ತೀರ್ಥಹಳ್ಳಿ: ಅಡಿಕೆ ನಿಷೇಧ ಹಂತ ತಲುಪಲು ಬಿಜೆಪಿ ಸರ್ಕಾರವೇ ಕಾರಣ. 2001ರಲ್ಲಿ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭ ಅಡಿಕೆ ಕ್ಯಾನ್ಸರ್ ಕಾರಕ ಎಂಬ ವರದಿಯನ್ನು ಸಲ್ಲಿಸಿದೆ. 2017, 2021 ರಲ್ಲಿ ವಿವಿಧ ಇಲಾಖೆಯ ಸಚಿವರು, ಸಂಸದರು ನಿಷೇಧಕ್ಕೆ ಆಗ್ರಹಿಸಿದ್ದಾರೆ. ಆಗ ನಮ್ಮ ಅಡಿಕೆ ಜ್ಞಾನೇಂದ್ರ ಎಲ್ಲಿ ಹೋಗಿದ್ದರು ಎಂದು ಕಾಂಗ್ರೆಸ್ ನಾಯಕ ರಮೇಶ್ ಹೆಗ್ಡೆ ಆರೋಪಿಸಿದ್ದಾರೆ.
ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಅಡಿಕೆ ಬೆಳೆಗಾರರಿಗೆ ನಬಾರ್ಡ್, ರಾಷ್ಟ್ರೀಕೃತ ಬ್ಯಾಂಕ್, ಸಹಕಾರ ಸಂಘದಲ್ಲಿ ಸಾಲ ಸಿಗದಂತೆ ಮಾಡಿದ್ದಾರೆ. ಉತ್ತರ ಭಾರತದ ಅಡಿಕೆ ವ್ಯಾಪಾರಿಗಳ ಲಾಭಕ್ಕಾಗಿ ಬೆಳೆಗಾರರನ್ನು ಬಲಿ ಹಾಕುತ್ತಿದ್ದಾರೆ. ಇಂಡೋನೇಷಿಯಾದ ಅಡಿಕೆ ಶ್ರೀಲಂಕ ಮೂಲಕ ತೆರಿಗೆ ವಂಚಿಸಿ ಮರು ರಪ್ತು ಮಾಡಲಾಗುತ್ತಿದೆ. ಇವೆಲ್ಲ ಅಡಿಕೆ ಜ್ಞಾನೇಂದ್ರಣ್ಣಂಗೆ ಗೊತ್ತಿಲ್ವೆ ಎಂದು ರಮೇಶ್ ಹೆಗ್ಡೆ ಪ್ರಶ್ನಿಸಿದ್ದಾರೆ.
ಭಾರತೀಯ ಸಂಸ್ಕೃತಿಯ ಸಂಕೇತವೂ ಹಾಗೂ ಲಕ್ಷಾಂತರ ರೈತರ ಜೀವನಾಡಿಯೂ ಆಗಿರುವ ಅಡಿಕೆ ಬೆಳೆಗೆ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದ ನೀತಿಗಳಿಂದ ದೊಡ್ಡ ಮಟ್ಟದ ಆತಂಕ ಎದುರಾಗಿದೆ. ಅಡಿಕೆ ಬೆಳೆಗಾರರ ಹಿತ ಕಾಯುತ್ತೇವೆ ಎಂದು ಹೇಳಿಕೊಳ್ಳುವ ರಾಜ್ಯ ಬಿಜೆಪಿ ನಾಯಕರು, ಕೇಂದ್ರದಿಂದ ಅಡಿಕೆ ವಿರುದ್ಧ ಕೈಗೊಳ್ಳಲಾದ ಸಾಲು ಸಾಲು ನಿರ್ಧಾರಗಳ ಬಗ್ಗೆ ನಿಗೂಢ ಮೌನ ತಳೆದಿರುವುದು ಆಘಾತಕಾರಿ.
2001ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದ ತಜ್ಞರ ಸಮಿತಿಯು ಅಡಿಕೆಯನ್ನು ಕ್ಯಾನ್ಸರ್ ಕಾರಕ ಎಂದಿತ್ತು. ಅದನ್ನೇ ಮುಂದುವರಿಸಿ 2017 ಮತ್ತು 2019ರಲ್ಲಿಯೂ ಕೇಂದ್ರ ಆರೋಗ್ಯ ಸಚಿವರು ಸಂಸತ್ತಿನ ಅಧಿವೇಶನದಲ್ಲಿ ಅಡಿಕೆ ಆರೋಗ್ಯಕ್ಕೆ ಹಾನಿಕರ ಎಂದು ಲಿಖಿತ ಹೇಳಿಕೆ ನೀಡಿದಾಗ ರಾಜ್ಯದ ನಾಯಕರು ಧ್ವನಿ ಎತ್ತಲಿಲ್ಲ. 2021ರಲ್ಲಿ ಜಾರ್ಖಂಡ್ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅಡಿಕೆ ನಿಷೇಧಿಸುವಂತೆ ಪ್ರಧಾನಿಗೆ ಮನವಿ ಮಾಡಿದ್ದಲ್ಲದೆ, 2022ರಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅಡಿಕೆ ಬಳಕೆಯ ನಿಷೇಧದ ಕುರಿತು ಸಭೆ ಕರೆದಾಗಲೂ ರಾಜ್ಯ ಬಿಜೆಪಿ ನಾಯಕರು ಅದನ್ನು ಖಂಡಿಸಲಿಲ್ಲ. ಈಗ ರಾಜಕೀಯ ಮಾಡುತ್ತಿದ್ದಾರೆ ಎಂದು ದಾಖಲೆ ಸಮೇತ ಘೋಷಿಸಿದರು.
2021ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಕೃಷಿ ಮಾರಾಟ ಮಾಹಿತಿ ವೆಬ್ಸೈಟ್ನಲ್ಲಿ ಅಡಿಕೆಯನ್ನು ‘ಮಾದಕ ಉತ್ತೇಜಕ’ (Drug) ಪಟ್ಟಿಗೆ ಸೇರಿಸಿ ಅಡಕೆಯ ಗೌರವಕ್ಕೆ ಧಕ್ಕೆ ತಂದಾಗಲೂ ಯಾರೂ ಆಕ್ಷೇಪಿಸಲಿಲ್ಲ. ಇನ್ನೊಂದೆಡೆ ಈಶಾನ್ಯ ರಾಜ್ಯಗಳ ಮೂಲಕ ಬರ್ಮಾ ದೇಶದಿಂದ ಅಕ್ರಮವಾಗಿ ಅಡಿಕೆ ಕಳ್ಳಸಾಗಾಣಿಕೆಯಾಗುತ್ತಿದ್ದು, ಇಂಡೋನೇಷ್ಯಾ ದೇಶದ ಅಡಿಕೆಯನ್ನು ಶ್ರೀಲಂಕಾ ಅಥವಾ ಬಾಂಗ್ಲಾದೇಶದ್ದೆಂದು ಸುಳ್ಳು ದಾಖಲೆ ಸೃಷ್ಟಿಸಿ ದೇಶದೊಳಗೆ ತರಲಾಗುತ್ತಿದೆ. ಇದರಿಂದ ದೇಶೀಯ ಅಡಿಕೆಯ ಬೆಲೆ ತೀವ್ರವಾಗಿ ಕುಸಿಯುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಕೇಂದ್ರ ಸರ್ಕಾರ ತಕ್ಷಣವೇ ಅಕ್ರಮ ಅಡಿಕೆ ಆಮದಿಗೆ ತಡೆ ನೀಡಿ, ದೇಶೀಯ ಅಡಿಕೆ ಬೆಳೆಗಾರರ ಹಿತ ಕಾಪಾಡಬೇಕಿದೆ ಎಂದು ಅಗ್ರಹಿಸಿದರು.







