ಮಲೆನಾಡು/ ಕರಾವಳಿ: ಮಂಗಳೂರು-ಶೃಂಗೇರಿ- ಶಿವಮೊಗ್ಗ ನಡುವೆ ಪ್ರಸ್ತಾಪಗೊಂಡಿರುವ 332 ಕಿಲೋಮೀಟರ್ ಉದ್ದದ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ಸ್ಥಳ ಸಮೀಕ್ಷೆಗೆ ಕೇಂದ್ರ ರೈಲ್ವೆ ಸಚಿವಾಲಯವು ಅನುಮೋದನೆ ನೀಡಿದೆ. ಮಂಗಳೂರು ರೈಲ್ವೆ ಸಂಪರ್ಕ ಸಾಮರ್ಥ್ಯ ವೃದ್ಧಿಯ ಕುರಿತು ಲೋಕಸಭೆಯಲ್ಲಿ ಕೇಳಲಾಗಿರುವಂತಹ ಪ್ರಶ್ನೆಗೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಬುಧವಾರದಂದು ಲಿಖಿತ ರೂಪದಲ್ಲಿ ಉತ್ತರ ನೀಡಿರುವ ಕುರಿತು ಮಾಹಿತಿ ಲಭಿಸಿದೆ. ಮಂಗಳೂರು ರೈಲ್ವೆ ಕಾರಿಡಾರ್ ಸಾಮರ್ಥ್ಯ ಹೆಚ್ಚಳ ಮತ್ತು ಪ್ರಸ್ತುತ ಯೋಜನೆಗಳು, ಅವುಗಳ ಸ್ಥಿತಿ, ವೆಚ್ಚ, ಭೌತಿಕ ಮತ್ತು ಆರ್ಥಿಕ ಪ್ರಗತಿ, ಪ್ರಯಾಣಿಕರ ದತ್ತಾಂಶ, ಕಾಮಗಾರಿ ಪೂರ್ಣಗೊಳಿಸುವ ಗುರಿ, ಭೂಸ್ವಾಧೀನ ಸಂಬಂಧಿತ ಅಡೆತಡೆಗಳು ಮತ್ತು ಯೋಜನೆಗಳಿಗೆ ಅನುಮೋದನೆ ನೀಡುವ ಹಾಗೂ ಮುಂದಿನ ಹಂತಗಳ ಕಾಮಗಾರಿಯ ಕುರಿತು ಸಂಸದರಾದ ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ಪ್ರಶ್ನೆ ಸಂಖ್ಯೆ 358ರ ಅನ್ವಯ ವಿವರಣೆಯನ್ನು ಕೇಳಿದ್ದರು. ಈ ಹಿನ್ನೆಲೆಯಲ್ಲಿ ರೈಲ್ವೆ ಸಚಿವಾಲಯವು 18 ಪುಟಗಳ ಹೇಳಿಕೆಯನ್ನು ಸದನದ ಮುಂದೆ ಮಂಡಿಸಿದೆ ಎನ್ನಲಾಗಿದೆ.
ಸಮೀಕ್ಷೆಗೆ ಅನುಮೋದನೆ: ರೈಲು ಯೋಜನೆಗಳಲ್ಲ!
ಮಂಗಳೂರು-ಶೃಂಗೇರಿ- ಶಿವಮೊಗ್ಗದ ನಡುವಿನ 332 ಕಿಲೋಮೀಟರ್ ದೂರದ ರೈಲು ಮಾರ್ಗವೂ ಒಂದಾಗಿದ್ದು, ಈ ಮಾರ್ಗದ ಡಿಪಿಆರ್ ಸಿದ್ಧಪಡಿಸಲು ಅಗತ್ಯವಾಗಿರುವ ಎಫ್ಎಲ್ ಸಿ ಗೆ ಅನುಮೋದನೆ ದೊರೆತಿದೆ ಎಂದು ಕೇಂದ್ರ ಸರ್ಕಾರವು ಸ್ಪಷ್ಟನೆ ನೀಡಿದೆ. ಅಂದರೆ ಡಿಪಿಆರ್ ಸಿದ್ಧಪಡಿಸಲು ನಡೆಸಬೇಕಾದ ಸಮೀಕ್ಷೆಗೆ ಅನುಮೋದನೆ ದೊರೆತಿದೆಯೇ ಹೊರತು, 332 ಕಿಲೋಮೀಟರ್ ಹೊಸ ರೈಲ್ವೆ ಮಾರ್ಗದ ನಿರ್ಮಾಣ ಯೋಜನೆಗಲ್ಲ. ಇದರ ಪ್ರಕಾರ ಮಂಗಳೂರು-ಶೃಂಗೇರಿ- ಶಿವಮೊಗ್ಗ ಹೊಸ ರೈಲ್ವೆ ಮಾರ್ಗದೊಂದಿಗೆ, ಮಂಗಳೂರು-ಶೋರನೂರು ನಡುವೆ 3೦7 ಕಿಲೋಮೀಟರ್ ದೂರದ ಮೂರನೇ ರೈಲು ಮಾರ್ಗ ಮತ್ತು ಮಂಗಳೂರು-ಹಾಸನ 247 ಕಿಲೋಮೀಟರ್ ದ್ವಿಪಥ ಯೋಜನೆಗಳ ಡಿಪಿಆರ್ ಸಿದ್ಧಪಡಿಸಲು ಕೂಡ ಎಫ್ಎಲ್ ಸಿ ಗೆ ಅನುಮೋದನೆಯನ್ನು ನೀಡಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.







