ಮೂಡಬಿದರೆ: ವಿದ್ಯಾಕಾಶಿ ಮೂಡಬಿದಿರೆಯ ಆಳ್ವಾಸ್ ಕಾಲೇಜು ಕ್ಯಾಂಪಸ್ ಎರಡು ದಿನ ಸಾವಿರ ಸಾವಿರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ಬೆಳಕು ನೀಡಿತು.
ಆಳ್ವಾಸ್ ಪ್ರಗತಿ-2026ರಲ್ಲಿ 350ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡಿದ್ದು, 20,000ಕ್ಕೂ ಅಧಿಕ ಉದ್ಯೋಗಾವಕಾಶ ನೀಡಿದವು.
ಭೋರ್ಗರೆದು ಸುರಿವ ಮಳೆಯಲ್ಲೇ ಉದ್ಯೋಗಕ್ಕಾಗಿ ಸಾವಿರ ಸಾವಿರ ಯುವ ಜನರು ಕ್ಯೂ ಅಲ್ಲಿ ನಿಂತು ಸಂದರ್ಶನದಲ್ಲಿ ಭಾಗಿಯಾದರು.
20 ಸಾವಿರ ಯುವ ಜನರು ಭಾಗಿ!
ದೇಶ ವಿದೇಶ ರಾಜ್ಯದ 350ಕ್ಕೂ ಹೆಚ್ಚು ವಿವಿಧ ಕ್ಷೇತ್ರದ ಕಂಪನಿಗಳು ಆಗಮಿಸಿದ್ದವು. 2 ದಿನಗಳ ಕಾಲ ಸುಮಾರು 20 ಸಾವಿರ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾದರು. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗಾಗಿ ಕರಾವಳಿ ಭಾಗದಾದ್ಯಂತ ಉಚಿತ ಬಸ್ ಸೇವೆಯನ್ನು ಸಹ ಕಲ್ಪಿಸಲಾಗಿತ್ತು. ಹಾಗೆಯೇ ಕರ್ನಾಟಕದ ವಿವಿಧ ಭಾಗದಿಂದ ಬಂದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕೂಡ ನೀಡಲಾಗಿತ್ತು.
2000ಕ್ಕೂ ಹೆಚ್ಚು ಸ್ವಯಂ ಸೇವಕರು!
ಆಳ್ವಾಸ್ ಸಂಸ್ಥೆ ಅಂದರೆ ಅಲ್ಲಿ ಶಿಸ್ತು. ಅಚ್ಚುಕಟ್ಟು.. ಸುಮಾರು 2000 ಮಂದಿ ಸ್ವಯಂ ಸೇವಕರು ಈ ಉದ್ಯೋಗ ಮೇಳಕ್ಕೆ ಸಹಕಾರ ನೀಡಿದರು. ಉಪನ್ಯಾಸಕರು, ಸಿಬ್ಬಂದಿ, ಕಾಲೇಜು ವಿದ್ಯಾರ್ಥಿಗಳು ಶ್ರಮಿಸಿದರು.
ಉದ್ಯೋಗ ಮೇಳದ ಬಗ್ಗೆ ಡಾ.ಎಂ.ಮೋಹನ್ ಆಳ್ವಾ ಹೇಳಿದ್ದೇನು?
ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಮೋಹನ್ ಆಳ್ವಾ ಅವರು ಮಾತನಾಡಿ “ನಾವು ಯಾವುದೇ ರೀತಿಯ ಶುಲ್ಕವನ್ನು ನಿಗದಿಪಡಿಸದೆ, ಸಂಪೂರ್ಣ ಉಚಿತವಾಗಿ ಉದ್ಯೋಗ ಮೇಳವನ್ನು ಆಯೋಜಿಸಿದ್ದೇವೆ. ದೇಶದ ಇತರೆ ಶಿಕ್ಷಣ ಸಂಸ್ಥೆಗಳು ಇಂತಹ ಉದ್ಯೋಗ ಮೇಳಗಳನ್ನು ಆಯೋಜಿಸಿದರೆ ನಿರುದ್ಯೋಗ ಸಮಸ್ಯೆ ನಿವಾರಣೆಗೆ ದೊಡ್ಡ ಮಟ್ಟದ ನೆರವಾಗಲಿದೆ. ಹೀಗಾಗಿ ಪ್ರತಿ ವರ್ಷ ಸಾವಿರಾರು ಯುವಕರಿಗೆ ಉದ್ಯೋಗ ದೊರಕುವಂತೆ ನಮ್ಮ ಶಿಕ್ಷಣ ಸಂಸ್ಥೆಯು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದರು.
ವಿವೇಕ್ ಆಳ್ವಾ ಉದ್ಯೋಗ ಮೇಳದ ರೂವಾರಿ!
ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವಾ ಕಳೆದ 3 ತಿಂಗಳಿಂದ ಈ ಆಳ್ವಾಸ್ ಪ್ರಗತಿ -2026ಕ್ಕಾಗಿ ಶ್ರಮಿಸುತ್ತಿದ್ದಾರೆ. ರಾಜ್ಯದ ಕಾರ್ಪೋರೇಟ್ ಕಂಪನಿಗಳ ಜತೆ ಎಲ್ಲಾ ಕ್ಷೇತ್ರದ 350ಕ್ಕೂ ಹೆಚ್ಚು ಕಂಪನಿ ಕರೆ ತರುವಲ್ಲಿ ಯಶಸ್ಸು ಗಳಿಸಿದ್ದಾರೆ. ಖುದ್ದು ಎಲ್ಲಾ ವ್ಯವಸ್ಥೆ ಮಾಡುವ ಜತೆಗೆ ವಿದ್ಯಾರ್ಥಿಗಳಿಗೆ ಅವರೇ ಮಾಹಿತಿ ಕೂಡ ನೀಡಿದ್ದಾರೆ. ಆಳ್ವಾಸ್ ಪ್ರಗತಿ -2026ಕ್ಕೆ ಆಗಮಿಸಿದ ಕಂಪನಿಗಳ ಮುಖ್ಯಸ್ಥರು, ಎಲ್ಲಾ ಸಿಬ್ಬಂದಿ, ಸ್ವಯಂ ಸೇವಕರು, ಸಹಕಾರ ಸರ್ವರಿಗೂ ವಿವೇಕ್ ಆಳ್ವಾ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಉದ್ಯೋಗ ಮೇಳದಲ್ಲಿ ಉದ್ಯೋಗದಾತರಿಗೆ ಸನ್ಮಾನ!
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ.ಖಾದರ್ ಅವರು ವಿದ್ಯಾಗಿರಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಆಳ್ವಾಸ್ ಪ್ರಗತಿ- 2026ಕ್ಕೆ ಚಾಲನೆ ನೀಡಿದರು.
ಉದ್ಯೋಗ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಶ್ರೀಕ್ಷೇತ್ರ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್.ಜನಾರ್ಧನ್, ಎಂಆರ್ ಜಿ ಗ್ರೂಪ್ ನ ಡಾ.ಕೆ.ಪ್ರಕಾಶ್ ಶೆಟ್ಟಿ, ಭವಾನಿ ಶಿಫ್ಟಿಂಗ್ ಗ್ರೂಪ್ ನ ಕುಸುಮೋದರ ಡಿ.ಶೆಟ್ಟಿ, ಪ್ರೊವಿಟ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ನ ವಿನ್ಸೆಂಟ್ ಕುಟಿನ್ಹ ಮತ್ತು ಎಕ್ಸ್ ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂಪನಿಯ ಮೊಹಮ್ಮದ್ ಅಶ್ಫಾಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ, ಶಾಸಕ ಉಮಾನಾಥ್ ಎ ಕೊಟ್ಯಾನ್, ಮಾಜಿ ಸಚಿವ ಅಭಯ ಚಂದ್ರ ಜೈನ್, ಶಾಸಕ ಹರೀಶ್ ಪೂಂಜಾ, ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್ ಹಾಗೂ ಐಟಿ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರಣ್ ವರ್ಮಾ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧಿಯಾ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ವಿವೇಕ್ ಆಳ್ವಾ ಮೊದಲಾದವರು ಉಪಸ್ಥಿತರಿದ್ದರು







