•ಪುತ್ತೂರು: ಅಪರಿಚಿತ ಶವ ಪತ್ತೆ
•ಸುಳ್ಯ: ಮಹಿಳೆಗೆ ಆಟೋ ಚಾಲಕನಿಂದ ಲೈಂಗಿಕ ಕಿರುಕುಳ
•ಬ್ರಹ್ಮಾವರ: ಹೋಂನರ್ಸ್ ನಿಂದ ಲಕ್ಷಾಂತರ ರೂಪಾಯಿ ವಂಚನೆ
•ಉಳ್ಳಾಲ: ವಿದ್ಯುತ್ ಆಘಾತಕ್ಕೆ ಒಳಗಾಗಿ ಮೆಸ್ಕಾಂ ಸಿಬ್ಬಂದಿ ಸಾವು
•ಪುತ್ತೂರು: ಅಪರಿಚಿತ ಶವ ಪತ್ತೆ
ಪುತ್ತೂರು: ಕರಾವಳಿ ಭಾಗದಲ್ಲಿ ಮಳೆಯ ಪ್ರಮಾಣ ತೀವ್ರವಾಗಿರುವ ಹಿನ್ನೆಲೆಯಲ್ಲಿ ಪುರುಷರೊಬ್ಬರ ಮೃತದೇಹವೊಂದು ನೇತ್ರಾವತಿ ನದಿಯಲ್ಲಿ ಪತ್ತೆಯಾಗಿರುವ ಘಟನೆ, ಉಪ್ಪಿನಂಗಡಿಯ ಮಠ ಎನ್ನುವಲ್ಲಿ ನಡೆದಿದೆ. ನದಿಯ ನೀರಿನಲ್ಲಿ ಕೊಚ್ಚಿಕೊಂಡು ಹೋದ ಮೃತದೇಹ ಬಿದಿರು ಪೊದೆಯಲ್ಲಿ ಸಿಲುಕಿಕೊಂಡಿತ್ತು ಎನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯರ ಸಹಕಾರದಿಂದ ಮೃತದೇಹವನ್ನು ಮೇಲಕ್ಕೆ ತಂದಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ವ್ಯಕ್ತಿಯು ಸುಮಾರು 30 ರಿಂದ 40 ವರ್ಷ ವಯಸ್ಸಿನವರಾಗಿದ್ದು, ಪ್ಯಾಂಟ್ ಮತ್ತು ನಿಕ್ಕರ್ ಧರಿಸಿದ್ದು, ಅಂಗಿ ಇರಲಿಲ್ಲ ಎಂದು ಸ್ಥಳೀಯ ನಿವಾಸಿ ಕೆ.ಮೊಹಮ್ಮದ್ ನಾಸೀರ್ ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಹೇಳಿಕೆಯ ಆಧಾರದ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಸುಳ್ಯ: ಮಹಿಳೆಗೆ ಆಟೋ ಚಾಲಕನಿಂದ ಲೈಂಗಿಕ ಕಿರುಕುಳ
ಸುಳ್ಯ: ವಿವಾಹಿತ ಮಹಿಳೆಯೊಬ್ಬರಿಗೆ ಆಟೋ ಚಾಲಕ ಲೈಂಗಿಕ ಕಿರುಕುಳ ನೀಡಿರುವ ಘಟನೆ, ಜಯನಗರದಲ್ಲಿ ನಡೆದಿದೆ. ಸುಳ್ಯದಲ್ಲಿ ಆಟೋ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಹಾವೇರಿ ಮೂಲದ ವ್ಯಕ್ತಿಯು, ಹಾವೇರಿ ಮೂಲದ ಪ್ರಸ್ತುತ ಜಯನಗರದಲ್ಲಿ ವಾಸವಾಗಿರುವ ಮಹಿಳೆಯೊಂದಿಗೆ ತಮ್ಮ ಊರಿನವರು ಎನ್ನುವ ಕಾರಣಕ್ಕಾಗಿ ಸಲುಗೆಯನ್ನು ಬೆಳೆಸಿಕೊಂಡಿದ್ದನು ಎನ್ನಲಾಗಿದೆ. ಬಳಿಕ ಆತ ಮಹಿಳೆಯೊಂದಿಗೆ ಸಲುಗೆಯಿಂದಿರುವ ದೃಶ್ಯಗಳನ್ನು ವಿಡಿಯೋ ಮಾಡಿಟ್ಟುಕೊಂಡು, ಕಳೆದೆರಡು ದಿನಗಳ ಹಿಂದೆ ಮಹಿಳೆಯ ಮನೆಯ ಹತ್ತಿರ ಆಗಮಿಸಿ, ಕುಡಿದ ಮತ್ತಿನಲ್ಲಿ ಕತ್ತಿ ಹಿಡಿದುಕೊಂಡು ಗಲಾಟೆ ಮಾಡಿರುವುದರ ಜೊತೆಗೆ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಮಹಿಳೆಗೆ ಅವಮಾನವಾಗುವಂತೆ ಮಾಡುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಬ್ರಹ್ಮಾವರ: ಹೋಂನರ್ಸ್ ನಿಂದ ಲಕ್ಷಾಂತರ ರೂಪಾಯಿ ವಂಚನೆ
ಬ್ರಹ್ಮಾವರ: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರನ್ನು ನೋಡಿಕೊಳ್ಳಲು ಬಂದಿದ್ದ ವ್ಯಕ್ತಿಯು ಲಕ್ಷಾಂತರ ರೂಪಾಯಿ ವಂಚಿಸಿದಾಗ ಘಟನೆ, ಯಡಾಡ್ತಿ ಗ್ರಾಮದ ಸಾಹೇಬ್ರಕಟ್ಟೆಯಲ್ಲಿ ನಡೆದಿದೆ. ಇಲ್ಲಿನ ನಿವಾಸಿಯಾದ ಶ್ರೀನಿವಾಸ ಪೂಜಾರಿ ಎನ್ನುವವರಿಗೆ ಅನಾರೋಗ್ಯದ ಸಮಸ್ಯೆಯಾಗಿದ್ದು, ಅವರನ್ನು ನೋಡಿಕೊಳ್ಳಲೆಂದು ಶ್ರೀನಿವಾಸ್ ಪೂಜಾರಿ ಅವರ ಪತ್ನಿ ಭಾಗ್ಯಲಕ್ಷ್ಮೀ ಅವರು ಉಡುಪಿಯ ಸಂಸ್ಥೆಯೊಂದಕ್ಕೆ ಸಂಪರ್ಕಿಸಿ, 28.000ರೂಪಾಯಿಗಳಷ್ಟು ಹಣವನ್ನು ಮುಂಗಡವಾಗಿ ನೀಡಿದ್ದರು. ಹಣ ಲಭಿಸುತ್ತಿದ್ದಂತೆ ಸಂಸ್ಥೆಯವರು ವ್ಯಕ್ತಿಯೊಬ್ಬರನ್ನು ಶ್ರೀನಿವಾಸ್ ಪೂಜಾರಿ ಅವರನ್ನು ನೋಡಿಕೊಳ್ಳಲು ಕಳುಹಿಸಿಕೊಟ್ಟಿದ್ದರು ಎನ್ನಲಾಗಿದೆ. ಅಲ್ಲದೆ ವ್ಯಕ್ತಿಯು ಜುಲೈ 7ರಂದು ತನಗೆ ತುರ್ತು ಕೆಲಸವಿದೆ ಎಂದು ಮನೆಯವರಿಗೆ ತಿಳಿಸಿ, ಊರಿಗೆ ಹಿಂತಿರುಗಿದ್ದು ಮರಳಿ ಬಂದಿರಲಿಲ್ಲ. ಕಳೆದೆರಡು ದಿನಗಳ ಹಿಂದೆ ಶ್ರೀನಿವಾಸ್ ಪೂಜಾರಿ ಮತ್ತು ಭಾಗ್ಯಲಕ್ಷ್ಮೀ ಅವರು ಹಣವನ್ನು ಪಡೆಯುವ ಸಲುವಾಗಿ, ತಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿ ನೋಡಿದಾಗ ಜೂನ್ ತಿಂಗಳಿನಿಂದ ಜುಲೈ ತಿಂಗಳವರೆಗೆ ಸುಮಾರು 1.60.500 ರೂಪಾಯಿಗಳಷ್ಟು ಹಣವು ಯುಪಿಐ ಮೂಲಕ ಹಂತಹಂತವಾಗಿ ವಿವಿಧ ಖಾತೆಗಳಿಗೆ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಶ್ರೀನಿವಾಸ ಪೂಜಾರಿ ಮನೆಯವರು ವ್ಯಕ್ತಿಯನ್ನು ಕಳುಹಿಸಿಕೊಟ್ಟ ಸಂಸ್ಥೆಗೆ ಸಂಪರ್ಕಿಸಿದಾಗ ವ್ಯಕ್ತಿಯೊಂದಿಗೆ ತಮಗೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಶ್ರೀನಿವಾಸ್ ಪೂಜಾರಿ ಮತ್ತು ಭಾಗ್ಯಲಕ್ಷ್ಮೀ ಅವರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಉಳ್ಳಾಲ: ವಿದ್ಯುತ್ ಆಘಾತಕ್ಕೆ ಒಳಗಾಗಿ ಮೆಸ್ಕಾಂ ಸಿಬ್ಬಂದಿ ಸಾವು
ಉಳ್ಳಾಲ: ಗಾಳಿ ಮಳೆಯ ಪರಿಣಾಮವಾಗಿ ಕೆಲವು ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದ್ದು, ಇದನ್ನು ಸರಿಪಡಿಸಲು ಹೋದ ಸಂದರ್ಭದಲ್ಲಿ ಮೆಸ್ಕಾಂ ಸಿಬ್ಬಂದಿಯೊಬ್ಬರು ಸಾವನ್ನಪ್ಪಿರುವ ಘಟನೆ, ಮಂಗಳವಾರದಂದು ಉಚ್ಚಿಲ ನಯಾಪಟ್ಣ ಎನ್ನುವಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಅಂಬಿಕಾರಸ್ತೆ ಪಿಲಾರುವಿನ ನಿವಾಸಿ ಶೇಖ್ ಜಮೀರ್ ಎಂದು ಗುರುತಿಸಲಾಗಿದೆ. ಮೆಸ್ಕಾಂ ಕಂಪನಿಯಲ್ಲಿ ಲೈನ್ ಮೆನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶೇಖ್ ಜಮೀರ್ ಅವರು, ಉಚ್ಚಿಲ ನಯಾಪಟ್ಣದ ಟ್ರಾನ್ಸ್ ಫಾರ್ಮರ್ ಒಂದರಲ್ಲಿ ವಿದ್ಯುತ್ ಸಂಪರ್ಕದಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ತಮ್ಮ ಸಹೋದ್ಯೋಗಿಯಾದ ಸಂಗಪ್ಪ ಎನ್ನುವವರೊಂದಿಗೆ ದುರಸ್ತಿ ಕಾಮಗಾರಿಯನ್ನು ನಿರ್ವಹಿಸಲು ತೆರಳಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಜಿಒಎಸ್ ಸ್ಥಗಿತಗೊಂಡಿದೆ ಎಂದು ಭಾವಿಸಿದ ಶೇಖ್ ಜಮೀರ್ ಟ್ರಾನ್ಸ್ ಫಾರ್ಮರ್ ಏರಿದ್ದು, ತಕ್ಷಣ ವಿದ್ಯುತ್ ಆಘಾತಕ್ಕೆ ಒಳಗಾಗಿ ಕೆಳಗೆ ಎಸೆಯಲ್ಪಟ್ಟಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಆಸ್ಪತ್ರೆ ತಲುಪುವುದರೊಳಗಾಗಿ ಶೇಖ್ ಜಮೀರ್ ಅವರು ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದರು ಎನ್ನುವ ಸಂಗತಿ ತಿಳಿದುಬಂದಿದೆ.







