ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
* ಭದ್ರಾವತಿ: ಮೇಕೆ ಕಳ್ಳನ ಬಂಧನ
ಭದ್ರಾವತಿ: ಮೇಕೆಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿರುವ ಘಟನೆ ಭದ್ರಾವತಿಯ ಬಾರಂದೂರು ಗ್ರಾಮದಲ್ಲಿ ನಡೆದಿದೆ. ಬಾರಂದೂರಿನ ನಿವಾಸಿಯಾದ ಮನಿಯ ಎನ್ನುವವರಿಗೆ ಸೇರಿದ್ದ ಸುಮಾರು 90.೦೦.೦೦೦ ರೂಪಾಯಿಗಳಷ್ಟು ಬೆಲೆಬಾಳುವ, 6 ಮೇಕೆಗಳನ್ನು ಆರೋಪಿಯು ಕಳ್ಳತನ ಮಾಡಿದ್ದನು. ಇದಕ್ಕೆ ಸಂಬಂಧಿಸಿದಂತೆ ಮನಿಯ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಠಾಣೆಯ ಎಸ್ಐ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಎಎಸ್ಐ ಕುಮಾರ್ ಹಾಗೂ ಕ್ರೈಂ ವಿಭಾಗದ ಸಿಬ್ಬಂದಿಗಳಾದ ನಾಗರಾಜ್, ಬಸವರಾಜ್ ಮತ್ತು ಭರತ್ ಅವರನ್ನು ಒಳಗೊಂಡ ವಿಶೇಷ ತಂಡವೊಂದರ ರಚನೆಯಾಗಿ, ಕಾರ್ಯಾಚರಣೆಯನ್ನು ಕೈಗೊಂಡು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಈ ಸಂದರ್ಭದಲ್ಲಿ ಆರೋಪಿಯ ಬಳಿಯಿದ್ದ ಸುಮಾರು 70.000 ರೂಪಾಯಿ ಮೌಲ್ಯದ 5 ಮೇಕೆಗಳನ್ನು ಪೊಲೀಸರು ವಶಪಡಿಸಿಕೊಂಡರು ಎನ್ನುವ ಮಾಹಿತಿ ಲಭಿಸಿದೆ.
•ಹೊಳೆಹೊನ್ನೂರು: ಕೌಟುಂಬಿಕ ಕಲಹ; ಮಗನಿಂದ ತಂದೆಯ ಹತ್ಯೆ
ಹೊಳೆಹೊನ್ನೂರು: ಕೌಟುಂಬಿಕ ಕಲಹದಲ್ಲಿ ಮಗನೊಬ್ಬ ತನ್ನ ತಂದೆಯನ್ನು ಹತ್ಯೆ ಮಾಡಿರುವ ಘಟನೆ, ಭಾನುವಾರದಂದು ಅರಸನಘಟ್ಟ ಗ್ರಾಮದಲ್ಲಿ ನಡೆದಿದೆ. ಶಿವಗನಾಯ್ಕ ಎನ್ನುವವರು ಕಳೆದ ಎರಡು ವರ್ಷಗಳ ಹಿಂದೆ ಹೊಸ ಮನೆಯೊಂದನ್ನು ಕಟ್ಟಿಸಿ, ಪತ್ನಿ, ಮಕ್ಕಳು ಮತ್ತು ಸೊಸೆಯಂದಿರ ಜೊತೆಗೆ ವಾಸವಾಗಿದ್ದರು. ಮನೆಯನ್ನು ಕಟ್ಟಲು ಮತ್ತು ಮಕ್ಕಳ ಮದುವೆ ಮಾಡುವ ಸಲುವಾಗಿ ಸಾಲ ಮಾಡಿಕೊಂಡಿದ್ದ ಶಿವಗನಾಯ್ಕ ಆ ವಿಚಾರವಾಗಿ ಹೆಂಡತಿ ಮತ್ತು ಮಕ್ಕಳೊಂದಿಗೆ ಜಗಳವಾಡುತ್ತಿದ್ದನು ಎನ್ನಲಾಗಿದೆ. ಇದರ ನಡುವೆ ಶಿವಗನಾಯ್ಕ ಹೆಂಡತಿ ಮತ್ತು ಮಕ್ಕಳನ್ನು ಹೊಸ ಮನೆಯಿಂದ ಹೊರಗೆ ಹಾಕಿದ್ದನು ಎನ್ನುವ ಮಾಹಿತಿ ಲಭಿಸಿದೆ. ಅಷ್ಟೇ ಅಲ್ಲದೆ ಭಾನುವಾರದಂದು ರಾತ್ರಿ ಹೆಂಡತಿ ಮತ್ತು ಮಕ್ಕಳು ವಾಸವಾಗಿದ್ದ ಹಳೆಯ ಮನೆಯ ಹತ್ತಿರ ಬಂದು, ಪುನಃ ಜಗಳ ಪ್ರಾರಂಭಿಸಿದ್ದಾನೆ. ಇದನ್ನು ತಡೆಗಟ್ಟಲು ಮುಂದಾದ ಮಗ ಮಂಜುನಾಯ್ಕ ತಂದೆಯ ಕುತ್ತಿಗೆಗೆ ಕೈಹಾಕಿ ಬಿಗಿಯಾಗಿ ಹಿಡಿದುಕೊಂಡಿದ್ದಾನೆ. ಬಿಗಿಹಿಡಿದ ಪರಿಣಾಮವಾಗಿ ಶಿವಗನಾಯ್ಕನಿಗೆ ಉಸಿರು ಕಟ್ಟಿದಂತಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮಂಜುನಾಯ್ಕ ವಿರುದ್ಧ ಬಿಎನ್ಎಸ್ 103(1)ರ ಅಡಿಯಲ್ಲಿ ಹೊಳೆಹೊನ್ನೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
•ಸಾಗರ: ಟೈರ್ ಸುಟ್ಟು ಅಭಿಮಾನಿಗಳ ಆಕ್ರೋಶ
ಸಾಗರ: ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ತಮಗೆ ಮಂತ್ರಿ ಸ್ಥಾನ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ಹಲವರಿಗೆ ಬೇಸರ ಉಂಟಾಗಿದ್ದು, ಅವರ ಅನುಯಾಯಿಗಳು ಮತ್ತು ಅಭಿಮಾನಿಗಳು ಬಂಡಾಯವೆದ್ದಿದ್ದಾರೆ. ಇನ್ನು ಬಹುನಿರೀಕ್ಷೆಯಲ್ಲಿದ್ದ ಸಾಗರ/ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರಿಗೂ ಮಂತ್ರಿ ಸ್ಥಾನ ತಪ್ಪಿರುವುದು ಕ್ಷೇತ್ರದ ಜನರಲ್ಲಿ ಮತ್ತು ಅವರ ಅಭಿಮಾನಿಗಳಲ್ಲಿ ತೀವ್ರ ರೀತಿಯ ಬೇಸರವನ್ನುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಸಾಗರದ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ನೆರೆದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೇಳೂರು ಗೋಪಾಲಕೃಷ್ಣ ಅವರ ಅಭಿಮಾನಿಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವುದರ ಮೂಲಕ, ಟೈರ್ ಗೆ ಬೆಂಕಿ ಹಚ್ಚಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಸಾಗರ ಮತ್ತು ಹೊಸನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಲೇಬೇಕೆಂದು ಪ್ರತಿಭಟನಾಕಾರರು ಈ ಮೂಲಕ ಆಗ್ರಹಪಡಿಸಿದರು. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಾಗರ ಠಾಣೆಯ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಮವನ್ನು ಕೈಗೊಂಡರು ಎನ್ನುವ ಸಂಗತಿ ತಿಳಿದುಬಂದಿದೆ.
•ಶಿವಮೊಗ್ಗ: ಅಪಘಾತದಲ್ಲಿ ಮೂರು ತುಂಡಾದ ಕಾರು; ಚಾಲಕ ಸಾವು
ಶಿವಮೊಗ್ಗ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ, ಮರಕ್ಕೆ ಢಿಕ್ಕಿ ಹೊಡೆದ ಘಟನೆ, ಮಂಗಳವಾರ ಬೆಳಿಗ್ಗೆ , ಹೊರವಲಯದ ಬಿ.ಎಚ್ ರಸ್ತೆಯ ಸಕ್ಕರೆ ಕಾರ್ಖಾನೆಯ ಸಮೀಪದಲ್ಲಿ ನಡೆದಿದೆ. ಪರಿಣಾಮವಾಗಿ ಕಾರಿನ ಬಿಡಿ ಭಾಗಗಳು ಚೆಲ್ಲಾಪಿಲ್ಲಿಯಾಗಿ ಮೂರು ತುಂಡುಗಳಾಗಿದೆ. ಅಪಘಾತದ ತೀವ್ರತೆಗೆ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ಮೃತ ದುರ್ದೈವಿಯನ್ನು ಸೀಗೆಹಟ್ಟಿ ನಿವಾಸಿ 21 ವರ್ಷದ ಗುರುರಾಜ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ನಗರ ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







