ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಮತದಾರರಿಗೆ ದಾಖಲೆಗಳನ್ನು ಸಲ್ಲಿಸಲು ಅನುಕೂಲವಾಗಲೆಂದು ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯ ಸಂದರ್ಭದಲ್ಲಿ, ಮನೆಮನೆಗೂ ಜಾತಿ ಪ್ರಮಾಣಪತ್ರವನ್ನು ತಲುಪಿಸುವ ಕುರಿತು ಸರ್ಕಾರವು ನಿರ್ಧಾರವನ್ನು ಕೈಗೊಂಡಿದೆ.
ಹಿಂದಿನ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಮತದಾರರ ಹೆಸರು ಮತ್ತು ಸಂಬಂಧಪಟ್ಟ ಕುಟುಂಬದ ಸದಸ್ಯರ ವಿವರಗಳು ಲಭ್ಯವಾಗದಿದ್ದಲ್ಲಿ ಅಥವಾ ಈಗಾಗಲೇ ಡೇಟಾ ಬೇಸ್ ನಲ್ಲಿ ಇರುವ ಮಾಹಿತಿಗೆ ಹೋಲಿಕೆ ಕಂಡುಬಾರದಿದ್ದಲ್ಲಿ, ಮತದಾರರ ಅರ್ಹತೆಯನ್ನು ಸಾಬೀತುಪಡಿಸುವ ಸಲುವಾಗಿ ಚುನಾವಣಾ ಆಯೋಗವು 11 ದಾಖಲೆಗಳಲ್ಲಿ ಒಂದನ್ನು ಒದಗಿಸುವಂತೆ ಸೂಚನೆಯನ್ನು ನೀಡಿದೆ. ಅವುಗಳಲ್ಲಿ ಜಾತಿ ಪ್ರಮಾಣಪತ್ರ ಕೂಡ ಒಂದಾಗಿದೆ ಎನ್ನುವ ಮಾಹಿತಿ ಲಭಿಸಿದೆ.
ಜಾತಿ ಪ್ರಮಾಣಪತ್ರದೊಂದಿಗೆ ಸಾರ್ವಜನಿಕರಿಗೆ ಶಾಶ್ವತ ನಿವಾಸ ಪ್ರಮಾಣಪತ್ರಗಳನ್ನು ಕೂಡ ವಿತರಿಸುವಂತೆ ಸರ್ಕಾರವು ಕಂದಾಯ ಇಲಾಖೆಯ ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಿದೆ. ಅವುಗಳನ್ನು ಪಡೆದುಕೊಳ್ಳಲು ಸಾರ್ವಜನಿಕರು ಸರ್ಕಾರದ ದಾಖಲೆಯಲ್ಲಿರುವಂತಹ ಮೊಬೈಲ್ ಸಂಖ್ಯೆಗೆ ಲಿಂಕ್ ಅನ್ನು ಕಳುಹಿಸಿ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶವನ್ನು ಕೂಡ ಕಲ್ಪಿಸಲಾಗಿದೆ.
ಕಂದಾಯ ಇಲಾಖೆಯ ಡಾಟಾ ಬೇಸ್ ಮಾಹಿತಿಯ ಪ್ರಕಾರ 4.81ಕೋಟಿ ಜಾತಿ ಪ್ರಮಾಣ ಪತ್ರಗಳ ಪಿಡಿಎಫ್ ಗಳನ್ನು ಜಿಲ್ಲಾವಾರು, ತಾಲ್ಲೂಕುವಾರು ಮತ್ತು ಗ್ರಾಮವಾರು ವಿಂಗಡಣೆಯನ್ನು ಮಾಡಿ, ಬಳಿಕ ಅವುಗಳನ್ನು ಅಟಲ್ ಜೀ ಜನಸ್ನೇಹಿ ನಿರ್ದೇಶನಾಲಯದಿಂದ ಜಿಲ್ಲಾಧಿಕಾರಿಗಳಿಗೆ ನೀಡುವಂತಿದ್ದು, ಬಳಿಕ ಅವುಗಳನ್ನು ಮುದ್ರಿಸುವಂತೆ ಆದೇಶವನ್ನು ನೀಡಿದ್ದಾರೆ. ಇದರೊಂದಿಗೆ ಮುದ್ರಣಗಳ ಪ್ರತಿಗಳಿಗೆ 2.22ರೂಪಾಯಿಗಳಷ್ಟು ದರವನ್ನು ನಿಗದಿಪಡಿಸುವಂತೆ ಕಂದಾಯ ಇಲಾಖೆಯು ಷರತ್ತನ್ನು ವಿಧಿಸಿದೆ. ಜಾತಿ ಪ್ರಮಾಣಪತ್ರದೊಂದಿಗೆ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ನೀಡಿರುವ ಜಾಗೃತಿ ಸಂದೇಶ ಹಾಗೂ ದಾಖಲಾತಿಗಳ ಪಟ್ಟಿಯನ್ನು ಮುದ್ರಿಸಿ ಹಂಚಿಕೆ ಮಾಡಲು ಕಂದಾಯ ಇಲಾಖೆಯು ನಿರ್ಧರಿಸಿದ್ದು, ಸಾರ್ವಜನಿಕರಿಗೆ ಜಾತಿ ಪ್ರಮಾಣಪತ್ರಗಳನ್ನು ವಿತರಿಸಿದ ಬಳಿಕ, ಅವುಗಳ ಸ್ವೀಕೃತಿಯನ್ನು ಪಡೆಯಲು ಮೊಬೈಲ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗುವುದು. ಆ್ಯಪ್ ನಲ್ಲಿ ಮೊಬೈಲ್ ಅಥವಾ ಆಧಾರ್ ಸಂಖ್ಯೆಯನ್ನು ನಮೂದಿಸುವ ಮೂಲಕ ಜಾತಿ ಪ್ರಮಾಣ ಪತ್ರವನ್ನು ವಿತರಿಸಿರುವ ಕುರಿತು ಖಚಿತ ಮಾಹಿತಿಯನ್ನು ಸಂಬಂಧಿತ ಅಧಿಕಾರಿಗಳು ನೀಡಬೇಕೆಂದು ಸರ್ಕಾರವು ಆದೇಶ ಹೊರಡಿಸಿದೆ.
ಪಿಎಂ ಕಿಸಾನ್ ಇನ್ನೂ 5ವರ್ಷಕ್ಕೆ ವಿಸ್ತರಣೆ
ನವದೆಹಲಿ: ದೇಶದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲೆಂದು, ರೈತರಿಗೆ ಪ್ರತಿ ವರ್ಷ 6.000ರೂಪಾಯಿ ನೀಡುವಂತಹ ಕೇಂದ್ರ ಸರ್ಕಾರ ರೂಪಿತ ‘ಪಿಎಂ ಕಿಸಾನ್’ ಯೋಜನೆಯನ್ನು ಇನ್ನೂ 5 ವರ್ಷಗಳ ಕಾಲ ಮುಂದುವರಿಸುವ ಕುರಿತು ನಿರ್ಧಾರಿಸಲಾಗಿದೆ. ಇತ್ತೀಚಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು. ಪಿಎಂ ಕಿಸಾನ್ ಯೋಜನೆಯನ್ನು 2030-31ರವರೆಗೂ ಜಾರಿಗೊಳಿಸುವ ನಿಟ್ಟಿನಲ್ಲಿ 3.15.೦೦.೦೦೦ ರೂಪಾಯಿಗಳಷ್ಟು ವಿನಿಯೋಗಿಸಲು ಸರ್ಕಾರವು ತೀರ್ಮಾನಿಸಿದೆ. ಬರಗಾಲ ಸೇರಿದಂತೆ ಅನೇಕ ಪ್ರಾಕೃತಿಕ ವೈಪರೀತ್ಯದ ಕಾರಣದಿಂದ ಈಗಾಗಲೇ ಚಿಂತೆಗೊಳಗಾಗಿರುವ ರೈತರಿಗೆ ಈ ನಿರ್ಣಯವು ಕೊಂಚ ಮಟ್ಟಿಗೆ ನಿರಾಳತೆಯನ್ನುಂಟು ಮಾಡಿದೆ.
ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರ ಬಲೆಗೆ ಬಿದ್ದ ಎಸಿ!
ಮೈಸೂರು: ಕಂದಾಯ ಮೇಲ್ಮನವಿಯನ್ನು ಇತ್ಯರ್ಥಪಡಿಸಲು ಲಂಚವನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ಹುಣಸೂರು ಉಪವಿಭಾಗಾಧಿಕಾರಿ ಲೋಕಾಯುಕ್ತರ ಎದುರಿನಲ್ಲಿ ಸಿಲುಕಿಕೊಂಡ ಘಟನೆ, ಸೋಮವಾರದಂದು ನಡೆದಿದೆ. ಎಚ್.ಡಿ.ಕೋಟೆ ತಾಲ್ಲೂಕಿನ ಸರ್ವೇ ನಂಬರ್ 17/26ರಲ್ಲಿರುವ 4ಎಕರೆ 20 ಗುಂಟೆ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಮೇಲ್ಮನವಿಯನ್ನು ಇತ್ಯರ್ಥಪಡಿಸಲು ನ್ಯಾಯಾಲಯದಿಂದ ಆದೇಶವಿದ್ದು, ಕಾವ್ಯಾರಾಣಿ 10ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅದರಂತೆ ಡಾ.ರೂಪಾ ಎನ್ನುವವರು ಮೊದಲ ಕಂತಿನಲ್ಲಿ 5.00.000ರೂಪಾಯಿ ನೀಡಿದ್ದರು. ಬಳಿಕ ರೂಪ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಎರಡನೇ ಕಂತಿನ 5.50ಲಕ್ಷ ರೂಪಾಯಿ ಹಣವನ್ನು, ರೂಪಾ ಅವರಿಂದ ಕಾವ್ಯಾರಾಣಿ ಸ್ವೀಕರಿಸುತ್ತಿದ್ದ ಸಮಯದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಕಾವ್ಯಾರಾಣಿ ಅವರನ್ನು ಬಂಧಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.







