ಚಿಕ್ಕಮಗಳೂರು: 300 ಅಡಿ ಪ್ರಪಾತಕ್ಕೆ ಉರುಳಿದ ಲಾರಿ
ಚಿಕ್ಕಮಗಳೂರು: 10 ಚಕ್ರದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದು, ಪ್ರಪಾತಕ್ಕೆ ಉರುಳಿ ಬಿದ್ದಿರುವ ಘಟನೆ ಕೆಎಂ ರಸ್ತೆಯ ಲಕ್ಯಾ ತಿರುವಿನಿಂದ ಗೇಟ್ ವೇ ಹೊಟೇಲ್ ನ ತಿರುವಿನ ನಡುವೆ ನಡೆದಿದೆ. ಕಡೂರು ನಿವಾಸಿಯಾದ ಇರ್ಫಾನ್ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಆಲ್ಟೋ ಕಾರಿನಲ್ಲಿ ಕಡೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ, ಲಾರಿಯೊಂದು ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದ ಕಾರಣದಿಂದಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಲಾರಿಯು ಕಾರಿನ ಬಲಭಾಗದ ಹಿಂಭಾಗಕ್ಕೆ ಬಿರುಸಾಗಿ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಲಾರಿಯೂ ಸಹ 300 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದಿದೆ ಎನ್ನುವ ಮಾಹಿತಿ ಲಭಿಸಿದೆ. ಅದೃಷ್ಟವಶದಿಂದ ಕಾರಿನಲ್ಲಿದ್ದ ಇರ್ಫಾನ್, ಅವರ ತಾಯಿ, ಪತ್ನಿ ಮತ್ತು ಅಣ್ಣನ ಮಕ್ಕಳು ಹಾಗೂ ಲಾರಿಯ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಲಾರಿಗೆ ಬ್ರೇಕ್ ಫೇಲ್ ಆಗಿತ್ತು ಎನ್ನುವ ಮತ್ತೊಂದು ಮಾಹಿತಿ ಕೂಡ ಲಭ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಇರ್ಫಾನ್ ಅವರು ಪೊಲೀಸರಿಗೆ ದೂರು ನೀಡಿದ್ದು, ಲಾರಿ ಚಾಲಕನ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಮನವಿಯನ್ನು ಮಾಡಿಕೊಂಡಿದ್ದಾರೆ. ದೂರಿನ ಆಧಾರದ ಮೇಲೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಶಿವಮೊಗ್ಗ: ಕುಸಿದು ಬಿದ್ದು ಎಸ್ಎಸ್ಎಲ್ ಸಿ ವಿದ್ಯಾರ್ಥಿ ಸಾವು
ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಮಕ್ಕಳು, ಯುವಜನತೆ ಮತ್ತು ಹದಿಹರೆಯದವರಲ್ಲಿ ಹೃದಯಾಘಾತ ಮತ್ತು ಸಾವಿನ ಪ್ರಮಾಣ ಅಧಿಕವಾಗುತ್ತಿದ್ದು, ಅದರ ಬೆನ್ನಲ್ಲೇ, ಮತ್ತೊಂದು ಅದೇ ರೀತಿಯ ಘಟನೆ ಸೋಮವಾರದಂದು ಆಯನೂರು ಸಮೀಪದ ತಮ್ಮಡಿಹಳ್ಳಿ ಎನ್ನುವಲ್ಲಿ ನಡೆದಿದೆ. ತಮ್ಮಡಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗಳು ಚೆಸ್ ಆಡುತ್ತಿರುವುದನ್ನು ನೋಡುತ್ತಾ ನಿಂತ ಸಂದರ್ಭದಲ್ಲಿ ದಿಢೀರನೆ ಕುಸಿದು ಬಿದ್ದಿದ್ದಾನೆ. ತಕ್ಷಣ ಅವನನ್ನು ಶಿಕ್ಷಕರು ಆಯನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು, ಆತನ ಸ್ಥಿತಿ ಗಂಭೀರವಾಗಿರುವುದನ್ನು ಪರಿಗಣಿಸಿದ ವೈದ್ಯರು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ. ಆದರೆ ಶಿವಮೊಗ್ಗ ತಲುಪುವುದರ ಒಳಗಾಗಿ ವಿದ್ಯಾರ್ಥಿಯು ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ಬಳಿಕ ವಿದ್ಯಾರ್ಥಿಯ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ತರಲಾಯಿತು ಎನ್ನುವ ಸಂಗತಿ ತಿಳಿದುಬಂದಿದೆ. ಮೃತ ದುರ್ದೈವಿಯನ್ನು ಮೂಲತಃ ಶಿಕಾರಿಪುರ ತಾಲ್ಲೂಕಿನ ನಿವಾಸಿ ಹಾಗೂ ಪ್ರಸ್ತುತ ತಮ್ಮಡಿಹಳ್ಳಿಯಲ್ಲಿನ ಅಜ್ಜನ ಮನೆಯಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದ ವಿನಯ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಶೃಂಗೇರಿ: ಕುಸಿದು ಬಿದ್ದ ಗುಡ್ಡ; ಪ್ರಯಾಣಿಕರಲ್ಲಿ ಮೂಡಿದ ಆತಂಕ
ಶೃಂಗೇರಿ: ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿರುವ ಕಾರಣ ತಾಲ್ಲೂಕಿನ ಕಡೇಮನೆ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಅಷ್ಟೇ ಅಲ್ಲದೆ ಭಾರಿ ಪ್ರಮಾಣದಲ್ಲಿ ಗುಡ್ಡದ ಮಣ್ಣು ಮತ್ತು ಮರಗಳು ರಸ್ತೆಗೆ ಬಿದ್ದಿದ್ದು, ಇದರಿಂದಾಗಿ ಕಾರ್ಕಳ- ಮಂಗಳೂರು- ಶೃಂಗೇರಿ ನಡುವೆ ಸಂಚಾರ ನಡೆಸಲು ಅಡಚಣೆ ಉಂಟಾಗಿದೆ ಎನ್ನಲಾಗಿದೆ. ಮಳೆಯ ತೀವ್ರತೆಯಿಂದಾಗಿ ಗುಡ್ಡದ ಮಣ್ಣು ಹೆಚ್ಚಿನ ಪ್ರಮಾಣದಲ್ಲಿ ತೇವಗೊಂಡು ಸಡಿಲವಾಗುತ್ತಿದ್ದು, ಗುಡ್ಡದ ಒಂದು ಭಾಗವು ಕುಸಿದು ರಾಷ್ಟ್ರೀಯ ಹೆದ್ದಾರಿಗೆ ಬಿದ್ದಿದೆ ಎನ್ನುವ ಮಾಹಿತಿ ಲಭಿಸಿದೆ. ಪರಿಣಾಮವಾಗಿ ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಗಿದ್ದು, ಸ್ಥಳೀಯರು ಮತ್ತು ಈ ಮಾರ್ಗದಲ್ಲಿ ಸಂಚಾರ ನಡೆಸುವಂತಹ ವಾಹನ ಸವಾರರು ಆತಂಕಪಡುವಂತಾಗಿದೆ. ಅದರಲ್ಲೂ ಮುಖ್ಯವಾಗಿ ಮಂಗಳೂರು, ಕಾರ್ಕಳ ಮತ್ತು ಶೃಂಗೇರಿ ಸೇರಿದಂತೆ ಮಲೆನಾಡು ಮತ್ತು ಕರಾವಳಿಯ ವಿವಿಧ ಭಾಗಗಳಿಗೆ ಸಂಪರ್ಕವನ್ನು ಕಲ್ಪಿಸುವಂತಹ ಪ್ರಮುಖ ರಸ್ತೆಯಲ್ಲಿನ ಸಂಚಾರಕ್ಕೇ ಹೆಚ್ಚಿನ ಪರಿಣಾಮ ಬೀರಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ರಸ್ತೆಯ ಮೇಲೆ ಬಿದ್ದಿರುವ ಮಣ್ಣು ಮತ್ತು ಮರಗಳನ್ನು ತೆರವುಗೊಳಿಸುವ ಕಾರ್ಯವನ್ನು ಕೈಗೊಂಡಿದ್ದರೂ ಸಹ, ಮಳೆ ಕಡಿಮೆಯಾಗದ ಹಿನ್ನೆಲೆಯಲ್ಲಿ ಪ್ರತಿದಿನ ಎನ್ನುವಂತೆ ಗುಡ್ಡದ ಮಣ್ಣು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ರಸ್ತೆಯ ಮೇಲೆ ಬೀಳುತ್ತಿದೆ ಎಂದು ಹೇಳಲಾಗಿದೆ. ಒಂದೆಡೆ ತೆರವು ಕಾರ್ಯಾಚರಣೆ ಸವಾಲಾಗಿ ಪರಿಣಮಿಸಿದರೆ ಮತ್ತೊಂದೆಡೆ ಧರೆಕುಸಿತದಂತಹ ಆತಂಕ ಸ್ಥಳೀಯರಲ್ಲಿ ಮನೆ ಮಾಡಿದೆ.
ಕಾವೇರಿ ಲೋನ್ ಸರ್ವಿಸ್ ನಂಬಿ ಲಕ್ಷಾಂತರ ರೂಪಾಯಿ ವಂಚನೆ
ಶಿವಮೊಗ್ಗ: ಯೂಟ್ಯೂಬ್ ನಲ್ಲಿ ಸಾಲದ ಜಾಹೀರಾತನ್ನು ನೋಡಿ, ರೈತರೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ. ಜೂನ್ ತಿಂಗಳಿನ ಸಮಯದಲ್ಲಿ ರೈತನು ಯೂಟ್ಯೂಬ್ ನೋಡುತ್ತಿದ್ದ ಸಂದರ್ಭದಲ್ಲಿ ಕಾವೇರಿ ಲೋನ್ ಸರ್ವಿಸ್ ಹಾಗೂ ಧನಿ ಫೈನಾನ್ಸ್ ಎನ್ನುವ ಹೆಸರಿನ ಸಂಸ್ಥೆಗಳಲ್ಲಿ ಸಾಲ ನೀಡುವ ಕುರಿತು ಜಾಹೀರಾತೊಂದು ಬಂದಿದೆ. ರೈತನಿಗೆ ಸಾಲದ ಅವಶ್ಯಕತೆ ಇದ್ದುದರಿಂದ ಜಾಹೀರಾತಿನ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದು, ಬಳಿಕ ಅವರ ವಾಟ್ಸಪ್ ಗೆ ವಿವಿಧ ಸಂಖ್ಯೆಗಳಿಂದ ಸಂದೇಶಗಳು ಬಂದಿವೆ ಎನ್ನಲಾಗಿದೆ. ಮೊದಲಿಗೆ ವಂಚಕರು ಸಾಲವನ್ನು ನೀಡುವುದಾಗಿ ನಂಬಿಸಿ, ಪ್ರೊಸೆಸಿಂಗ್ ಶುಲ್ಕ, ತೆರಿಗೆ ಮತ್ತು ಸೇವಾ ಶುಲ್ಕದ ನೆಪದಲ್ಲಿ ರೈತನಿಗೆ ಹಣವನ್ನು ಪಾವತಿಸುವಂತೆ ತಿಳಿಸಿದ್ದಾರೆ. ಆಗ ರೈತನು ಹಣವನ್ನು ಕಳುಹಿಸಿದ್ದು, ಜುಲೈ 14ರಂದು ಸಾಲ ನೀಡುವುದು ಖಚಿತವಾಗಿರುವುದರ ಕುರಿತು ನಕಲಿ ಅಗ್ರಿಮೆಂಟ್ ಪ್ರತಿಯನ್ನು ಸಹ ವಂಚಕರು ಕಳುಹಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಇದರಿಂದ ರೈತನಲ್ಲಿ ಮತ್ತಷ್ಟು ನಂಬಿಕೆ ಬಂದಿದ್ದು, ಆಗಸ್ಟ್ 2ರ ಭಾನುವಾರದಿಂದ ಆಗಸ್ಟ್ 6ರ ಗುರುವಾರದವರೆಗೆ ತಮ್ಮ ಬ್ಯಾಂಕ್ ಖಾತೆಯಿಂದ ವಂಚಕರು ನೀಡಿದ ವಿವಿಧ ಖಾತೆಗಳಿಗೆ ಹಣವನ್ನು ವರ್ಗಾಯಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಅಲ್ಲದೆ ರೈತನಿಗೆ ಸಾಲವನ್ನು ನೀಡದೆ ವಂಚಕರು ಮತ್ತೆ ಹಣವನ್ನು ವರ್ಗಾಯಿಸುವಂತೆ ಕೇಳಿದಾಗ ರೈತನಿಗೆ ಅನುಮಾನ ಉಂಟಾಗಿದ್ದು, ಪರಿಚಯಸ್ಥರಲ್ಲಿ ಈ ವಿಚಾರವಾಗಿ ತಿಳಿಸಿದಾಗ ತಾನು ಮೋಸ ಹೋಗಿರುವುದರ ಕುರಿತು ಅರಿವಾಗಿದೆ. ಇದಕ್ಕೆ ಸಂಬಂಧಿಸಿದಂತೆ ರೈತನು ತಾನು 12.50.೦78 ರೂಪಾಯಿಗಳಷ್ಟು ಹಣವನ್ನು ಕಳೆದುಕೊಂಡಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







