ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮೂಡುಬಿದಿರೆ: ಮೂಡುಬಿದಿರೆಯ ಆಳ್ವಾಸ್ ವಿದ್ಯಾಗಿರಿಯಲ್ಲಿ ಆಗಸ್ಟ್ 7 ಮತ್ತು 8ರಂದು ಆಳ್ವಾಸ್ ಪ್ರಗತಿ-2026 ಬೃಹತ್ ಉದ್ಯೋಗ ಮೇಳ ನಡೆಯಲಿದೆ. 350ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, 24,298ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿವೆ.
ಹೊಸಬರು ಹಾಗೂ ಅನುಭವಿಗಳಿಬ್ಬರೂ ಭಾಗವಹಿಸಬಹುದು. ಆಸಕ್ತ ಅಭ್ಯರ್ಥಿಗಳು ಮುಂಚಿತವಾಗಿ ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ. ರಾಜ್ಯದ ಅತೀ ದೊಡ್ಡ ಉದ್ಯೋಗ ಮೇಳ ಇದಾಗಿದೆ.
ಶಿಕ್ಷಣಕ್ಕೂ ಸೈ… ಉದ್ಯೋಗಕ್ಕೂ ಜೈ..!
ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಆಳ್ವಾಸ್ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತಹ ಕಾರ್ಯಕ್ರಮಗಳನ್ನು ಪ್ರತಿವರ್ಷ ನಡೆಸಿಕೊಂಡು ಬರುತ್ತಿದೆ. ಇದರ ಜೊತೆಗೆ ಉದ್ಯೋಗ ಮೇಳಗಳನ್ನು ಸಹ ಆಯೋಜಿಸುವ ಮೂಲಕ, ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಲಭಿಸುವಂತೆ ಮಾಡುತ್ತಿದೆ. ಈ ಬಾರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಉದ್ಯೋಗ ಮೇಳದ 16ನೇ ಆವೃತ್ತಿಯನ್ನು ಆಗಸ್ಟ್ 7ರ ಶುಕ್ರವಾರ ಮತ್ತು 8ರ ಶನಿವಾರದಂದು ಆಳ್ವಾಸ್ ನ ವಿದ್ಯಾಗಿರಿ ಆವರಣದಲ್ಲಿ ಆಯೋಜಿಸಲಾಗಿದೆ.
ಯಾವ ಯಾವ ಕ್ಷೇತ್ರದ ಕಂಪನಿಗಳು ಭಾಗಿ?
ಐಟಿ, ಐಟಿಇಎಸ್, ಉತ್ಪಾದನೆ, ಆರೋಗ್ಯ ಮತ್ತು ಔಷಧ, ಬ್ಯಾಂಕಿಂಗ್ ಮತ್ತು ಹಣಕಾಸು, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಶಿಕ್ಷಣ, ಮಾಧ್ಯಮ, ಆತಿಥ್ಯ, ಎಲೆಕ್ಟ್ರಾನಿಕ್ಸ್ ಹಾಗೂ ದೂರಸಂಪರ್ಕ ಸೇರಿದಂತೆ ವಿವಿಧ ಕ್ಷೇತ್ರಗಳ ಸುಮಾರು 350ಕ್ಕೂ ಹೆಚ್ಚಿನ ಕಂಪನಿಗಳು ಭಾಗವಹಿಸುತ್ತಿದ್ದು, 24.298ಕ್ಕೂ ಹೆಚ್ಚಿನ ಉದ್ಯೋಗಗಳಿಗೆ ಅವಕಾಶವಿದೆ. ಇದುವರೆಗೆ 326 ಕಂಪನಿಗಳು ತಮ್ಮ ಭಾಗವಹಿಸುವಿಕೆಯನ್ನು ದೃಢಪಡಿಸಿದ್ದು, ಸುಮಾರು 350ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.
ಎಲ್ಲಾ ಕಡೆ ತರಬೇತಿ: ಮಾಹಿತಿ ಶಿಬಿರ
ಉದ್ಯೋಗ ಮೇಳದ ಕುರಿತು ಸಂಪೂರ್ಣ ಮಾಹಿತಿ ಮತ್ತು ಸಂದರ್ಶನಕ್ಕೆ ಅಗತ್ಯವಾಗಿರುವಂತಹ ಸಿದ್ಧತೆಗಾಗಿ ಬಂಟ್ವಾಳ, ಪುತ್ತೂರು, ಕುಂದಾಪುರ, ಸುಬ್ರಹ್ಮಣ್ಯ, ಮೂಡಬಿದರೆ, ಮಂಗಳೂರು, ಕಾಪು ಮತ್ತು ಉಳ್ಳಾಲದಲ್ಲಿ ಆಳ್ವಾಸ್ ನ ನುರಿತ ತಜ್ಞರ ತಂಡ ಒರಿಯಂಟೇಶನ್ ಕಾರ್ಯಕ್ರಮವನ್ನು ಸಹ ಹಮ್ಮಿಕೊಂಡಿದೆ. ಇದರಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಅಭ್ಯರ್ಥಿಗಳು ತಮಗೆ ಅನುಕೂಲವಾಗುವಂತಹ ಸಮೀಪದ ಕೇಂದ್ರಗಳಲ್ಲಿ ಭಾಗವಹಿಸಬಹುದು ಎಂದು ತಿಳಿಸಿದ್ದಾರೆ.
ಉದ್ಯೋಗ ಮೇಳದ ಮತ್ತೊಂದು ವಿಶೇಷತೆ ಎಂದರೆ ಎಕ್ಸ್ ಪರ್ಟೈಸ್ ಸಂಸ್ಥೆಯು ಡಿಪ್ಲೋಮಾ ಮತ್ತು ಐಟಿಐ ಅಭ್ಯರ್ಥಿಗಳಿಗಾಗಿ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗಾವಕಾಶವನ್ನು ಒದಗಿಸುತ್ತಿದೆ. ಎಂಬಿಎ, ಎಂಎಚ್ಆರ್ ಡಿ, ಎಂಎಸ್ ಡಬ್ಲ್ಯೂ ಮತ್ತು ಬಿಎಸ್ ಡಬ್ಲ್ಯೂ ಅಭ್ಯರ್ಥಿಗಳಿಗಾಗಿ ಸುಮಾರು 70ಕ್ಕೂ ಹೆಚ್ಚಿನ ಮಾನವ ಸಂಪನ್ಮೂಲ ಹುದ್ದೆಗಳು ಲಭ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.
ಆಳ್ವಾಸ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ವಿವೇಕ್ ಆಳ್ವ ಸಾರಥ್ಯ!
ಆಳ್ವಾಸ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ವಿವೇಕ್ ಆಳ್ವ ಅವರು ಮಾತನಾಡಿ, ಎಲ್ಲಾ ಉದ್ಯೋಗ ಆಕಾಂಕ್ಷಿಗಳು, “ಆಳ್ವಾಸ್ ಪ್ರಗತಿ-2026ರ ಸಂಪೂರ್ಣ ಮಾಹಿತಿಗಾಗಿ http://www.alvaspragati.com ವೆಬ್ ಸೈಟ್ ಗೆ ಭೇಟಿ ನೀಡಬಹುದು. ಮತ್ತು ಅಭ್ಯರ್ಥಿಗಳು ಕಡ್ಡಾಯವಾಗಿ ಆನ್ ಲೈನ್ ನೋಂದಣಿಯನ್ನು ಮಾಡಿಕೊಳ್ಳಬೇಕು. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾದ ಉದ್ಯೋಗಾವಕಾಶಗಳನ್ನು ಈ ವೆಬ್ ಸೈಟ್ ಮೂಲಕ ಸುಲಭವಾಗಿ ಹುಡುಕಬಹುದು. ಉದ್ಯೋಗ ಮೇಳಕ್ಕಾಗಿ ಹೊರಜಿಲ್ಲೆ ಮತ್ತು ಹೊರರಾಜ್ಯಗಳಿಂದ ಆಗಮಿಸುವ ಅಭ್ಯರ್ಥಿಗಳಿಗಾಗಿ ಆಗಸ್ಟ್ 6ರ ಗುರುವಾರದಿಂದ ಉಚಿತ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಐಟಿಐ ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳಿಗಾಗಿ ಉಚಿತ ಬಸ್ ಸೌಲಭ್ಯವನ್ನು ಒದಗಿಸಲಾಗುತ್ತದೆ” ಎಂದು ಮಾಹಿತಿ ನೀಡಿದ್ದಾರೆ.
ದೇಶದಲ್ಲೇ ಅತೀ ದೊಡ್ಡ ಉದ್ಯೋಗ ಮೇಳ!
ಸಾವಿರಾರು ಉದ್ಯೋಗ ಆಕಾಂಕ್ಷಿಗಳು ಭಾಗಿಯಾಗುವ ಆಳ್ವಾಸ್ ಪ್ರಗತಿ-2026 ಭಾರತದಲ್ಲೇ ಅತೀ ದೊಡ್ಡ ಉದ್ಯೋಗ ಮೇಳ ಇದಾಗಿದೆ.
ಅತೀ ಹೆಚ್ಚು ಜನ ರಾಜ್ಯದ ವಿವಿಧ ಮೂಲೆಯಿಂದ ಈ ಉದ್ಯೋಗ ಮೇಳದಲ್ಲಿ ಭಾಗಿಯಾಗಲಿದ್ದಾರೆ. ಅತ್ಯುತ್ತಮ ಆಯೋಜನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.







