಳಲ್ಲಿ ವಿಸ್ತರಣೆ ಮಾಡಿದ್ದು, ನೂರಾರು ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಟ್ಟಿದೆ. ಇವರ ಕಂಪನಿಯ ಉತ್ಪನ್ನಗಳು ವಾಹನ, ಯಂತ್ರಗಳ ಬಿಡಿ ಭಾಗಗಳಿಗೆ ದೇಶ ವಿದೇಶಕ್ಕೆ ಸರಬರಾಜು ಆಗುತ್ತಿದೆ.
ಸಂಘ ಸಂಸ್ಥೆಗಳ ಸೇವೆ…ಸಾಮಾಜ ಮುಖಿ ಕೆಲಸ..!
ಸ್ನೇಹ ಮಯಿ ವನಮಾಲಯ್ಯ ಅವರು ಮಲೆನಾಡು ಮಿತ್ರ ವೃಂದದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಇದೀಗ ಉಪಾಧ್ಯಕ್ಷರಾಗಿದ್ದಾರೆ. ಪ್ರಸ್ತುತ ಕವಿಶೈಲ ಸಹಕಾರಿ ಪತ್ತಿನ ಸಹಕಾರ ಸಂಘ ಸೇರಿ ಅನೇಕ ಸಂಘ ಸಂಸ್ಥೆ, ಶಾಂತವೇರಿ ಗೋಪಾಲ ಗೌಡ ಶತಮಾನೋತ್ಸವ ಆಚರಣಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೈಗಾರಿಕಾ ಕ್ಷೇತ್ರದಲ್ಲಿನ ಇವರ ಸಾಧನೆಯನ್ನು ಗುರುತಿಸಿ ನಮ್ಮೂರ್ ಎಕ್ಸ್ ಪ್ರೆಸ್ ದಶಮಾನೋತ್ಸವ ಸಂಭ್ರಮದಲ್ಲಿ ಆಯೋಜಿಸಿದ್ದ ಮಲೆನಾಡೋತ್ಸವ-2025ರಲ್ಲಿ ಮಲ್ನಾಡ್ ಐಕಾನ್ ಪ್ರಶಸ್ತಿ-2024 ನೀಡಿ ಗೌರವಿಸಿದ್ದು ಇದಲ್ಲದೆ ಹತ್ತಾರು ಗೌರವಗಳಿಗೆ ಭಾಜನರಾಗಿದ್ದಾರೆ.








