ಬೆಂಗಳೂರು: ಪ್ರತಿಭೆ ಮತ್ತು ಓದಿನ ಬಗ್ಗೆ ವಿಶೇಷ ಒಲವು ಹಾಗೂ ಉತ್ಸಾಹವಿದ್ದರೂ ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿ, ತಮ್ಮ ಕನಸುಗಳನ್ನು ಚಿವುಟಿ ಹಾಕಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಆದರೆ, ಅಂತಹ ವಿದ್ಯಾರ್ಥಿಗಳ ಕನಸನ್ನು ನನಸಾಗಿಸಲು ಭಾರತದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ‘ಎಸ್ ಬಿಐ’ ತನ್ನ ಎಸ್ ಬಿಐ ಫೌಂಡೇಶನ್ ನ ವತಿಯಿಂದ ‘ಎಸ್ಬಿಐ ಪ್ಲಾಟಿನಂ 2026-27 ಆಶಾ ವಿದ್ಯಾರ್ಥಿವೇತನ’ ಎನ್ನುವ ಹೊಸ ಯೋಜನೆಯೊಂದನ್ನು ರೂಪಿಸಿದೆ.
ವಿದ್ಯಾರ್ಥಿಗಳ ಹೆಚ್ಚಿನ ವ್ಯಾಸಂಗಕ್ಕೆ ನೆರವಾಗುವ ಉದ್ದೇಶದಿಂದ ಈ ವಿದ್ಯಾರ್ಥಿ ವೇತನವನ್ನು ಪ್ರಾರಂಭಿಸಿದ್ದು, 9ನೇ ತರಗತಿಯಿಂದ ಉನ್ನತ ವ್ಯಾಸಂಗದವರೆಗೆ ಹಾಗೂ ವಿದೇಶಗಳಲ್ಲಿ ವ್ಯಾಸಂಗ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನವು ಆರ್ಥಿಕವಾಗಿ ಆಸರೆಯಾಗಲಿದೆ. ಈಗಾಗಲೇ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಸೆಪ್ಟೆಂಬರ್ 4ರ ಶುಕ್ರವಾರದಂದು ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್ ಲೈನ್ ಮೂಲಕ ನಡೆಯಲಿದ್ದು, ಉಚಿತವಾಗಿ ಸಲ್ಲಿಸಬಹುದಾಗಿದೆ. ಅರ್ಹ ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಈ ಮೂಲಕ ತಿಳಿಸಲಾಗಿದೆ.
ದಾಖಲೆ ಏನೇನ್ ಬೇಕು?
ಅರ್ಜಿಯನ್ನು ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಹಿಂದಿನ ವರ್ಷದ ಅಥವಾ ಇಂದಿನ ಅಂಕಪಟ್ಟಿಯನ್ನು, ಆಧಾರ್ ಕಾರ್ಡ್ ಅಥವಾ ಸರ್ಕಾರವು ನೀಡಿರುವ ಗುರುತಿನ ಚೀಟಿ, ಇತ್ತೀಚಿನ ಪಾಸ್ ಪೋರ್ಟ್ ಫೋಟೋ, ಕುಟುಂಬದ ಆದಾಯ ಪ್ರಮಾಣಪತ್ರ, ಬ್ಯಾಂಕ್ ಖಾತೆಯ ವಿವರಗಳು/ಪಾಸ್ ಬುಕ್, ವಿಶ್ವಾಸಾರ್ಹ ಪ್ರಮಾಣ ಪತ್ರ/ ಅಡ್ಮಿಷನ್ ಪುರಾವೆ, ಇತ್ತೀಚಿನ ಶುಲ್ಕ ರಸೀದಿ/ಫೀ ಸ್ಟ್ರಕ್ಚರ್, ಜಾತಿ ಪ್ರಮಾಣಪತ್ರ, ಅಂಗವೈಕಲ್ಯ ಪ್ರಮಾಣಪತ್ರ, ಜೆಇಇ ಅಡ್ವಾನ್ಸ್ಡ್, ನೀಟ್, ಕ್ಯಾಟ್ ಮುಂತಾದ ಪರೀಕ್ಷೆಗಳ ಅಂಕಗಳ ಕಾರ್ಡ್, ವಿದೇಶಿ ವಿದ್ಯಾಭ್ಯಾಸ ಪಡೆಯಲು ಬಯಸುವವರು ಸಂಬಂಧಿತ ಆಫರ್ ಲೆಟರ್ ಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು.
ಅಂಕ ಎಷ್ಟಿರಬೇಕು?
ಅರ್ಜಿಯನ್ನು ಸಲ್ಲಿಸುವ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಕನಿಷ್ಠ ಶೇಕಡ 75 ಅಥವಾ 7.5ಸಿಜಿಪಿಎ ಅನ್ನು ಅಗತ್ಯವಾಗಿ ಪಡೆದುಕೊಳ್ಳಬೇಕಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶೇಕಡ 65 ಅಥವಾ 6.5ಸಿಜಿಪಿಎ, ಪಿಡಬ್ಲ್ಯೂಬಿಡಿ ವಿದ್ಯಾರ್ಥಿಗಳಿಗೆ ಶೇಕಡ 60 ಅಥವಾ 6.0ಸಿಜಿಪಿಎ ಅಂಕಗಳನ್ನು ನಿಗದಿಗೊಳಿಸಲಾಗಿದೆ. ವಿದ್ಯಾರ್ಥಿವೇತನಕ್ಕೆ ಆಯ್ಕೆ ಪ್ರಕ್ರಿಯೆಯನ್ನು ಮೊದಲಿಗೆ ವಿದ್ಯಾರ್ಥಿಗಳು ಪಡೆದುಕೊಂಡ ಅಂಕಗಳು ಅಂದರೆ ಶೈಕ್ಷಣಿಕ ಸಾಧನೆ ಮತ್ತು ಕುಟುಂಬದ ಆರ್ಥಿಕ ಹಿನ್ನೆಲೆಯನ್ನು ಆಧಾರವಾಗಿಟ್ಟುಕೊಂಡು ಪರಿಶೀಲಿಸಿ, ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಬಳಿಕ ಶಾರ್ಟ್ ಲಿಸ್ಟ್ ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ದೂರವಾಣಿಯ ಮೂಲಕ ಸಂದರ್ಶನ ಮಾಡಲಾಗುತ್ತದೆ. ಅಂತಿಮವಾಗಿ ವಿದ್ಯಾರ್ಥಿಗಳ ದಾಖಲೆಗಳ ಪರಿಶೀಲನೆಯ ಬಳಿಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ವಿದೇಶದಲ್ಲಿ ಓದಲು ಕೂಡ ವಿದ್ಯಾರ್ಥಿವೇತನ
ಇನ್ನು ವಿದೇಶಗಳಲ್ಲಿ ಉನ್ನತ ವ್ಯಾಸಂಗವನ್ನು ಮಾಡಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಗರಿಷ್ಠ 15ಲಕ್ಷ ರೂಪಾಯಿಗಳಷ್ಟು ವಿದ್ಯಾರ್ಥಿವೇತನ ಲಭಿಸಲಿದ್ದು, ವಿದೇಶಿ ವಿದ್ಯಾಭ್ಯಾಸದ ವಿಭಾಗವು ಪಿಜಿ ಅಥವಾ ಅದಕ್ಕಿಂತ ಮೇಲಿನ ಕೋರ್ಸ್ ಗಳಿಗೆ ಅನ್ವಯವಾಗುತ್ತದೆ. ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಅಥವಾ ಮಾನ್ಯ ಆಫರ್ ಲೆಟರ್ ಅನ್ನು ಹೊಂದಿರಬಹುದು. ಅಂತಹ ವಿದ್ಯಾರ್ಥಿಗಳು ವ್ಯಾಸಂಗ ಮಾಡಿರುವ ವಿಶ್ವವಿದ್ಯಾನಿಲಯವು ಇತ್ತೀಚಿನ ಸಂಬಂಧಿತ ವಿಶ್ವ ರಾಂಕಿಂಗ್ ನಲ್ಲಿ 200ರೊಳಗೆ ಸ್ಥಾನವನ್ನು ಪಡೆದುಕೊಂಡಿರಬೇಕು.
ಅರ್ಜಿ ಸಲ್ಲಿಸೋದು ಹೇಗೆ?
ಅರ್ಹ ವಿದ್ಯಾರ್ಥಿಗಳು SBI Asha Scholarship ನ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ, ಅಪ್ಲೈ ನೌ ಆಯ್ಕೆ ಮಾಡಿ, ಮೊಬೈಲ್ ಸಂಖ್ಯೆ ಅಥವಾ ಈಮೇಲ್ ಬಳಸಿ ನೋಂದಣಿ ಮಾಡಿ, ಬಳಿಕ ಲಾಗಿನ್ ಮಾಡಿ, SBI Platinum Jubilee Asha Scholarship 2026-27ಆಯ್ಕೆ ಮಾಡಬೇಕು. ನಂತರ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ವಿಭಾಗವನ್ನು ಆಯ್ಕೆ ಮಾಡಿಕೊಂಡು ಸ್ಟಾರ್ಟ್ ಅಪ್ಲಿಕೇಶನ್ ಅನ್ನು ಕ್ಲಿಕ್ ಮಾಡಿ, ಅರ್ಜಿಯಲ್ಲಿರುವ ಎಲ್ಲಾ ವಿವರಗಳನ್ನು ಪರಿಶೀಲಿಸಿ, ಅದರಲ್ಲಿರುವ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಂಡು ಅಂತಿಮವಾಗಿ ಅರ್ಜಿಯನ್ನು ಸಲ್ಲಿಸಿ. ಅಂತಿಮವಾಗಿ ಅರ್ಜಿಯನ್ನು ಸಲ್ಲಿಸಿದ ಬಳಿಕ ಅದನ್ನು ತಿದ್ದುಪಡಿ ಮಾಡುವುದಾಗಲಿ ಅಥವಾ ಬದಲಾವಣೆ ಮಾಡಲು ಸಾಧ್ಯವಿಲ್ಲದಿರುವುದರಿಂದ, ಅರ್ಜಿಯನ್ನು ಅಂತಿಮವಾಗಿ ಸಲ್ಲಿಸುವಾಗ ಮತ್ತೊಮ್ಮೆ ಸರಿಯಾಗಿ ಪರಿಶೀಲಿಸುವಂತೆ ಈ ಮೂಲಕ ತಿಳಿಸಲಾಗಿದೆ.







